Cancer Hospital 2
Beereshwara 36
LaxmiTai 5

ಕುತಂತ್ರಿ ಚೀನಾಕ್ಕೆ ಮೋದಿ ತಕ್ಕ ಪಾಠ ಕಲಿಸಲಿ (ಸಮಗ್ರ ಇತಿಹಾಸ)

ಭಾರತ -ಚೀನಾ ಸಂಬಂಧ -ಸಂಪೂರ್ಣ ಇತಿಹಾಸ

Anvekar 3
GIT add 2024-1

 ಗಿರೀಶ್ ಭಟ್
ಪದೇ ಪದೆ ಕಾಲು ಕೆರೆದುಕೊಂಡು ಗಡಿಯಲ್ಲಿ ಜಗಳ -ಘರ್ಷಣೆ ಮಾಡುತ್ತ ಬಂದಿರುವ ಚೀನಾ ಈಗೇನಾದರೂ ಯುದ್ಧಕ್ಕಿಳಿದರೆ ಅದು ಸಾಕಷ್ಟು ನಷ್ಟ ಅನುಭವಿಸಬೇಕಾದೀತು. ಏಕೆಂದರೆ ೧೯೬೨ ರ ನೆಹರು ಕಾಲದ ಭಾರತಕ್ಕೂ ೨೦೨೦ ರ ಮೋದಿ ಭಾರತಕ್ಕೂ ಅಜ- ಗಜಾಂತರ ವ್ಯತ್ಯಾಸವಿದೆ ಎಂದು ಚೀನಾ ಮೊದಲು ಅರ್ಥಮಾಡಿಕೊಳ್ಳಬೇಕು. ಎದುರಿಗೆ ಶಾಂತಿ ಮಂತ್ರ ಜಪಿಸುವ ಚೀನಾ ಹಿಂಬದಿಯಿಂದ ಇರಿಯುವ ನರಿ ಬುದ್ಧಿಯನ್ನು ತೋರಿಸುತ್ತಲೇ ಬಂದಿದೆ. ಚೀನಾ ಜೊತೆಗೆ ಭಾರತದ್ದು ಒಂದು ಕಡೆಯಿಂದ ಪ್ರೀತಿ ಇನ್ನೊಂದು ಕಡೆಯಿಂದ ದ್ವೆಷದ ಸಂಬಂಧ. ಏಕೆಂದರೆ ನಮ್ಮ ಜನ ಜೀವನದಲ್ಲಿ ಸಾಕಷ್ಟು ಅಗ್ಗ ಎನಿಸಿಕೊಳ್ಳುವ ಚೀನಾದ ಅಪಾರ ವಸ್ತುಗಳನ್ನು ನಾವು ಅವಲಂಬಿಸಿದ್ದೇವೆ. ಆದ್ದರಿಂದ ಚೀನಾಕ್ಕೆ ನಮ್ಮ ಭಾರತ ಒಂದು ಪ್ರಮುಖ ತನ್ನ ವಸ್ತು ಖರೀದಿಸುವ ಗ್ರಾಹಕ ರಾಷ್ಟ್ರವಾಗಿದೆ. ಜನಸಂಖ್ಯೆಯಲ್ಲೂ ವಿಶ್ವದಲ್ಲಿ ಎರಡನೇ ಸ್ಥಾನದಲ್ಲಿರುವ ಭಾರತ ಸಾಕಷ್ಟು ಚೀನಾದ ವಸ್ತುಗಳನ್ನೇ ಅವಲಂಬಿಸಿದೆ. ಇದು ಚೀನಾಕ್ಕೆ ಆರ್ಥಿಕವಾಗಿ ಬಹಳ ಸಹಾಯಕವಾಗಿದೆ. ಆದರೆ ಇತ್ತೀಚೆಗೆ ಮೋದಿ ಲಾಕ್‌ಡೌನ್ ಸಂಬಂಧಿ ವಿಷಯಕ್ಕೆಂದು ದೇಶವನ್ನುದ್ಧೇಶಿಸಿ ಮಾತನಾಡುವಾಗ ’ಆತ್ಮ ನಿರ್ಭರ್ ಭಾರತ್’ ಅಂದರೆ ಸ್ವಾವಲಂಬಿ ಭಾರತ ನಿರ್ಮಾಣ ಮಾಡುವ ಸಂಕಲ್ಪ ತೊಡೋಣ ಎಂದು ದೇಶದ ಜನರಿಗೆ ಕರೆ ಕೊಟ್ಟಿದ್ದರು. ಅರ್ಥಾತ್ ನಾವು ಚೀನಾದಿಂದ ಯಾವ ವಸ್ತುಗಳನ್ನು ಆಮದು ಮಾಡಿಕೊಳ್ಳುತ್ತಿದ್ದೆವೆಯೋ ಅವನ್ನು ನಮ್ಮಲ್ಲಿಯೆ ತಯಾರಿಸೋಣ ಎಂದು. ಇದು ಬಹುಶಃ ಚೀನಾಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿರಬಹುದು. ಆದ್ದರಿಂದಲೇ ಅದು ಗಡಿಯಲ್ಲಿ ಪುನಃ ಪುನಃ ಭಾರತವನ್ನು ಕೆಣಕುತ್ತಿರಬಹುದು. ಯುದ್ಧಕ್ಕೆ ಪ್ರೋತ್ಸಾಹಿಸುತ್ತಿರಬಹುದು. ಇಲ್ಲವೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೊರೋನಾ (ಕೋವಿಡ್-೧೯) ದಿಂದ ತನ್ನ ಮಾನ ಹರಾಜಾಗಿದ್ದಕ್ಕೆ ಹತಾಶೆಗೊಳಗಾಗಿರಬಹುದು. ವಿಶ್ವದ ಗಮನ ಬೇರೆಡೆ ಸೆಳೆಯಲೂ ಈ ತರಹದ ದಾರಿ ಅನುಸರಿಸಿರಬಹುದು. ಇಷ್ಟೇ ಅಲ್ಲ ಜಗತ್ತಿನ ಹಲವಾರು ಬೃಹತ್ ಉದ್ಯಮಗಳು ಚೀನಾದಿಂದ ಕಾಲ್ಕೀಳುತ್ತಿರುವುದು ಒಂದು ಕಾರಣವೇ. ಚೀನಾದಿಂದ ಕಾಲ್ಕಿತ್ತ ಆ ಬೃಹತ್ ಉದ್ದಿಮೆಗಳು ಭಾರತದಲ್ಲಿ ಅವಕಾಶಕ್ಕಾಗಿ ಎದುರು ನೋಡಬಹುದು. ಆಗ ಭಾರತ ಖಂಡಿತವಾಗಿಯೂ ಆ ಉದ್ಯಮಗಳ ಮೊದಲ ಆಯ್ಕೆಯಾಗಲಿದೆ. ಆಗ ಚೀನಾಕ್ಕೆ ಆರ್ಥಿಕವಾಗಿ ಬಹಳ ಹೊಡೆತ ಬೀಳಲಿದೆ.

ನಿರ್ಧಿಷ್ಟವಾಗಿ ಗುರುತಿಸಲ್ಪಡದ ಗಡಿರೇಖೆ:

ಭಾರತ -ಚೀನಾಗಳು ಪರಸ್ಪರ ೩೪೮೮ ಕಿಲೋ ಮೀಟರ್ ಗಡಿಯನ್ನು ಹಂಚಿಕೊಂಡಿವೆ. ಕೆಲವು ಕಡೆ ನಿರ್ದಿಷ್ಟ ಗಡಿರೇಖೆ ನಿಗದಿಪಡಿಸಲಾಗಿಲ್ಲ. ಲಡಾಖ್‌ನ ಆಕ್ಸಾಯ್ ಚಿನ್‌ನಲ್ಲಿ ೧೯೬೨ರ ಯುದ್ಧದಲ್ಲಿ ಚೀನಾ ಆಕ್ರಮಿಸಿಕೊಂಡ ಪ್ರದೇಶಗಳೇ ನೈಜ ನಿಯಂತ್ರಣ ರೇಖೆಯಾಗಿ ಗುರುತಿಸಲ್ಪಡುತ್ತಿದೆ. ಅರುಣಾಚಲ ಪ್ರದೇಶದ ೯೦,೦೦೦ ಚದರ ಕಿ.ಮೀ. ವಿಸ್ತಿರ್ಣವನ್ನು ಚೀನಾ ದೇಶವು ’ದಕ್ಷಿಣ ಟಿಬೆಟ್’ ಎಂದು ಕರೆದು, ತನ್ನದೆಂದಿದೆ. ಇದರಲ್ಲಿ ಒಂದಷ್ಟು ಭಾಗವನ್ನು ೧೯೬೨ರ ಯುದ್ಧದಲ್ಲಿ ಅದು ವಶಪಡಿಸಿಕೊಂಡಿದ್ದರೂ, ಬಳಿಕ ಅಲ್ಲಿಂದ ಹಿಂದೆ ಸರಿದಿತ್ತು. ೧೯೮೬ ರಿಂದ ಹಲವಾರು ಬಾರಿ ಮಾತುಕತೆಗಳು ನಡೆದರೂ ವಿವಾದ ಇನ್ನೂ ಇತ್ಯರ್ಥ ಆಗಿಲ್ಲ.

೧೯೬೨ರ ಯುದ್ಧ ನಡೆದಿದ್ದು ಹೇಗೆ:

ಚೀನಾ ತನ್ನ ಮೇಲೆ ಎರಗಿದ್ದು ಭಾರತಕ್ಕೆ ಅಂದು ಅನಿರೀಕ್ಷಿತವಾಗಿತ್ತು. ಏಕೆಂದರೆ ಅಂದಿನ ಪ್ರಧಾನಿ ಜವಾಹರ ಲಾಲ್ ನೆಹರೂ ಕೂಡ ಭಾರತ -ಚೀನಾ ಗೆಳೆಯರು ಎಂದು ಹೇಳುತ್ತಲೇ ಬಂದಿದ್ದರು. ಆದರೆ, ಚೀನಾ ಭಾರತಕ್ಕೆ ಹಿಂಬದಿಯಿಂದ ಮೋಸ ಮಾಡಿತು. ೧೯೬೨ರ ಅಕ್ಟೊಬರ್ ೨೦ ರಂದು ಚೀನಾ ಎರಡು ಕಡೆ ಅನಿರೀಕ್ಷಿತ ದಾಳಿ ನಡೆಸಿತು. ಆಗ ಭಾರತ ಯುದ್ಧಕ್ಕೆ ಸಿದ್ಧವಾಗಿರಲಿಲ್ಲ. ಹೀಗಾಗಿ ೨೦,೦೦೦ ಭಾರತೀಯ ಯೋಧರು ೮೦,೦೦೦ ಚೀನೀಯರ ಮುಂದೆ ಹತಾಶರಾಗಬೇಕಾಯಿತು. ಒಂದು ತಿಂಗಳ ಕಾಲ ನಡೆದ ಯುದ್ಧ ನವಂಬರ್ ೨೧ ರಂದು ಕೊನೆಗೊಂಡಿತು.

ಅಮೇರಿಕದಿಂದ ವಾಯುಸೇನೆಯ ನೆರವು:

ನಂತರ ಅಂದಿನ ಚೀನಾದ ಅಧ್ಯಕ್ಷ ಮಾವೋ ಝೆಡಾಂಗ್ ಭಾರತದ ಪ್ರಧಾನಿ ನೆಹರೂಗೆ ಪತ್ರ ಬರೆದು, ಯುದ್ಧವಿರಾಮದ ಪ್ರಸ್ತಾಪವಿತ್ತರು. ಆದರೆ, ಚೀನಾವು ತಾನು ವಶಪಡಿಸಿಕೊಂಡಿದ್ದ ನೆಲದಿಂದ ಹಿಂದೆ ಸರಿಯಲು ಒಪ್ಪಲಿಲ್ಲ. ನೆಹರೂ ಅಷ್ಟರಲ್ಲಾಗಲೇ ಅಮೆರಿಕ ಹಾಗೂ ಇಂಗ್ಲೆಂಡ್‌ನ ನೆರವು ಕೋರಿದ್ದರು. ಆದರೆ, ಅಮೆರಿಕ ಮತ್ತು ರಷ್ಯಾ ತಕ್ಷಣಕ್ಕೆ ಸಹಾಯಕ್ಕೆ ಬರಲಿಲ್ಲ. ಒಂದು ತಿಂಗಳು ಪರಿಸ್ಥಿತಿ ಹೀಗೇ ಮುಂದುವರಿಯಿತು. ಭಾರತ ಮತ್ತು ಚೀನಾ ಎರಡು ದೇಶಗಳಲ್ಲಿ ಸಾಕಷ್ಟು ಸಾವು -ನೋವುಗಳುಂಟಾದವು. ಅಷ್ಟರಲ್ಲಿ ಅಮೆರಿಕದ ವಾಯುಸೇನೆ ಭಾರತದ ನೆರವಿಗೆ ಬಂತು. ಅಂತಾರಾಷ್ಟ್ರೀಯ ಸಹಕಾರ ಭಾರತಕ್ಕೆ ದೊರೆಯುತ್ತಿದೆ ಎಂದು ಗೊತ್ತಾದ ತಕ್ಷಣ ಕುತಂತ್ರಿ ಚೀನಾ ಏಕಪಕ್ಷೀಯವಾಗಿ ಯುದ್ಧವಿರಾಮ ಘೋಷಿಸಿಕೊಂಡಿತು. ಆಗ ತಾನು ವಶಪಡಿಸಿಕೊಂಡ ಅರುಣಾಚಲ ಪ್ರದೇಶದ ಭಾಗದಿಂದ ಹಿಂದೆ ಸರಿಯುವ ನಾಟಕ ಮಾಡಿತು. ಆದರೆ, ಲಡಾಖ್ ಪ್ರಾಂತ್ಯದಲ್ಲಿ ವಶಪಡಿಸಿಕೊಂಡಿದ್ದ ಆಕ್ಸಾಯ್ ಚಿನ್ ಭಾಗವನ್ನು ಬಿಡಲಿಲ್ಲ. ಕದನದಲ್ಲಿ ಭಾರತ ೧೩೮೩ ಹಾಗೂ ಚೀನಾ ೭೨೨ ಸೈನಿಕರನ್ನೂ ಕಳೆದುಕೊಂಡವು. ಉಳಿದ ಪ್ರದೇಶಗಳಲ್ಲಿ ಸದ್ಯಕ್ಕೆ ಮೆಕ್‌ಮೋಹನ್ ರೇಖೆಯನ್ನು ಎರಡು ದೇಶಗಳು ತಾತ್ಕಾಲಿಕ ಗಡಿಯಾಗಿ ಅಂಗೀಕರಿಸಿವೆ. ಇದು ಮೆಕ್‌ಮೋಹನ್ ಎಂಬ ಬ್ರಿಟಿಷ್ ಅಧಿಕಾರಿ ನಿರ್ಧರಿಸಿದ ಗಡಿ. ಸಮಸ್ಯೆಯೇನೆಂದರೆ, ಈ ಗಡಿರೇಖೆಯು ಹಿಮಾಲಯದ ದುರ್ಗಮ ಪರ್ವತಶಿಖರಗಳು, ಕಣಿವೆಗಳು ಹಾಗೂ ಸರೋವರಗಳ ಮೂಲಕ ಹಾದುಹೋಗುತ್ತದೆ. ಭಾರತ-ಚೀನಾ ಎರಡೂ ದೇಶಗಳು ತಮ್ಮ ತುದಿಬಿಂದುಗಳನ್ನು ನಿರ್ಧರಿಸಿಕೊಳ್ಳಲು ಸಾಧ್ಯವಾಗದೆ, ಆಗಾಗ ತಳ್ಳಾಟ ನಡೆಸಿಕೊಳ್ಳುತ್ತಾರೆ. ತುದಿಯವರೆಗೂ ತಮ್ಮ ತಲುಪುವಿಕೆಯನ್ನು ಸುಗಮ ಮಾಡಿಕೊಳ್ಳಲು ರಸ್ತೆ, ಕಣ್ಗಾವಲಿಗೆ ಬಂಕರ್‌ಗಳನ್ನು ನಿರ್ಮಿಸುತ್ತಲೇ ಇರುತ್ತಾರೆ. ಇದರಲ್ಲಿ ಚೀನೀಯರು ಸದಾ ಮುಂದು. ಆದರೆ ಭಾರತ ತನ್ನ ಗಡಿ ಪ್ರದೇಶದಲ್ಲಿ ರಸ್ತೆ ಮುಂತಾದ ಕಾಮಗಾರಿ ನಡೆಸಿದರೆ ಚೀನಾಕ್ಕೆ ಎಲ್ಲಿಲ್ಲದ ಕೋಪ. ಆದ್ದರಿಂದ ಇದು ಘರ್ಷಣೆಗೆ ಕಾರಣವಾಗಿದೆ. ಒಟ್ಟಿನಲ್ಲಿ ಆಗ ನೆಹರೂರವರು ಚೀನಾದ ಬಗೆಗೆ ತಳೆದ ಮೃದು ಧೋರಣೆಯಿಂದಲೇ ಭಾರತ ತನ್ನ ಸಾಕಷ್ಟು ಭೂ ಪ್ರದೇಶಗಳನ್ನು ಕಳೆದುಕೊಂಡಿತು.

Emergency Service

ಪಂಚಶೀಲ ತತ್ವಗಳು:

೧೯೫೪ ರಲ್ಲಿ, ಚೀನಾ ಹಾಗೂ ಭಾರತಗಳು ಪಂಚಶೀಲ ತತ್ವಗಳನ್ನು ಒಪ್ಪಿಕೊಂಡವು. ಅದರಲ್ಲಿ, ಟಿಬೆಟ್‌ನಲ್ಲಿ ಚೀನಾದ ಆಡಳಿತವನ್ನು ಭಾರತ ಮನ್ನಿಸಿತ್ತು. ಆ ಸಂದರ್ಭದಲ್ಲೆ ನೆಹರೂ ’ಭಾರತ ಚೀನಾ ಭಾಯಿ-ಭಾಯಿ’ ಎಂದು ಮತ್ತೆ ಮತ್ತೆ ಹೇಳಿದರು. ೧೯೫೪ರ ಜುಲೈಯಲ್ಲಿ ಎರಡೂ ದೇಶಗಳ ನಕಾಶೆಗಳನ್ನು ನಿರ್ದಿಷ್ಟಪಡಿಸಿಕೊಳ್ಳೋಣ ಎಂದು ಭಾರತ ಕರೆ ನೀಡಿತು. ಆದರೆ, ಚೀನಾ ತೋರಿಸಿದ ನಕಾಶೆಯಲ್ಲಿ ಭಾರತದ ೧,೨೦,೦೦೦ ಕಿ.ಮೀ. ಪ್ರದೇಶವನ್ನು ತನ್ನದೆಂದು ತೋರಿಸಿ, ಭಾರತಕ್ಕೆ ಮೋಸ ಮಾಡಿತ್ತು. ಇದನ್ನು ಭಾರತ ವಿರೋಧಿಸಿತು. ೧೯೫೯ರಲ್ಲಿ, ಚೀನಾದ ಕೈಯಿಂದ ತಪ್ಪಿಸಿಕೊಂಡು ಬಂದ ಟಿಬೆಟ್‌ನ ಧರ್ಮಗುರು ದಲಾಯಿ ಲಾಮ ಅವರಿಗೆ ಭಾರತ ಆಶ್ರಯ ನೀಡಿದ್ದರಿಂದ ಮತ್ತೆ ಚೀನಾ ಭಾರತದ ವಿರುದ್ಧ ನಿಂತಿತು. ಟಿಬೆಟ್‌ನಲ್ಲಿ ತನ್ನ ಆಡಳಿತ ಸ್ಥಾಪಿಸಲು ಭಾರತ ಮಧ್ಯೆ ಬರುತ್ತಿದೆ ಎಂದು ಚೀನಾ ಭಾವಿಸಿತು. ೧೯೬೨ರಲ್ಲಿ ಆಗಾಗ ಚೀನಾ- ಭಾರತದ ಸೈನಿಕರ ನಡುವೆ ಸಣ್ಣಪುಟ್ಟ ಘರ್ಷಣೆಗಳು ನಡೆದವು.

ಚೀನಾದ ಆಪ್ತಮಿತ್ರ ಪಾಕ್:

ಸದಾ ಭಾರತದ ಕೇಡನ್ನೇ ಬಯಸುವ ಪಾಕಿಸ್ತಾನವನ್ನು ತನ್ನ ಅತಿ ಆಪ್ತ ಮಿತ್ರ ಎಂದು ಚೀನಾ ಘೋಷಿಸಿಕೊಂಡಿದೆ. ಕಾಶ್ಮಿರದಲ್ಲಿ ಪಾಕ್ ನಡೆಸುತ್ತಿರುವ ಭಯೋತ್ಪಾದನಾ ಕೃತ್ಯಗಳಿಗೆ ಚೀನಾ ಯಾವಾಗಲೂ ತೆರೆಮರೆಯಲ್ಲಿ ಸಹಕಾರ ನೀಡುತ್ತಿದೆ. ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರಗಳನ್ನೂ ಚೀನಾ ಪೂರೈಸುತ್ತಿದೆ. ವಿಶ್ವಸಂಸ್ಥೆಯಲ್ಲಿ ಸದಾ ಪಾಕಿಸ್ತಾನವನ್ನೇ ಸಮರ್ಥಿಸಿಕೊಳ್ಳುವ ಚೀನಾ ಭಾರತದ ವಿರುದ್ಧವೇ ನಿಲ್ಲುತ್ತದೆ. ಪಾಕಿಸ್ತಾನವನ್ನು ತನ್ನೊಂದಿಗೆ ಸೇರಿಸಿಕೊಳ್ಳುವ ಚೀನಾ ಪಾಕಿಸ್ತಾನ ಆರ್ಥಿಕ ಕಾರಿಡಾರ್ (ಸಿಪಿಇಸಿ)ನ್ನು ನಿರ್ಮಿಸುತ್ತಿದೆ. ಇದರ ಪ್ರಮುಖ ರಸ್ತೆ ಪಾಕ್ ಆಕ್ರಮಿತ ಕಾಶ್ಮಿರದಲ್ಲಿ ಸಾಗುತ್ತದೆ. ಇದನ್ನು ಭಾರತ ವಿರೋಧಿಸಿದರೂ ಚೀನಾ ಕ್ಯಾರೇ ಎನ್ನುತ್ತಿಲ್ಲ. ಗಡಿಯಲ್ಲಿರುವ ಭೂತಾನ್ ಮತ್ತು ನೇಪಾಳ ದೇಶಗಳೊಂದಿಗೆ ಭಾರತ ಉತ್ತಮ ಸಂಬಂಧ ಹೊಂದಿದೆ. ನೇಪಾಳದ ರಫ್ತು ಉದ್ಯಮವನ್ನು ಭಾರತ ನಿಯಂತ್ರಿಸುತ್ತಿತ್ತು. ಆದರೆ ನೇಪಾಳವು ಈಗೀಗ ಚೀನಾದೊಂದಿಗೆ ಔದ್ಯಮಿಕ ಸ್ನೇಹಹಸ್ತ ಚಾಚಿದೆ. ಇದು ಭಾರತಕ್ಕೂ ಸಾಕಷ್ಟು ಕಿರಿ-ಕಿರಿ ಉಂಟುಮಾಡಿದೆ.

ನದಿ ನೀರಿನ ವಿಷಯದಲ್ಲೂ ಕಿರಿಕ್:

ಚೀನಾ ತನ್ನ ಸುತ್ತಲಿನ ದೇಶಗಳೊಂದಿಗೆ ನದಿ ನೀರಿನ ವಿಚಾರದಲ್ಲಿಯೂ ವಿವಾದ ಹೊಂದಿದೆ. ಭಾರತ, ಥಾಯ್ಲೆಂಡ್, ಲಾವೋಸ್, ಕಾಂಬೊಡಿಯಾ, ವಿಯೆಟ್ನಾಮ್‌ಗಳ ನಡುವೆ ನದಿ ಜಗಳ ಇಟ್ಟುಕೊಂಡಿದೆ. ಬ್ರಹ್ಮಪುತ್ರಾ ನದಿ ನೀರು ಹಂಚಿಕೆಯು ಭಾರತ ಹಾಗೂ ಚೀನಾಗಳ ನಡುವೆ ಪ್ರಮುಖ ನೀರಿನ ವಿವಾದವಾಗಿದೆ. ಎಲ್ಲೆಲ್ಲೂ ಕೊರೋನಾ (ಕೋವಿಡ್ -೧೯) ಹಾವಳಿಯ ವಿಷಯವೇ ಸುದ್ದಿಯಲ್ಲಿರುವಾಗ ಚೀನಾವು ನಮ್ಮ ಸೈನಿಕರ ಹತ್ಯೆಗೈದು ಭಾರತವನ್ನು ಕೆಣಕಿದ್ದು ವಿಪರ್ಯಾಸವೇ ಹೌದು. ಆಗಾಗ ಕಾಲು ಕೆರೆದುಕೊಂಡು ತಂಟೆಗೆ ಬರುವ ಚೀನಾಕ್ಕೆ ಈ ಭಾರಿ ಮೋದಿಜಿಯವರು ಯಾವ ರೀತಿ ಪಾಠ ಕಲಿಸುತ್ತಾರೆ ಎನ್ನುವುದಕ್ಕೆ ಉತ್ತರ ಮುಂದಿನ ದಿನಗಳಲ್ಲಿ ಸಿಗಲಿದೆ, ಅಲ್ಲವೆ?

#BoycottChineseProducts ಅಭಿಯಾನಕ್ಕೆ ಪ್ರಗತಿವಾಹಿನಿ ಬೆಂಬಲ

Bottom Add3
Bottom Ad 2