ಪ್ರಗತಿವಾಹಿನಿ ಸುದ್ದಿ, ಚನ್ನಮ್ಮನ ಕಿತ್ತೂರು : ಐತಿಹಾಸಿಕತೆ ಮೆರೆಯುವ ರಾಣಿ ಚನ್ನಮ್ಮಾಜಿಯ
ಕೋಟೆಯು ಮರು ನಿರ್ಮಾಣಗೊಳ್ಳಲು ಹಾಗೂ ಪ್ರವಾಸಿ ತಾಣವನ್ನಾಗಿಸಲು ರಾಜ್ಯಸರ್ಕಾರಕ್ಕೆ
ಒತ್ತಾಯಿಸುವುದಾಗಿ ಮೈನಾ, ಆ ದಿನಗಳು, ಬಿರುಗಾಳಿ, ಸೂರ್ಯಕಾಂತಿ, ದಶಮುಖ ಕನ್ನಡ ಚಲನಚಿತ್ರ ನಟ ಚೇತನ (ಚೇತನಕುಮಾರ್) ಹೇಳಿದರು.
ಸೋಮವಾರ ಚನ್ನಮ್ಮ ಕಿತ್ತೂರು ಕೋಟೆಗೆ ಭೇಟಿ ನೀಡಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು,
ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣತ್ಯಾಗ ಮಾಡಿದ ವೀರ ಮಹಿಳೆಯ ಕೋಟೆಯ ಪರಿಸ್ಥಿತಿ ಹದಗೆಟ್ಟಿದೆ, ಕಿತ್ತೂರು ಪ್ರವಾಸಿ ತಾಣವಾಗಿಸಲು ಇಲ್ಲಿ ಎಲ್ಲ ವ್ಯವಸ್ಥೆಯಗಳಿದ್ದರೂ ಜನಪ್ರತಿನಿಧಿಗಳ ಇಚ್ಚಾಶಕ್ತಿ ಕೊರತೆಯಿಂದ ಅಭಿವೃದ್ಧಿ ಕಂಡಿಲ್ಲ. ಕೂಡಲೇ ರಾಜ್ಯ ಸರ್ಕಾರ ಇತ್ತ ಗಮನ ಹರಿಸಿ ಕಿತ್ತೂರು ಪಟ್ಟಣ ಹಾಗೂ ಕೋಟೆಯನ್ನು ಅಭಿವೃದ್ಧಿ ಪಡಿಸಲು ಮುಂದಾಗಬೇಕೆಂದು ಹೇಳಿದರು.
ರಾಣಿ ಚನ್ನಮ್ಮಾಜಿ ಸೇರಿದಂತೆ ಹಲವಾರು ಮಹನೀಯರು ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ್ದಾರೆ, ಇಂತಹ ಮಹನೀಯರನ್ನು ಯಾವುದೇ ಒಂದು ಜಾತಿ, ಮತ, ಪಂಥಕ್ಕೆ ಸೀಮಿತಗೊಳಿಸದೆ ದೇಶದ ಆಸ್ತಿಯಾಗಿ ಉಳಿಸಿಕೊಳ್ಳಬೇಕು ಅಲ್ಲದೆ ಈ ಮಹನೀಯರ ದೇಶಪ್ರೇಮವನ್ನು ಯುವ ಪೀಳಿಗೆಗೆ
ತಿಳಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕೆಂದ ಅವರು, ಪಾಶ್ಚಾತ್ಯ ಸಂಪ್ರದಾಯವನ್ನು ಯುವ ಪೀಳಿಗೆ ಪಾಲಿಸದೆ ದೇಶದ ಸಂಸ್ಕೃತಿ, ಆಚಾರ, ವಿಚಾರಗಳನ್ನು ಮೈಗೂಡಿಸಿಕೊಳ್ಳಬೇಕೆಂದು ಯುವಕರಿಗೆ
ಕರೆ ನೀಡಿದರು.
ಕೋಟೆಯ ಒಳಾಂಗಣ, ದರ್ಬಾರ ಹಾಲ್, ದೇವರ ಕೋಣೆ, ದೃವ ನಕ್ಷತ್ರದ ಕಿಂಡಿ, ನೀರು ಶೇಖರಣೆಯ ಸ್ಥಳ, ಈಜುಗೋಳ, ಭಾವಿ, ಹಾಗೂ ಗಾರ್ಡನ ಸೇರಿದಂತೆ ಕೋಟೆಯಲ್ಲಿರುವ ಸ್ಥಳಗಳನ್ನು
ಚೇತನ್ ವಿಕ್ಷೀಸಿದರು.
ಚಿತ್ರನಟ ಚೇತನ ಕೋಟೆಗೆ ಆಗಮಿಸುತ್ತಿದ್ದಂತೆ ಕೋಟೆ ವಿಕ್ಷೀಸಲು ಆಗಮಿಸಿದ ಪ್ರವಾಸಿಗರು ಹಾಗೂ ಕಾಲೇಜು ವಿದ್ಯಾರ್ಥಿಗಳು ನಾ ಮುಂದೆ ತಾ ಮುಂದೆ ಎನ್ನುತ್ತ ಸೆಲ್ಪಿ ತೆಗೆದುಕೊಳ್ಳಲು ಮುಂದಾಗಿದ್ದು ಸಾಮಾನ್ಯವಾಗಿತ್ತು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ