Latest

ಬೇಡ ಮುಖಸ್ತುತಿ, ಇರಲಿ ಮೆಚ್ಚುಗೆ

ಜಯಶ್ರೀ ಜೆ. ಅಬ್ಬಿಗೇರಿ

ಒಮ್ಮೆ ರೈತ ಮಹಿಳೆಯೊಬ್ಬಳು ಇಡೀ ದಿನ ಹೊಲದಲ್ಲಿ ದುಡಿದು ಮನೆಗೆ ಮರಳಿದಳು. ಮನೆಯ ಗಂಡಸರೆಲ್ಲ ಊಟಕ್ಕೆ ಕುಳಿತಾಗ ಆಕೆ ಒಣ ಹುಲ್ಲಿನ ರಾಶಿಯನ್ನೇ ಎತ್ತಿ ತಂದು ಅವರ ಮುಂದೆ ಹಾಕಿ ಬಿಟ್ಟಳು. ಇದೇನು? ಒಣ ಹುಲ್ಲು ನಮಗೆ ಹಾಕುತ್ತಿದ್ದಿಯಾ? ಬುದ್ಧಿ ಎಲ್ಲಿಟ್ಟಿದ್ದಿಯಾ? ನಿನಗೇನು ಹುಚ್ಚು ಹಿಡಿದಿದಿಯಾ? ಎಂದು ಕೋಪದ ಉಂಡೆಗಳನ್ನು ಉಗಳತೊಡಗಿದರು. ನನ್ನ ಬುದ್ಧಿ ಸಮವಾಗಿಯೇ ಇದೆ. ಒಣ ಹುಲ್ಲು ತಂದಿಟ್ಟರೆ ನಿಮ್ಮ ಗಮನಕ್ಕೆ ಬರುತ್ತೋ ಇಲ್ಲವೋ ಅಂತ ತಿಳಿಯಬೇಕಿತ್ತು. ಅದಕ್ಕೆ ಹೀಗೆ ಮಾಡಿದೆ. ಕಳೆದ ಇಪ್ಪತ್ತು ವರ್ಷಗಳಿಂದ ಅಡುಗೆ ಬೇಯಿಸಿ ಹಾಕಿದ್ದೀನಿ. ಮಾಡಿದ ಅಡುಗೆ ಹೇಗಿತ್ತು ಅಂತ ಒಂದು ದಿನವಾದರೂ ಹೇಳಿದ್ದೀರಾ? ಎಂದಾದರೂ ಮೆಚ್ಚುಗೆಯ ಮಾತು ಆಡಿದ್ದೀರಾ? ಎಂದು ಕೇಳಿದಳು ಆಕೆ. ಆಗ ಮನೆಯ ಗಂಡಸರೆಲ್ಲ ನಿರುತ್ತರರಾದರು.
ಹೌದು, ನಮ್ಮ ನಡುವೆ ಇಂಥ ಜನರಿದ್ದಾರೆ. ಅಂಥವರು ಯಾವಾಗಲೂ ಬೇರೆಯವರು ತಮ್ಮ ಸಲುವಾಗಿಯೇ ಇದ್ದಾರೆ. ತಮ್ಮ ಸೇವೆ ಮಾಡುವುದೇ ಅವರ ಕೆಲಸವೆಂದು ನಿರ್ಣಯಿಸಿಕೊಂಡಿರುತ್ತಾರೆ. ಯಾವ ಸಮಯ ಸಂದರ್ಭವೇ ಇರಲಿ ಸದಾ ನಮ್ಮನ್ನು ತಮ್ಮ ಸೇವೆಗೆ ಬಯಸುತ್ತಾರೆ. ಪ್ರತಿಯಾಗಿ ಸೇವೆಯನ್ನು ಮೆಚ್ಚಿಕೊಂಡು ಎಂದೂ ಒಂದು ಮಾತನ್ನಾಡುವುದಿಲ್ಲ. ಮೆಚ್ಚುಗೆಯ ಮಾತುಗಳು ಅದೇಂತಹ ಶಕ್ತಿಶಾಲಿ! ಅದೆಷ್ಟು ಸಂತಸ ಸಂತೃಪ್ತಿ ತರಬಲ್ಲವು ಎಂಬುದು ಅವರಿಗೆ ಗೊತ್ತಿರುವುದಿಲ್ಲ. ಗೊತ್ತಿದ್ದರೂ ತಮ್ಮನ್ನು ತಾವು ಶ್ರೇಷ್ಠವೆಂದು ಬಿಂಬಿಸುತ್ತ ಇತರರನ್ನು ಕೀಳಾಗಿ ಬಿಂಬಿಸುವ ಪ್ರಯತ್ನದಲ್ಲಿ ತೊಡಗಿರುತ್ತಾರೆ. ಮೆಚ್ಚುಗೆಯ ಮಾತುಗಳು ಹೋಗಲಿ ಕೆಲವರು ಇದಕ್ಕೆ ವಿರುದ್ಧವಾಗಿ ಎಲ್ಲರ ಮುಂದೆ ಮಾಡಿದ ಸೇವೆಯನ್ನು ಅಲ್ಲಗಳೆಯುತ್ತಾರೆ. ಇದೂ ಸಾಲದೆಂಬಂತೆ ನಮ್ಮ ದೌರ್ಬಲ್ಯವನ್ನು ಎತ್ತಿ ಹಿಡಿದು ತೋರುತ್ತಾರೆ. ಎಲ್ಲರೆದುರು ತಲೆತಗ್ಗಿಸುವಂತೆ ಮಾಡುತ್ತಾರೆ. ತಾವೇ ಮಹಾನ್ ಬುದ್ಧಿವಂತರೆಂದು ಪ್ರದರ್ಶಿಸುತ್ತಾರೆ. ಮತ್ತೊಬ್ಬರ ಸಹಾಯ ಸಹಕಾರವನ್ನು ಉಪಕಾರವೆಂದು ತಿಳಿಯುವುದೇ ಇಲ್ಲ. ಬೇರೆಯವರು ತಮಗಾಗಿಯೇ ಇರಬೇಕು. ತಾವು ಮಾತ್ರ ಯಾರಿಗಾಗಿಯೂ ಇಲ್ಲ. ಯಾವ ಸಂದರ್ಭದಲ್ಲಿಯೂ ಆಗುವುದಿಲ್ಲ. ಎಂಥ ಸಂಕಷ್ಟ ಪರಿಸ್ಥಿತಿಯಲ್ಲೂ ತನಗೆ ಸಲ್ಲಬೇಕಾಗಿದ್ದು ಸಲ್ಲಲೇಬೇಕು. ತಾವು ಹೇಳಿದ್ದನ್ನು ಇತರರು ಒಪ್ಪಲೇಬೇಕು ಎನ್ನುವ ಧೋರಣೆಯಲ್ಲಿರುತ್ತಾರೆ. ಒಪ್ಪದಿರುವವರನ್ನು ಬುದ್ಧಿಗೇಡಿಗಳು ಎಂದು ತೀರ್ಮಾನಿಸುತ್ತಾರೆ.
ಮೆಚ್ಚುಗೆಯ ಮಾತುಗಳನ್ನಾಡಿದರೆ ಸಣ್ಣವರಾಗಿ ಬಿಡುತ್ತೇವೆ ಎಂಬ ದೊಡ್ಡ ಭ್ರಮೆಯಲ್ಲಿರುತ್ತಾರೆ. ಅಧಿಕಾರ ಹಣವಿರುವ ನಾವು ಗತ್ತಿನಲ್ಲಿ ನಡೆದುಕೊಳ್ಳಬೇಕು. ಬೇರೆಯವರನ್ನು ಹೀಯಾಳಿಸಿದರೆ ಕುಹಕವಾಡಿದರೆ ನಮ್ಮ ಪ್ರತಿಷ್ಠೆ ಹೆಚ್ಚುತ್ತದೆಂಬ ಭ್ರಮೆಯಲ್ಲಿರುತ್ತಾರೆ. ಇದಕ್ಕೆಲ್ಲ ಕಾರಣ ಅವರ ಅಲ್ಪಜ್ಞಾನ ಮತ್ತು ಅಹಂಕಾರ. ಜಗದಲ್ಲಿ ಯಾರೂ ಪರಿಪೂರ್ಣರಿಲ್ಲ. ಹಾಗಂತ ಪರಿಪೂರ್ಣತೆಯತ್ತ ಸಾಗುವುದು ತಪ್ಪಲ್ಲ. ಟೀಕೆ ವಿಮರ್ಶೆಗಳನ್ನು ಸಮಾನ ಮನಸ್ಸಿನಿಂದ ಸ್ವೀಕರಿಸಬೇಕು. ಯಾರೋ ಹೊಗಳುವರೆಂದು ಇಲ್ಲವೇ ತೆಗಳುವರೆಂದು ಯಾವುದನ್ನೂ ಪರಖಾಯಿಸದೇ ಸ್ವೀಕರಿಸಬಾರದು. ಇತರರನ್ನು ವಿಮರ್ಶೆ ಮಾಡುವ ಮೊದಲು ನಿನ್ನನ್ನು ನೀನು ವಿಮರ್ಶೆ ಮಾಡಿಕೋ ಎಂಬ ಅಬ್ರಾಹಾಂ ಲಿಂಕನ್ ಮಾತು ತುಂಬಾ ಅರ್ಥಪೂರ್ಣವಾಗಿದೆ. ಅವಿವೇಕಃ ಪರಮಾಪದಾಂಪದಂ ವಿಚಾರಹೀನತೆಯೇ ಎಲ್ಲ ವಿಪತ್ತುಗಳಿಗೂ ಮೂಲ ಕಾರಣ. ತಾವೇ ಶ್ರೇಷ್ಠರೆಂದು ಭಾವಿಸುವವರಿಗೆ ಮದ್ದು ಎಂದರೆ ಉದಾಸೀನತೆ. ಉದಾಸೀನತೆಯಿಂದಾಗಿ ಒಬ್ಬ ವ್ಯಕ್ತಿ ನಿಜವಾಗಿ ಸಾಯುವ ಮುನ್ನ ಸಾಯುತ್ತಾನೆ. ಉದಾಸೀನತೆಯಿಂದ ಆಗುವ ಮಾನಸಿಕ ಸೋಲು ಅವರನ್ನು ಕಂಗೆಡಿಸುತ್ತದೆ. ಮತ್ತೊಬ್ಬರ ತೇಜೋವಧೆಯಲ್ಲಿ ಸಂತಸ ಕಾಣವುದು ಮಾನಸಿಕ ರೋಗವಲ್ಲದೇ ಮತ್ತೇನು? ವ್ಯಂಗ್ಯದ ಮಾತುಗಳಿಗೆ ಒಂದು ಮುಗುಳ್ನಗೆ ಚೆಂದದ ಉತ್ತರವಾಗಬಲ್ಲದು. ಜನ ಹೃತ್ಪೂರ್ವಕ ಮೆಚ್ಚುಗೆಯ ಮಾತುಗಳಿಗೆ ಹಾತೊರೆಯುತ್ತಾರೆ ಎಂಬುದನ್ನು ಅರಿತು ನಡೆದುಕೊಳ್ಳಬೇಕು. ದೊರೆ ಐದನೇ ಜಾರ್ಜ್ ಆರು ನೀತಿ ವಾಕ್ಯಗಳನ್ನು ಬಕಿಂಗ್ ಹ್ಯಾಮ್ ಅರಮನೆಯ ತನ್ನ ಸ್ಟಡಿ ರೂಮ್‌ನ ಗೋಡೆ ಮೇಲೆ ತೂಗು ಹಾಕಿದ್ದ. ಅವುಗಳಲ್ಲಿ ಒಂದು ಹೀಗೆ ಹೇಳುತ್ತದೆ -ಅಗ್ಗದ ಹೊಗಳಿಕೆಯನ್ನು ಯಾರಿಗೂ ನೀಡಬೇಡ., ಯಾರಿಂದಲೂ ಸ್ವೀಕರಿಸಬೇಡ. ನಮ್ಮ ಪ್ರಾಮಾಣಿಕ ಮೆಚ್ಚುಗೆಯ ಮಧುರ ಮಾತುಗಳು ಅವರ ಎದೆಯಲ್ಲಿ ನಮಗೆ ವಿಶೇಷ ಜಾಗವನ್ನು ನೀಡಬಲ್ಲವು. ಬದುಕಿನ ರೀತಿಯನ್ನು ಬದಲಿಸಬಲ್ಲವು. ಹೊಸ ಬದುಕಿಗೆ ನಾಂದಿಯಾಗಬಲ್ಲವು. ಇತರರ ಮುಖ ಸ್ತುತಿ ಬೇಡ. ಪ್ರಭಾವಶಾಲಿ ಮೆಚ್ಚುಗೆ ಮಾತುಗಳಿರಲಿ. ಕುಹಕ ವ್ಯಂಗ್ಯಗಳನ್ನು ದೂರ ಸರಿಸಿ, ಸುತ್ತಮುತ್ತಲಿನ ಜನರ ಉತ್ತಮ ಕೆಲಸಗಳಿಗೆ ಮೆಚ್ಚುಗೆಯ ಮಾತುಗಳಿಗೆ ಜಿಪುಣತನ ತೋರುವುದು ಬೇಡ. ಧಾರಾಳವಾಗಿ ಮೆಚ್ಚಿಕೊಳ್ಳೋಣವಲ್ಲವೇ?

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button