ಪ್ರಗತಿವಾಹಿನಿ ಸುದ್ದಿ, ಮೈಸೂರು: ಇಡಬ್ಲೂಎಸ್ ಮೀಸಲಾತಿ ಹೋರಾಟದಲ್ಲಿ ಸುಪ್ರೀಂ ಕೋರ್ಟ್‌ನಲ್ಲೂ ನಮಗೆ ಸೋಲಾಗಿದೆ. ಆದರೆ, ಕಾಂಗ್ರೆಸ್ ಪಕ್ಷ ಒಂದು ಸ್ಪಷ್ಟ ನಿರ್ಧಾರ ಕೈಗೊಂಡು ಸುಪ್ರೀಂ ಕೋರ್ಟ್‌ನ ತೀರ್ಪಿನ ಪುನರ್ ಪರಿಶೀಲನೆಗೆ ಅರ್ಜಿ ಸಲ್ಲಿಸಬೇಕು. ಎಲ್ಲ ಜಾತಿಗಳಿಗೂ ಅವರ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನೀಡಬೇಕೆಂಬ ಬಗ್ಗೆ ಚರ್ಚೆ ನಡೆಯಬೇಕೆಂದು ಹಿರಿಯ ನ್ಯಾಯವಾದಿ, ಮಾಜಿ ಅಡ್ವೋಕೇಟ್ ಜನರಲ್ ಪ್ರೊ.ಬಿ.ರವಿವರ್ಮ ಕುಮಾರ್ ಹೇಳಿದ್ದಾರೆ.
ಮೈಸೂರು ರಾಮಕೃಷ್ಣ ನಗರದ ರಮಾಗೋವಿಂದ ರಂಗಮಂದಿರದಲ್ಲಿ ಮೈಸೂರಿನ ವಿಚಾರವಾದಿ ಬಳಗ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಡಾ.ಹರೀಶ್ ಕುಮಾರ್ ಬರೆದಿರುವ ‘ಸಿದ್ದರಾಮಯ್ಯ 75 ಸಮಾಜವಾದಿ-ಜನನಾಯಕನ-ಜೀವನ-ಸಿದ್ಧಾಂತ-ಸಾಧನೆ’ ಕೃತಿ ಬಿಡುಗಡೆ ಮಾಡಿ ಅವರು ಮಾತನಾಡಿದರು.
ದೇಶದ ಮೇಲ್ವರ್ಗದ ಶೇ.3ರಷ್ಟು ಜನರು ಶಿಕ್ಷಣ ಮತ್ತು ಉದ್ಯೋಗದಲ್ಲಿ ಶೇ.10 ಮೀಸಲಾತಿ ಪಡೆಯುವ ಮೂಲಕ ದೇಶದ ಶೇ.99ರಷ್ಟು ಖಜಾನೆಯನ್ನು ಖಾಲಿ ಮಾಡುತ್ತಿದ್ದಾರೆ ಎಂದು ಹೇಳಿದರು.ಸಿದ್ದರಾಮಯ್ಯ ತಾವು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ದಿನವೇ ಘೋಷಣೆ ಮಾಡಿದ ಅನ್ನಭಾಗ್ಯ ಯೋಜನೆ ಕರ್ನಾಟದಲ್ಲಿ ಜಾರಿಯಾದ ಸಮಯದಲ್ಲಿ ಪಕ್ಕದ ರಾಜ್ಯಗಳಾದ ಆಂದ್ರಪ್ರದೇಶ, ತೆಲಂಗಾಣ, ತಮಿಳುನಾಡಿನಲ್ಲಿ ನಿರಂತರಾಗಿ ಜನರು ಹಸಿವಿನಿಂದ ಸಾಯುತ್ತಿದ್ದರು. ಅನ್ನಭಾಗ್ಯ ಯೋಜನೆ ಜಾರಿಯಾದ ಬಳಿಕ ಕರ್ನಾಟದಲ್ಲಿ ಒಬ್ಬನೇ ಒಬ್ಬ ವ್ಯಕ್ತಿ ಹಸಿವಿನಿಂದ ಸಾಯಲಿಲ್ಲ. ಇದು ಅನ್ನಭಾಗ್ಯ ಯೋಜನೆಯ ಬಹುದೊಡ್ಡ ಸಾಧನೆ ಎಂದು ತಿಳಿಸಿದರು.
ಹಿರಿಯ ಪತ್ರಕರ್ತ ದಿನೇಶ್ ಅಮಿನ್ ಮಟ್ಟು ಮಾತನಾಡಿ, ರಾಜಕಾರಣಿಗಳು ಜಾತಿವಾದಿ ಆಗಿರುತ್ತಾರೆ. ಆದರೆ, ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ, ಇಬ್ಬರು ಅಧಿಕಾರಿಗಳನ್ನು ಬಿಟ್ಟರೆ ತಮ್ಮದೇ ಜಾತಿಯ ಅಧಿಕಾರಿಗಳು ಇರಲಿಲ್ಲ. ಸಚಿವ ಸಂಪುಟದಲ್ಲೂ ಅವಕಾಶ ನೀಡಿರಲಿಲ್ಲ. ಹೀಗಾಗಿ ಅವರನ್ನು ಜಾತಿವಾದಿ ಎನ್ನಲಾಗದು”
ಮಾಜಿ ಸಚಿವ ಡಾ. ಎಚ್.ಸಿ.ಮಹದೇವಪ್ಪ ಮಾತನಾಡಿ, ”ಬ್ರಾಹ್ಮಣರ ಬ್ರಾಹ್ಮಣ್ಯಕ್ಕಿಂತ ಶೂದ್ರರ ಬ್ರಾಹ್ಮಣ್ಯ ಹೆಚ್ಚು ಅಪಾಯಕಾರಿ. ಶೂದ್ರರ ಬ್ರಾಹ್ಮಣ್ಯದ ವಿರುದ್ಧ ಪ್ರತಿಭಟಿಸದಿದ್ದರೆ ಸಮಸ್ಯೆಯಾಗಲಿದೆ. ಸರ್ವಾಧಿಕಾರಿ ಧೋರಣೆಯ ಆಡಳಿತ ಮುನ್ನಲೆಗೆ ಬಂದಿದೆ. ಪ್ರಾದೇಶಿಕ ಪಕ್ಷಗಳು ರಾಷ್ಟ್ರೀಯ ದೃಷ್ಟಿಕೋನವನ್ನು ಹೊಂದದೆ, ಜಾತಿ ಆಧಾರಿತ, ಧರ್ಮಾಧಾರಿತ ಪಕ್ಷವಾಗುತ್ತಿವೆ. ಹೀಗಾಗಿ, ಸಿದ್ದರಾಮಯ್ಯ ಮತ್ತು ಅವರ ಸ್ನೇಹಿತರ ಕೈ ಬಲಪಡಿಸಬೇಕು,”
ಕಾರ್ಯಕ್ರಮದಲ್ಲಿ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಹಿರಿಯ ಸಮಾಜವಾದಿ ಪ. ಮಲ್ಲೇಶ್, ವಿಧಾನಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ, ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಕೆ.ಎಸ್.ಶಿವರಾಮ್, ಕೆ.ಆರ್.ಗೋಪಾಲಕೃಷ್ಣ, ಉಪಸ್ಥಿತರಿದ್ದರು.
ನಾಲ್ಕೂವರೆ ವರ್ಷದಲ್ಲಾದ ಅಭಿವೃದ್ಧಿ ಹೆಮ್ಮೆ ತಂದಿದೆ: ಲಕ್ಷ್ಮೀ ಹೆಬ್ಬಾಳಕರ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ