*ಸಂವಿಧಾನ ಬದಲಾವಣೆ ಎಂದ ಸಂಸದರನ್ನು ಮೋದಿ ಉಚ್ಛಾಟಿಸಲಿ: ಡಿಕೆ ಶಿವಕುಮಾರ್*
ಪ್ರಗತಿವಾಹಿನಿ ಸುದ್ದಿ: ಸಂವಿಧಾನ ಬದಲಾಯಿಸುತ್ತೇವೆ ಎಂದು ಹೇಳಿಕೆ ನೀಡಿರುವ ತಮ್ಮ ಸಂಸದರನ್ನು ಪ್ರಧಾನಿ ಮೋದಿಯವರು ಮೊದಲು ಉಚ್ಛಾಟಿಸಲಿ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಸವಾಲು ಹಾಕಿದ್ದಾರೆ.
ಅಂಬೇಡ್ಕರ್ ಬಂದರೂ ಸಹ ಸಂವಿಧಾನ ಬದಲಿಸಲು ಸಾಧ್ಯವಿಲ್ಲ ಎನ್ನುವ ಮೋದಿ ಹೇಳಿಕೆಗೆ ಬೆಂಗಳೂರಿನ ಸದಾಶಿವನಗರದ ತಮ್ಮ ನಿವಾಸದಲ್ಲಿ ಬೆಳಗ್ಗೆ ಪ್ರತಿಕ್ರಿಯೆ ನೀಡಿರುವ ಡಿಕೆಶಿ ಅವರು, ಪ್ರಧಾನಿ ಹುದ್ದೆ ಬಹಳ ಶ್ರೇಷ್ಠ, ಸಂವಿಧಾನ ಬದಲಿಸುತ್ತೇವೆ ಎಂದು ಹೇಳುವ ಅವರ ಪಕ್ಷದವರನ್ನು ಪಕ್ಷದಲ್ಲಿ ಇನ್ನು ಯಾಕೆ ಉಳಿಸಿಕೊಂಡಿದ್ದಾರೆ. ಆದರೆ ನಾವು ಸಂವಿಧಾನದ ಹೆಸರಿನಲ್ಲೇ ಚುನಾವಣೆ ಎದುರಿಸುತ್ತಿದ್ದೇವೆ. ಈ ರೀತಿ ಹೇಳಿಕೆ ನೀಡುವರನ್ನು ಪ್ರಧಾನಿ ಅವರು ಪಕ್ಷದಿಂದ ವಜಾ ಮಾಡಲಿ ಎಂದು ಆಗ್ರಹಿಸಿದರು.
ಬಿಜೆಪಿ ನಾಯಕರು 400 ಸಿಟ್ ಗೆದ್ದರೆ ಸಂವಿಧಾನ ಬದಲಾವಣೆ ಮಾಡುತ್ತೇವೆ ಎಂದು ತಿಳಿಸಿ, ಈಗ ಜನ ತಿರುಗಿ ಬಿದ್ದಾಗ ಮೋದಿಯವರು ಚುನಾವಣೆ ಸಂದರ್ಭದಲ್ಲಿ ಅಂಬೇಡ್ಕರ್ ಬಂದರೂ ಸಹ ಸಂವಿಧಾನ ಬದಲಿಸಲು ಸಾಧ್ಯವಿಲ್ಲ ಎಂದು ಹೇಳುತ್ತಿದ್ದಾರೆ. ಮೋದಿಯವರು ಚುನಾವಣೆ ಸಂದರ್ಭದಲ್ಲಿಯೇ ಈ ಮಾತು ಯಾಕೆ ಹೇಳಿದರು? ಅವರಿಗೆ ಸಂವಿಧಾನದ ಮೇಲೆ ನಂಬಿಕೆ ಇಲ್ಲ. ಅವರಿಗೆ ನಂಬಿಕೆ ಇದ್ದಿದ್ದರೆ ತಮ್ಮದೇ ಪಕ್ಷದ ನಾಯಕರು ಸಂವಿಧಾನ ಬದಲಾವಣೆ ಕುರಿತು ಹೇಳಿಕೆ ನೀಡಿದ್ದಾಗ ಯಾಕೆ ಸುಮ್ಮನಿದ್ದರು? ಮೊದಲು ಅವರನ್ನು ಉಚ್ಛಾಟಿಸಲಿ ಎಂದು ಆಕ್ರೋಶ ಹೊರಹಾಕಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ