ಮುರಳಿ ಆರ್
ಎಡಪಂಥೀಯ ಉಗ್ರವಾದದ (Left Wing Extremism) ನಿರ್ಮೂಲನೆಯತ್ತ ಗೃಹ ಸಚಿವ ಅಮಿತ್ ಶಾರವರ ಪ್ರಯತ್ನಗಳು ಉತ್ತೇಜಕ ಫಲಿತಾಂಶಗಳನ್ನು ನೀಡುತ್ತಿವೆ. ಪರಿಣಾಮವೆಂಬಂತೆ ಎಡಪಂಥೀಯ ಉಗ್ರವಾದದ ಹಿಂಸಾಚಾರಗಳನ್ನೊಳಗೊಂಡ ಘಟನೆಗಳು ಮತ್ತು ಸಂಬಂಧಿತ ಸಾವುಗಳು ನಿರಂತರವಾಗಿ ಕ್ಷೀಣಿಸುತ್ತಿವೆ. ಒಂದು ರೀತಿಯಲ್ಲಿ, ಈ ಪಿಡುಗಿನ ವಿರುದ್ಧದ ಅವರ ದೃಢವಾದ ಹೋರಾಟವು ವಿಜಯದ ಅಂತಿಮ ಹಂತ ತಲುಪಿದೆ.
ಅಧಿಕಾರ ವಹಿಸಿಕೊಂಡ ನಂತರ, ಶಾರವರು 2015 ರ ರಾಷ್ಟ್ರೀಯ ನೀತಿ ಮತ್ತು ಕ್ರಿಯಾ ಯೋಜನೆಯಲ್ಲಿ ವಿವರಿಸಿರುವ ನೀತಿಗಳ ಅನುಷ್ಠಾನವನ್ನು, ಮೇಲ್ವಿಚಾರಣೆಯನ್ನು ನಿಯಮಿತವಾಗಿ ಮಾಡುತ್ತಿದ್ದಾರೆ. ಇದು ರಾಷ್ಟ್ರದಾದ್ಯಂತ ಎಡಪಂಥೀಯ ಉಗ್ರವಾದದ ಹಿಂಸಾಚಾರದಲ್ಲಿ ಸ್ಥಿರವಾದ ಇಳಿಕೆಗೆ ಕಾರಣವಾಗಿದೆ. ಭದ್ರತಾ-ಸಂಬಂಧಿತ ಕ್ರಮಗಳು, ಅಭಿವೃದ್ಧಿ ಯೋಜನೆಗಳು, ಸ್ಥಳೀಯ ಸಮುದಾಯಗಳ ಹಕ್ಕುಗಳು ಮತ್ತು ಅರ್ಹತೆಗಳನ್ನು ಖಾತರಿಪಡಿಸುವುದು ಇತ್ಯಾದಿಗಳನ್ನು ಒಳಗೊಂಡ ಬಹು-ಹಂತದ ಕಾರ್ಯತಂತ್ರಗಳನ್ನು ಈ ನೀತಿಯು ರೂಪಿಸುತ್ತದೆ. ಹಾಗೇ ಎಡಪಂಥೀಯ ಗುಂಪುಗಳ ಹಣಕಾಸಿನ ಮೂಲಗಳನ್ನು ನಿರ್ಬಂಧಿಸಲು ಶಾ NIA ಮತ್ತು ED ಮೂಲಕ ಕಠಿಣ ಕ್ರಮಗಳನ್ನು ಪ್ರಾರಂಭಿಸಿದರು.
ಅಧಿಕೃತ ಮಾಹಿತಿ ಪ್ರಕಾರ, 2010 ಕ್ಕೆ ಹೋಲಿಸಿದರೆ 2022 ರಲ್ಲಿ ಎಡಪಂಥೀಯ ಸಂಬಂಧಿತ ಹಿಂಸಾತ್ಮಕ ಘಟನೆಗಳ ಸಂಖ್ಯೆಯು 77% ರಷ್ಟು ಕಡಿಮೆಯಾಗಿದೆ. ಅದರೊಂದಿಗೆ ಸಾವಿನ ಸಂಖ್ಯೆಯಲ್ಲಿ (ಭದ್ರತಾ ಪಡೆಗಳು ಮತ್ತು ನಾಗರಿಕರನ್ನು ಒಟ್ಟುಗೂಡಿಸಿ) 90% ರಷ್ಟು ಕಡಿಮೆಯಾಗಿದೆ. 2010ರಲ್ಲಿ ಗರಿಷ್ಠ 1,005 ಕ್ಕೆ ತಲುಪಿದ್ದ ಸಾವಿನ ಸಂಖ್ಯೆ, 2022 ರಲ್ಲಿ 98 ಕ್ಕೆ ಇಳಿಮುಖವಾಗಿದೆ. ಭೌಗೋಳಿಕವಾಗಿ ಹಿಂಸಾಚಾರ ಹರಡುವಿಕೆಯು ಕೂಡ ಗಮನಾರ್ಹವಾಗಿ ಕಡಿಮೆಯಾಗಿದೆ. 2010 ರಲ್ಲಿ 96 ಜಿಲ್ಲೆಗಳಲ್ಲಿನ 465 ಪೊಲೀಸ್ ಠಾಣೆಗಳಲ್ಲಿ ಹಿಂಸಾಚಾರದ ಘಟನೆಗಳು ದಾಖಲಾಗಿದ್ದರೆ, 2022 ರಲ್ಲಿ ಕೇವಲ 45 ಜಿಲ್ಲೆಗಳ 176 ಪೊಲೀಸ್ ಠಾಣೆಗಳಲ್ಲಿ ಎಡಪಂಥೀಯ ಹಿಂಸಾಚಾರ ಘಟನೆಗಳ ವರದಿಯಾಗಿದೆ.
ಭೌಗೋಳಿಕ ಹಿಂಸಾಚಾರ ಹರಡುವಿಕೆಯ ಕುಸಿತವು ಭದ್ರತಾ ಸಂಬಂಧಿತ ವೆಚ್ಚಗಳ (SRE) ಯೋಜನೆಯಡಿಯಲ್ಲಿನ ಜಿಲ್ಲೆಗಳ ಸಂಖ್ಯೆಯ ಕುಸಿತದಲ್ಲಿ ಪ್ರತಿಫಲಿಸುತ್ತದೆ. SRE ವ್ಯಾಪ್ತಿಯಲ್ಲಿನ ಜಿಲ್ಲೆಗಳ ಸಂಖ್ಯೆಯು ಏಪ್ರಿಲ್ 2018 ರಲ್ಲಿ 126 ರಿಂದ 90 ಕ್ಕೆ ಕ್ಷೀಣಿಸಿದರೆ, ಜುಲೈ 2021 ರಲ್ಲಿ 70 ಕ್ಕೆ ಇಳಿಕೆಯಾಗಿದೆ.
ತಮ್ಮ ಸಚಿವಾಲಯದಲ್ಲಿ, ಶಾ ಎಡಪಂಥೀಯ ಸ್ಥಿತಿಗತಿಗಳನ್ನು ಪರಿಶೀಲಿಸಲು ನಿಯಮಿತವಾಗಿ ಪರಿಶೀಲನಾ ಸಭೆಗಳನ್ನು ನಡೆಸುತ್ತಾರೆ. ವಿವಿಧ ಯೋಜನೆಗಳ ಅಡಿಯಲ್ಲಿ ಎಡಪಂಥೀಯ ಉಗ್ರಗಾಮಿಗಳಿಂದ ಭಾಧಿತವಾಗಿದ್ದ ವಿವಿಧ ಪ್ರದೇಶಗಳಲ್ಲಿನ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಮತ್ತು ಮೇಲ್ವಿಚಾರಣೆ ನಡೆಸಲು ಇತರ ಹಿರಿಯ ಅಧಿಕಾರಿಗಳೊಂದಿಗೆ ನಿಯಮಿತವಾಗಿ ಸಭೆಗಳನ್ನು ಮತ್ತು ಭೇಟಿಗಳನ್ನು ಕೈಗೊಳ್ಳುತ್ತದೆ. (ಇಲ್ಲಿರುವ ಮಾಹಿತಿ/ಅಭಿಪ್ರಾಯಗಳು ಲೇಖಕರದ್ದು)
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ