*ಇಂದಿನಿಂದ ವಿಧಾನಮಂಡಲ ಅಧಿವೇಶನ: ವಿಪಕ್ಷಗಳಿಗೆ ಮೂಡಾ,ವಾಲ್ಮೀಕಿ ಅಸ್ತ್ರ*
ಪ್ರಗತಿವಾಹಿನಿ ಸುದ್ದಿ: ವಿಧಾನಮಂಡಲ ಅಧಿವೇಶನ ಇಂದಿನಿಂದ ಆರಂಭವಾಗಲಿದ್ದು, ಸದನದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರದ ಆಡಳಿತದ ವಿರುದ್ಧ ಹೋರಾಟಕ್ಕೆ ಬಿಜೆಪಿ, ಜೆಡಿಎಸ್ ಮೈತ್ರಿ ಪಡೆ ಭರ್ಜರಿ ತಯಾರಿ ಮಾಡಿಕೊಂಡಿವೆ.
ಲೋಕಸಭೆ ಚುನಾವಣೆಯ ಫಲಿತಾಂಶದ ನಂತರ ಇದೀಗ ನಡೆಯಲಿರುವ ಮೊದಲ ಅಧಿವೇಶನ ಇದಾಗಿದೆ. ಇನ್ನು ಸದನದಿಂದ ಹೊರಗೆ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಹೋರಾಟದ ಬಿಸಿಯನ್ನು ಈಗಾಗಲೇ ಮುಟ್ಟಿಸಿರುವ ವಿಪಕ್ಷ ನಾಯಕರು, ಇಂದಿನಿಂದ ಸದನದ ಒಳಗೆಯೇ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಸಾಧ್ಯತೆ ಇದೆ.
ರಾಜ್ಯ ಸರ್ಕಾರದ ಸುತ್ತ ಹಗರಣಗಳ ಸುಳಿ ಸುತ್ತುತಿದ್ದು, ಇದನ್ನೆ ಮುಂದೆ ಇಟ್ಟುಕೊಂಡು ಬಿಜೆಪಿ, ಜೆಡಿಎಸ್ ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಸಾದ್ಯತೆಗಳಿವೆ. ವಾಲ್ಮೀಕಿ ನಿಗಮದ ಹಗರಣ, ಮುಡಾ ಹಗರಣ, ಹಾಲಿನ, ತೈಲ ಬೆಲೆ ಏರಿಕೆ, ಡೆಂಘಿ ಉಲ್ಬಣದ ನಿಯಂತ್ರಣ ಸಮಸ್ಯೆ ಸೇರಿದಂತೆ ಮೊದಲಾದ ವಿವಾದಗಳ ಬಗ್ಗೆ ವಿಪಕ್ಷಗಳು ಸರ್ಕಾರದ ಗಮನ ಸೇಳೆಯಲಿವೆ.
ಸದನದಲ್ಲಿ ಸರ್ಕಾರದ ವಿರುದ್ಧ ಹೋರಾಟ ಮಾಡಲು ಯೋಜನೆ ರೂಪಿಸಲು ಬಿಜೆಪಿ-ಜೆಡಿಎಸ್ ದೋಸ್ತಿ ನಾಯಕರು ಸಮನ್ವಯ ಸಭೆ ನಡೆಸಿದ್ದಾರೆ. ಆ ಮೂಲಕ ಸದನದಲ್ಲಿ ಯಾವ ಅಂಶಗಳನ್ನು ಸರ್ಕಾರದ ಮುಂದಿಟ್ಟು ಹೋರಾಟ ರೂಪಿಸಬೇಕು ಎಂದು ನಿರ್ಧರಿಸಲಾಗಿದೆ. ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಪ್ರತಿಪಕ್ಷಗಳು ಗುರಿಯಾಗಿಸಿ ಕಟ್ಟಿ ಹಾಕುವ ತಂತ್ರ ಹೆಣಿದಿವೆ ಎನ್ನಲಾಗುತ್ತಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ