*ಎಸ್.ಸಿ-ಎಸ್.ಟಿ ಅನುದಾನ ದುರ್ಬಳಕೆ ತಡೆಗೆ ಕಾನೂನು ಕ್ರಮ: ಡಿಸಿ ಮೊಹಮ್ಮದ್ ರೋಷನ್*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಎಸ್.ಸಿ-ಎಸ್.ಟಿ ಅನುದಾನ ದುರ್ಬಳಕೆಯಾಗುತ್ತಿರುವ ಸಾಕಷ್ಟು ಆರೋಪಗಳು ಕೇಳಿ ಬರುತ್ತಿದ್ದು, ಗ್ರಾಮ ಪಂಚಾಯತಿ, ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಪಾಲಿಕೆಯಲ್ಲಿ ಎಸ್.ಸಿ.ಪಿ- ಟಿ.ಎಸ್.ಪಿ ಅನುದಾನ ದುರ್ಬಳಕೆಯಾಗದಂತೆ ನಿಗದಿತ ಅವಧಿಯೊಳಗೆ ಸಮರ್ಪಕ ಬಳಕೆಯಾಗಬೇಕು. ಒಂದುವೇಳೆ ದುರ್ಬಳಕೆ ಪ್ರಕರಣ ಕಂಡು ಬಂದಲ್ಲಿ ಕಾಯ್ದೆಯಡಿ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಎಚ್ಚರಿಕೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಸೋಮವಾರ (ಮಾ.24) ನಡೆದ ಎಸ್.ಸಿ-ಎಸ್.ಟಿ ದೌರ್ಜನ್ಯ ನಿಯಂತ್ರಣ, ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬೆಳವಡಿ ಗ್ರಾಮದಲ್ಲಿ ಜಮೀನು ಮಂಜೂರಾತಿಗೆ ಈಗಾಗಲೇ ಲೋಕೋಪಯೋಗಿ ಇಲಾಖೆ ಜಮೀನು ಗುರುತಿಸಲಾಗಿದೆ ಅದರ ಪಕ್ಕದ ಜಮೀನು ಮಾಲೀಕ ತಮ್ಮ ಸ್ವಂತ ಜಾಗೆ ಒತ್ತುವರಿಯಾಗಿದೆ ಎಂದು ನ್ಯಾಯಾಲಯದ ಮೊರೆ ಹೋಗಿದ್ದು, ನ್ಯಾಯಾಲಯದ ಹಂತದಲ್ಲಿ ಪ್ರಕರಣ ಇತ್ಯರ್ಥದ ಬಳಿಕ ಭೂಮಿ ಮಂಜೂರಾತಿಗೆ ಕ್ರಮ ವಹಿಸಲಾಗುವುದು ಎಂದು ಸೂಚಿಸಿದರು.
ಸ್ಮಶಾನ ಭೂಮಿ ಮಂಜೂರಾತಿಗೆ ಇಲಾಖೆಯ ವತಿಯಿಂದ ಬೇರೆ ಮಾಲ್ಕಿ ಜಾಮೀನು ಖರೀದಿಗೆ ಕ್ರಮ ವಹಿಸಲಾಗುವುದು. ಎಲ್ಲ ಇಲಾಖೆಗಳಲ್ಲಿ 24.1% ಪ್ರತಿಶತ ಅನುದಾನ ಸಮರ್ಪಕವಾಗಿ ಬಳಕೆ ಆಗಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಹೇಳಿದರು.
ಬೆಳಗಾವಿ ಮಹಾನಗರ ಪಾಲಿಕೆಯ ವಾರ್ಡಗಳಲ್ಲಿ ಶೇಕಡಾ 50% ಜನ ಎಸ್.ಸಿ. /ಎಸ್.ಟಿ. ಜನರು ಇದ್ದರೆ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕರು ಡಿಕ್ಲೇರ್ ಮಾಡಿದ ನಂತರ ಅದು ಎಸ್.ಸಿ ಎಸ್.ಟಿ ಕಾಲನಿ ಎಂದು ಪತ್ರ ನೀಡಿದ ಬಳಿಕ ವಾರ್ಡುಗಳ ವಿಂಗಡನೆ ಮಾಡಿ, ಅನುದಾನ ಬಳಕೆಗೆ ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಹೇಳಿದರು.
ಪೌರಕಾರ್ಮಿಕರಿಗೆ ಪರಿಕರ ವಿತರಣೆ
ಮಹಾನಗರ ಪಾಲಿಕೆ ವತಿಯಿಂದ ಎಸ್.ಸಿ/ಎಸ್.ಟಿ ಕಾಲನಿಗಳಲ್ಲಿ ರಸ್ತೆ ನಿರ್ಮಾಣ, ಶೌಚಾಲಯ ಸೇರಿದಂತೆ ಅಗತ್ಯ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಮಹಾನಗರ ಪಾಲಿಕೆ ಉಪ ಆಯುಕ್ತ ಉದಯಕುಮಾರ ತಳವಾರ ಮಾಹಿತಿ ನೀಡಿದರು.
ಮಹಾನಗರ ಪಾಲಿಕೆ ವತಿಯಿಂದ ಪೌರಕಾರ್ಮಿಕರಿಗೆ ಸುರಕ್ಷಿತ ಪರಿಕರಗಳನ್ನು ವಿತರಿಸಲು ಈಗಾಗಲೇ ಸಭೆಯಲ್ಲಿ ಚರ್ಚೆ ಆಗಿತ್ತು ಅದರಂತೆ ಮಹಾನಗರ ಪಾಲಿಕೆ ಪೌರ ಕಾರ್ಮಿಕರಿಗೆ ಅಗತ್ಯ ಪರಿಕರಗಳನ್ನು ವಿತರಿಸಲಾಗಿದೆ. ಇನ್ನೂ ಕೆಲವು ಪೌರಕಾರ್ಮಿಕರಿಗೆ ಮಾತ್ರ ವಿತರಣೆ ಬಾಕಿಯಿದ್ದು ಕೂಡಲೇ ವಿತರಿಸಲಾಗುವುದು ಎಂದು ಉದಯಕುಮಾರ ತಳವಾರ ಹೇಳಿದರು.
ದೌರ್ಜನ್ಯ ನಿಯಂತ್ರಣಕ್ಕೆ ಹೆಚ್ಚಿನ ಜಾಗೃತಿ ಕಾರ್ಯಕ್ರಮ ಗಳಾಗಬೇಕು
ದಲಿತ ಸಮುದಾಯಗಳ ಮುಖಂಡ ಮಲ್ಲೇಶ ಚೌಗಲಾ ಮಾತನಾಡಿ, ಬೆಳಗಾವಿ ಜಿಲ್ಲೆಯಲ್ಲಿ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿದ್ದು, ಜಾಗೃತಿ ಕಾರ್ಯಕ್ರಮಗಳು ಆಯೋಜನೆ ಮಾಡಬೇಕು. ಗ್ರಾಮೀಣ ಭಾಗದಲ್ಲಿ ಇಂತಹ ಅನೇಕ ಪ್ರಕರಣಗಳು ನಡೆಯುತ್ತಿವೆ. ಪ್ರತಿ ತಾಲೂಕು ಪಂಚಾಯತಿ ವ್ಯಾಪ್ತಿಯಲ್ಲಿ ಸಭೆ ಆಯೋಜಿಸಿ ಆಯಾ ತಾಲೂಕು ಅಧ್ಯಕ್ಷರನ್ನು ಕರೆದು ಜಾಗೃತಿ ಮೂಡಿಸಲು ಸೂಚಿಸಬೇಕು ಎಂದು ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ ಮಾತನಾಡಿ, ಕಳೆದ ಸಭೆಯಲ್ಲಿ ಚರ್ಚಿಸಿದಂತೆ ಗ್ರಾಮೀಣ ಭಾಗದಲ್ಲಿ ಮಾದಕ ದ್ರವ್ಯ ಸೇವನೆ ಕುರಿತು ಪ್ರಕರಣಗಳನ್ನು ಪತ್ತೆ ಹಚ್ಚಿ, ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪೊಲೀಸ್ ಇಲಾಖೆಯಿಂದ ಶಾಲಾ-ಕಾಲೇಜುಗಳಲ್ಲಿ ಜಾಗೃತಿ ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತಿದೆ ಎಂದು ಹೇಳಿದರು.
ಜಿಲ್ಲಾ ದೌರ್ಜನ್ಯ ನಿಯಂತ್ರಣ ಸಮಿತಿಯ ನಾಮ ನಿರ್ದೇಶಿತ ಸದಸ್ಯ ಕರೆಪ್ಪ ಗುಡೇನ್ನವರ ಮಾತನಾಡಿ, ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದಲ್ಲಿ ಎಸ್.ಸಿ ಎಸ್.ಟಿ ಅನುದಾನ ದುರ್ಬಳಕೆ, ದೌರ್ಜನ್ಯ ಪ್ರಕರಣಗಳು ಕುರಿತು ದೂರುಗಳು ನೀಡಿದಾಗ ತ್ವರಿತವಾಗಿ ತನಿಖೆಯಾಗಿ ವರದಿಗಳು ಬರುತ್ತಿಲ್ಲ. ಬಹಳಷ್ಟು ವಿಳಂಬವಾಗುತ್ತಿದೆ ಹಾಗಾಗಿ ಕೂಡಲೇ ಅಂತಹ ದೂರುಗಳನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ವಿನಂತಿಸಿದರು.
ಎಸ್.ಸಿ-ಎಸ್.ಟಿ ನಿಯಮಾನುಸಾರ ಮುಂಬಡ್ತಿ ಕ್ರಮ
ಅರಣ್ಯ ಇಲಾಖೆಯಲ್ಲಿ ಎಸ್.ಸಿ ಎಸ್.ಟಿ ನೌಕರಿಗೆ ಬ್ಯಾಕ್ ಲಾಗ್ ಹುದ್ದೆ ಮತ್ತು ಮುಂಬಡ್ತಿ ನೀಡದೆ ಅನ್ಯಾಯ ಎಸಗಲಾಗುತ್ತಿದೆ. ಈ ಕುರಿತು ಅರ್ಹರಿದ್ದು, ಅನ್ಯಾಯವಾಗುತ್ತಿದೆ. ಬಳಿಕ ನ್ಯಾಯಾಲಯದ ಮೊರೆ ಹೋಗಿ 2-3 ವರ್ಷಗಳ ನಂತರ ಕೋರ್ಟ್ ಆದೇಶದಂತೆ ನ್ಯಾಯ ಸಿಗುತ್ತಿದೆ ಆದರೆ ಅಲ್ಲಿಯವರೆಗೂ ಕಾಲಹರಣವಾಗುತ್ತಿದೆ ಎಂದು ಕರೆಪ್ಪ ಗುಡೇನ್ನವರ ಹೇಳಿದರು.
ಜೇಷ್ಠತಾ ಪಟ್ಟಿ ಅನ್ವಯ ಮುಂಬಡ್ತಿ ಮತ್ತು ಅರ್ಹತೆ ಅನ್ವಯ ಬ್ಯಾಕ್ ಲಾಗ್ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಒಂದುವೇಳೆ ನಿಯಮ ಉಲ್ಲಂಘನೆ ಪ್ರಕರಣಗಳು ಇದ್ದಲ್ಲಿ, ಪರಿಶೀಲಿಸಿ ಕೂಡಲೇ ಕಾನೂನು ರೀತ್ಯಾ ಕ್ರಮ ಜರುಗಿಸಲು ಸೂಚನೆ ನೀಡಲಾಗುವುದು ಎಂದು ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರಯ, ಮಾನದಂಡಗಳ ಆಧಾರಿತ ಆಯ್ಕೆಗೆ, ಸುಳ್ಳು ಪ್ರಮಾಣ ಪತ್ರಗಳ ಪರಿಶೀಲನೆಗಾಗಿ ರಾಜ್ಯ ಮಟ್ಟದ ಆಯ್ಕೆ ಸಮಿತಿಗೆ ಪತ್ರ ಬರೆದು, ನಿಯಮಾನುಸಾರ ಮುಂಬಡ್ತಿ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.
ಜಿಲ್ಲೆಯಲ್ಲಿ ನಗರ ವ್ಯಾಪ್ತಿಯಲ್ಲಿ ದೌರ್ಜನ್ಯಕ್ಕೊಳಗಾದ ಸಂತ್ರಸ್ತರಿಗೆ ಪರಿಹಾರ ವಿತರಣೆ ವಿತರಿಸಲಾಗಿದೆ.
ಜಿಲ್ಲಾ ದೌರ್ಜನ್ಯ ನಿಯಂತ್ರಣ ಜಾಗೃತಿ, ಉಸ್ತುವಾರಿ ಸಮಿತಿ ಸಭೆಯ ಪ್ರತಿ ಸದಸ್ಯರಿಗೆ ಗೌರವಧನ ನೀಡಬೇಕು ಎಂದು ಸರ್ಕಾರದಿಂದ ಆದೇಶ ಹೊರಡಿಸಿದ್ದು, ಭತ್ಯೆ ನೀಡಲಾಗುವುದು ಎಂದು ಸಮಾಜ ಕಲ್ಯಾಣ ಜಂಟಿ ನಿರ್ದೇಶಕ ರಾಮನಗೌಡ ಕನ್ನೊಳ್ಳಿ ತಿಳಿಸಿದರು.
ಪೋಸ್ಟರ್ ಬಿಡುಗಡೆ
ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ಜಿಲ್ಲಾ ದೌರ್ಜನ್ಯ ನಿಯಂತ್ರಣ ಸಮಿತಿಯ ನಾಮ ನಿರ್ದೇಶಿತ ಸದಸ್ಯರಿಗೆ ಅಧಿಕೃತ ಗುರುತಿನ ಚೀಟಿ ವಿತರಿಸಿದರು.
ಬಳಿಕ ಗ್ರಾಮ-ಗ್ರಾಮಗಳಲ್ಲಿ ಅಸ್ಪ್ರಶ್ಯತೆ ನಿವಾರಣೆ ಅಭಿಯಾನ ಕುರಿತ ಪೋಸ್ಟರ್ ಬಿಡುಗಡೆ ಮಾಡಿದರು.
ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಕಾಧಿಕಾರಿ ರಾಹುಲ್ ಶಿಂಧೆ, ಡಿಸಿಪಿ ರೋಹನ್ ಜಗದೀಶ, ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಅಧೀಕ್ಷಕರಾದ ರವೀಂದ್ರ ಗಡಾದಿ, ಬೈಲಹೊಂಗಲ ಉಪ ವಿಭಾಗಾಧಿಕಾರಿ ಪ್ರಭಾವತಿ ಫಕೀರಪೂರ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ, ಜಿಲ್ಲಾ ಆರೋಗ್ಯಾಧಿಕಾರಿ ಈಶ್ವರ ಗಡಾದಿ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಬಸವರಾಜ ಕುರಿಹುಲಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಲ್ಲಿಕಾರ್ಜುನ್ ಕಲಾದಗಿ, ಪಶು ಸಂಗೋಪನಾ ಇಲಾಖೆ ಉಪ ನಿರ್ದೇಶಕ ಡಾ. ರಾಜೀವ ಕೂಲೇರ್ ವಿವಿಧ ಇಲಾಖೆಯ ಅಧಿಕಾರಿಗಳು, ಜಿಲ್ಲಾ ದೌರ್ಜನ್ಯ ನಿಯಂತ್ರಣ ಸಮಿತಿ ಸದಸ್ಯರಾದ ಬಸವರಾಜ ಆಯಟ್ಟಿ ಸಭೆಯಲ್ಲಿ ಉಪಸ್ಥಿತರಿದ್ದರು.