ಬದುಕಿನ ಚೆಂದದ ತೋಟದಲಿ ಸಂಬಂಧಗಳೆಂಬ ಸುಂದರ ಹೂವುಗಳು ಅರಳಲಿ
ಜಯಶ್ರೀ.ಜೆ. ಅಬ್ಬಿಗೇರಿ
ಮೊದಲೆಲ್ಲ ಜಗತ್ತು ತುಂಬಾ ದೊಡ್ಡದೆನಿಸುತ್ತಿತ್ತು. ಇಂದಿನ ಸಂಚಾರ, ಸಂಪರ್ಕ ಸಾಧನಗಳ ಶೀಘ್ರ ಗತಿಯ ಬೆಳವಣಿಗೆಯಿಂದ ಇಡೀ ವಿಶ್ವವೇ ಒಂದು ಹಳ್ಳಿಯಾಗಿದೆ. ಸಾವಿರಾರು ಕಿ ಮಿ ಗಳಷ್ಟು ದೂರವಿರುವ ದೂರದ ದೇಶಗಳ ಸುಂದರ ತಾಣಗಳಿಗೆ ಕೇವಲ ತಾಸುಗಳ ಲೆಕ್ಕದಲ್ಲಿ ತಲುಪಬಹುದು. ಜಗತ್ತಿನ ಯಾವುದೇ ಮೂಲೆಯಲ್ಲಿರುವ ಜಾಗಕ್ಕೂ ಭೇಟಿ ನೀಡಿ ಮನೆಗೆ ಮರಳುವಷ್ಟು ಸೌಲಭ್ಯಗಳು ಹೆಚ್ಚಿವೆ.
ದೂರವಿರುವುದೆಲ್ಲ ಸನಿಹವಾಗಿವೆ. ಸನಿಹವಿರಬೇಕಿದ್ದ ಸಂಬಂಧಗಳು ದೂರ ದೂರವಾಗುತ್ತಿವೆ. ಇಂದು ನಾವೆಲ್ಲ ವಸ್ತುಗಳನ್ನು ಬಳಸಿ ಬಿಸಾಕುವ ಸಂಸ್ಕೃತಿಯಲ್ಲಿ ಬದುಕುತ್ತಿದ್ದೇವೆ. ಅದೇ ತಂತ್ರವನ್ನು ಮಧುರ ಸಂಬಂಧಗಳಿಗೆ ಅಳವಡಿಸಿ ದೂರ ದೂರವಾಗುತ್ತಿದ್ದೇವೆ. ಒಂಟಿತನದ ನೋವು ಅನುಭವಿಸುತ್ತಿದ್ದೇವೆ. ಮಂಗಳನ ಅಂಗಳಕ್ಕೆ ಕಾಲಿಟ್ಟ ನಮಗೆ ಮನೆಯ ಅಂಗಳದಲ್ಲಿ ಮಕ್ಕಳೊಂದಿಗೆ ಕಾಲ ಕಳೆಯಲು ಸಮಯ ದೊರೆಯುತ್ತಿಲ್ಲ. ವಿಶ್ವದ ಮೂಲೆಯಲ್ಲಿ ಸಂಭವಿಸಿರುವ ಸುದ್ದಿಗಳು ನಮಗೆ ಗೊತ್ತು. ಆದರೆ ನೆರೆಮನೆಯವರ ಪರಿಚಯವಿಲ್ಲ.
ನೆರೆಮನೆಯಲ್ಲಿ ನಡೆದ ಆಘಾತಕಾರಿ ಘಟನೆಗಳನ್ನು ಪತ್ರಿಕೆಯಲ್ಲಿ ಓದಿ ಇಲ್ಲವೇ ಟಿವಿಗಳಲ್ಲಿ ನೋಡಿ ಬೆರಗಾಗುತ್ತೇವೆ. ಮೊಬೈಲಿನಲ್ಲಿ ಹುದುಗಿರುವ ಮುಖಗಳಿಗೆ ಭಾವನೆಗಳನ್ನು ಹಂಚಿಕೊಳ್ಳಲು ಪುರುಸೊತ್ತಿಲ್ಲ. ಮನದಲ್ಲಿ ಒಡಕು ತುಂಬಿದೆ. ಬದುಕಿನಿಂದ ದೂರ ಹೋಗಬೇಕೆನಿಸುವಷ್ಟು ಬೇಸರ. ಅದಾವುದೋ ವಿಮುಖತೆ ಮತ್ತೆ ಮತ್ತೆ ಸನಿಹ ಸುಳಿದು ಇನ್ನಿಲ್ಲದಂತೆ ಕಾಡುತ್ತದೆ. ಪ್ರೀತಿ ಮಮತೆ ವಾತ್ಸಲ್ಯಗಳ ಸುಳಿವೇ ಇಲ್ಲದಂತಾಗಿದೆ. ಬದುಕಿನ ಚೆಂದದ ತೋಟದಲ್ಲಿ ಸಂಬಂಧಗಳೆಂಬ ಸುಂದರ ಹೂಗಳು ಅರಳದಿರಲು ಏನು ಕಾರಣವೆಂದು ನಮಗೆ ನಾವೇ ಪ್ರಶ್ನಿಸಿಕೊಂಡು ಉತ್ತರ ಕಂಡುಕೊಳ್ಳಬೇಕಿದೆ.
ದೃಷ್ಟಿ ಬದಲಿಸಬೇಕಿದೆ
ಬದುಕಿನ ಯಶಸ್ಸಿಗೆ ಹಣ ಅಧಿಕಾರ ಕೀರ್ತಿಗಳ ಬೆನ್ನು ಹತ್ತುತ್ತೇವೆ. ಆದರೆ ಇವುಗಳ ಬೆನ್ನು ಬಿಟ್ಟು ನಮ್ಮ ದೃಷ್ಟಿಯನ್ನು ಬದಲಿಸಿದರೆ ಬದುಕು ಬದಲಾಗುತ್ತದೆ. ಮಾಡುವ ಕೆಲಸ ದೊಡ್ಡದಾಗಿದ್ದರೆ ಮಾತ್ರ ನಮಗೆ ಬೆಲೆ ಸಿಗುತ್ತದೆಂಬ ತಪ್ಪು ಕಲ್ಪನೆಯಲ್ಲಿದ್ದೇವೆ. ವಾಸ್ತವದಲ್ಲಿ ಕೆಲಸದ ಬಗೆಗಿನ ದಕ್ಷತೆ ಮುಖ್ಯ ಎನ್ನುವುದರ ಮೇಲೆ ಬೆಳಕು ಚೆಲ್ಲುತ್ತ ಪ್ಲೇಟೋ ಹೀಗೆ ಹೇಳುತ್ತಾನೆ – ’ಮಾಡುವ ಕೆಲಸ ದೊಡ್ಡದು ಅಥವಾ ಸಣ್ಣದು ಎನ್ನುವ ಕಾರಣದಿಂದ ಅದರ ಮೇಲ್ಮೈಯು ನಿರ್ಧಾರವಾಗುವುದಿಲ್ಲ. ಅದನ್ನು ಮಾಡುವುದಕ್ಕೆ ನಾವು ಕೊಡುವ ಮನಸ್ಸು ಹಾಗೂ ಕಳಕಳಿಗಳಿಂದ ಅದು ನಿರ್ಧರಿತವಾಗುವುದು.’
ಬದುಕಿಗೆ ಹತ್ತಿರವೆನಿಸುವ ಮನಸ್ಸಿಗೆ ಉಲ್ಲಾಸ ಹಾಗೂ ಆತ್ಮವಿಶ್ವಾಸ ತುಂಬುವ ಶಕ್ತಿ ಶಿಕ್ಷಣಕ್ಕಿದೆ. ಶಿಕ್ಷಣ ಸಂಬಂಧಗಳ ವಿಕಾಸಕ್ಕಿರುವ ಶ್ರೇಷ್ಢ ಸಾಧನ. ನಮ್ಮ ವರ್ತನೆಯಲ್ಲಿ ಪರಿವರ್ತನೆ ತರುವ ಶಕ್ತಿ ಶಿಕ್ಷಣಕ್ಕೆ ಮಾತ್ರ ಇದೆ. ಇದನ್ನೇ ಜಾನ್ ರಸ್ಕಿನ್ ತನ್ನ ನುಡಿಗಳಲ್ಲಿ ಬಹಳ ಚೆನ್ನಾಗಿ ಹಿಡಿದಿಟ್ಟಿದ್ದಾನೆ. ’ಜನತೆಗೆ ಅವರು ಅರಿಯದ ವಿಷಯವನ್ನು ಕಲಿಸುವುದು ಶಿಕ್ಷಣವಲ್ಲ. ಅವರು ವರ್ತಿಸದಿರುವ ರೀತಿಯನ್ನು ವರ್ತಿಸುವಂತೆ ತಿದ್ದುವುದೇ ಶಿಕ್ಷಣ.’ ಬದುಕಿನ ಆನಂದ ಉತ್ಸಾಹವನ್ನು ಹೆಚ್ಚಿಸುವ ಸನಾತನ ತತ್ವದೆಡೆ ಗಮನ ಹರಿಸಬೇಕು. ಮನಸ್ಸಿನ ತವಕ ತಲ್ಲಣಗಳಿಗೂ ಉತ್ತಮ ಸಂಬಂಧಗಳು ಪ್ರೀತಿಯಲ್ಲಿ ಹೆಗಲ ಮೇಲೆ ಕೈಯಿಟ್ಟು ಉತ್ತರ ನೀಡಬಲ್ಲವು.
ಸರಳ ಜೀವನ ಅಪ್ಪಿಕೊಳ್ಳಬೇಕಿದೆ
ನಾಗರಿಕತೆ ಇನ್ನೂ ಹೆಚ್ಚಾಗಿ ಹರಡದಿದ್ದ ಕಾಲದಲ್ಲಿ ಪರಸ್ಪರ ಹೊಂದಿಕೊಂಡು ಹೋಗುವ ಕಾಲವಿತ್ತು. ಸಹಕಾರವೇ ಬದುಕಿನ ಬುನಾದಿಯಾಗಿತ್ತು. ಒಳ್ಳೆಯ ವ್ಯಾಪಾರವು ಅತ್ಯುತ್ತಮ ಕಲೆ ಎಂಬುದು ಜನಜನಿತವಾಗಿತ್ತು. ಹೊಂದಾಣಿಕೆ, ಸರಳತೆ ಸ್ನೇಹ ಜೀವನದ ಪಾತ್ರ ಹಿರಿದಾಗಿತ್ತು. ಒಬ್ಬರಿಗೊಬ್ಬರು ಕೊಡಕೊಳ್ಳುವ ವ್ಯವಹಾರ, ಸಹಕಾರವಿಲ್ಲದೆ ಬಾಳುವಂತಿರಲಿಲ್ಲ. ಪರಸ್ಪರ ಅವಲಂಬನೆಯಿಲ್ಲದೇ ಬದುಕು ಸಾಗುತ್ತಿರಲಿಲ್ಲ. ಈಗ ಎಲ್ಲವೂ ಯಂತ್ರಮಯ. ಪ್ರೀತಿಗೂ ಪುರುಸೊತ್ತಿಲ್ಲದಷ್ಟು ಯಂತ್ರಗಳ ಉತ್ಕೃಷ್ಟತೆಯ ಹುಚ್ಚುತನ.
ಕೈಯಲ್ಲಿ ಕಾಸಿದ್ದರೆ ಸಾಕು ಮುಖ ಪರಿಚಯವಿಲ್ಲದವರ ಹತ್ತಿರವೂ ವ್ಯಾಪಾರ ನಡೆಸಿ ಕೈ ಸುಟ್ಟುಕೊಂಡು ನರಳಬಹುದು. ಯಾರೊಬ್ಬರ ಸಹಕಾರವಿಲ್ಲದೇ ಬದುಕು ಸಾಗಿಸುವುದು ಸುಲಭ ಸಾಧ್ಯ. ಎಲ್ಲದಕ್ಕೂ ಯಂತ್ರಗಳಿವೆ. ಯಂತ್ರಗಳ ಕೊಳ್ಳಲು, ಸಾಕಲು ಹಣವಿದ್ದರೆ ಸಾಕು, ಬದುಕು ಸರಳ ಎನ್ನುವ ವಿಚಾರ ಪ್ರಖರತೆಯನ್ನು ಪಡೆಯುತ್ತಿದೆ. ಇದರಿಂದ ಭೋಗ ವಿಲಾಸಗಳನ್ನು ಪಡೆಯಬಹುದೇ ವಿನಃ ಸಂತೃಪ್ತಿ ಬದುಕನ್ನಲ್ಲ.
ಯಂತ್ರಗಳಿಂದ ಬದುಕು ತನ್ನ ವೇಗವನ್ನು ಹೆಚ್ಚಿಸಿಕೊಂಡಿದೆ. ’ವೇಗದ ಬದುಕು ವೇಗದ ಸಾವು’ಎನ್ನುವಂತಾಗಿದೆ. ’ಜನ್ಮದಿಂದ ಮನುಷ್ಯರಾಗಿ ಹುಟ್ಟುತ್ತೇವೆ. ಆದರೆ ಸಂಸ್ಕಾರದಿಂದಲೇ ನಾಗರಿಕರಾಗುತ್ತೇವೆ.’ ಎಂಬ ವೇಲ್ಸ್‌ನ ನುಡಿಯಂತೆ ಶಾಂತಿ ಭರಿತ ಜೀವನಕ್ಕೆ ಸರಳತೆ ಮುಖ್ಯ ಆಧಾರ. ಜೀವನದ ವಿವೇಕ ತಿಳಿಯಲು ಸರಳ ಜೀವನ ಅಪ್ಪಿಕೊಳ್ಳಬೇಕು. ಆಗ ಸುಂದರ ಬಂಧಗಳ ದಿವ್ಯ ಜೀವನ ತನ್ನಿಂದ ತಾನೆ ತೆರೆದುಕೊಳ್ಳುತ್ತದೆ.
ಸಹಾಯದ ಅಗತ್ಯತೆ
ಇತರರು ಸಂಕಷ್ಟಗಳೆಂಬ ಬೆಟ್ಟಗಳ ಸುಳಿವಲ್ಲಿ ಸಿಲುಕಿಕೊಂಡಾಗ ನೆರವಿನ ಹಸ್ತ ಚಾಚುವುದು ನಮ್ಮ ಬದುಕಿಗೆ ಸುಂದರ ಕ್ಷಣಗಳ ತಂದು ಸುರುವುತ್ತದೆ. ಇದನ್ನು ಮನದಟ್ಟು ಮಾಡಿಕೊಂಡಿದ್ದ ಇಂಗ್ಲೀಷ್ ಕವಯಿತ್ರಿ ಎಮಿಲಿ ಡಿಕಿನ್ಸನ್ ಮಾರ್ಮಿಕವಾಗಿ ಹೇಳಿದ್ದಾರೆ.
’ಒಂದು ಎದೆ ಒಡೆಯುವುದನ್ನು ನಾನು ತಡೆಯಬಹುದಾದರೆ
ನಾನು ವ್ಯರ್ಥವಾಗಿ ಬದುಕುವುದಿಲ್ಲ.
ಒಂದು ಜೀವದ ನೋವನ್ನು ಶಮನ ಮಾಡುವಂತಾದರೆ
ಅಥವಾ ಒಬ್ಬರ ವೇದನೆಯನ್ನು ಕಮ್ಮಿ ಮಾಡುವಂತಾದರೆ
ಅಥವಾ ಅಶಕ್ತ ಗುಬ್ಬಚ್ಚಿಯೊಂದನ್ನು
ಅದರ ಗೂಡಿಗೆ ಮರಳಿಸಲು ಸಹಾಯ ಮಾಡುವಂತಾದರೆ
ನಾನು ವ್ಯರ್ಥವಾಗಿ ಬದುಕುವುದಿಲ್ಲ.
ಇಂದಿನ ವೇಗ ಭರಿತ ಕಾಲದಲ್ಲಿ ನೆರವು ಚಿಕ್ಕದಿರಲಿ ದೊಡ್ಡದಿರಲಿ ಅಗತ್ಯವಿದ್ದವರಿಗೆ ಅಗತ್ಯ ಪ್ರಮಾಣದಲ್ಲಿ ಒದಗಿಸಿದರೆ ಅದು ಸೊಗಸಾದ ಬದುಕಿಗೆ ನಾಂದಿಯೇ ಸರಿ. ನೆರವು ಜೀವನದ ಎಲ್ಲ ದುಃಖಗಳ ಸಂಗತಿಯಲ್ಲೂ ಎದ್ದು ನಿಲ್ಲುವಂತೆ ಮಾಡುತ್ತದೆ. ಉನ್ನತಿಯ ಹಿರಿದಾದ ನಗೆಗೆ ದಾರಿ ಮಾಡಿಕೊಡುತ್ತದೆ.
ಮಾತಿನ ಸೊಗಸುಗಾರಿಕೆ
ಬಂಧದ ಅನುಬಂಧ ಬಳ್ಳಿಯಂತೆ ಹಬ್ಬಬೇಕಾದರೆ ಮಾತಿನ ಹಂದರ ಸೊಗಸಿನಿಂದ ಕೂಡಿರಬೇಕು. ಮುಂಜಾನೆಯಿಂದ ಫ್ಯಾಕ್ಟರಿ ಕಛೇರಿಗಳಲ್ಲಿ ಯಂತ್ರಗಳ ಸಹವಾಸದಲ್ಲಿ ದುಡಿದು ದಣಿದು ಬಂದ ದೇಹಕೆ ಮುದ್ದಾದ ಮಕ್ಕಳೊಂದಿಗೂ ಮಾತು ಬೇಡವೆನಿಸುತ್ತದೆ. ಅಷ್ಟೊಂದು ನಿರಾಸಕ್ತಿಯು ಬದುಕಿನಲ್ಲಿ ತುಂಬಿದರೆ ಗತಿಯೇನು? ಬಳಲಿ ಬೆಂಡಾದ ದೇಹಕೆ ಸೊಗಸಾದ ಮಾತುಗಾರಿಕೆ ಹೊಸ ಚೈತನ್ಯ ತುಂಬುತ್ತದೆ.
ನೆರೆಹೊರೆಯವರೊಂದಿಗಿನ ಮಾತು ಅತಿ ತುಟ್ಟಿಯಾಗಿವೆ. ಅಷ್ಟೊಂದು ಪ್ರಮಾಣದ ಗಡಿಬಿಡಿ ಬದುಕನ್ನು ನೂಕುತ್ತಿದ್ದೇವೆ. ’ನನ್ನ ಪಾಲಿಗೆ ಜೀವನವೊಂದು ಚಿಕ್ಕ ಮೊಂಬತ್ತಿಯಲ್ಲ. ಅದೊಂದು ಅದ್ಭುತ ಪಂಜು. ನಾನು ಅದನ್ನು ಮುಂದಿನ ತಲೆಮಾರಿಗೆ ಹಸ್ತಾತರಿಸುವವರೆಗೆ ಅದು ಉಜ್ವಲವಾಗಿ ಬೆಳಗುವಂತೆ ಮಾಡುತ್ತೇನೆ.’ ಎಂದಿದ್ದಾನೆ ಜಾರ್ಜ್ ಬರ್ನಾಡ್ ಷಾ. ಉಜ್ವಲವಾಗಿ ಬೆಳಗುವಂತೆ ಮಾಡುವಲ್ಲಿ ಮಾತಿನ ಮಹತ್ವ ಸಿಂಹಪಾಲಿನದಾಗಿದೆ.
ಹೀಗಾಗಿಯೇ ’ಕೇಳಿರಿ ನೋಡಿರಿ ಬೇಕಾದಷ್ಟು ವಿಚಾರ ಮಾಡಿರಿ ಆದರೆ ಬಹಳ ಯೋಚಿಸಿ ಬೇಕಾದಷ್ಟು ಮಾತನಾಡಿ. ಅಂತೆಯೇ ಎಷ್ಟು ತಿಳಿದಿಯೋ ಅದಕ್ಕಿಂತ ಕಡಿಮೆ ಮಾತು ಇರಲಿ’ ಎಂದಿದ್ದಾನೆ ಷೇಕ್ಸ್‌ಪಿಯರ್. ಸಂಬಂಧಗಳು ಬಹು ಕಾಲ ಸುಮಧುರತ್ವದ ಕಂಪನು ಬೀರಲು, ಮೃದುವಾದ ಹಿತ ಮಿತವಾದ ಮಾತುಗಳು ಅಗತ್ಯ. ಬಂಧಗಳ ಹಲವಾರು ಸಮಸ್ಯೆಗಳ ಮೂಲವೂ ಮಾತಿನಲ್ಲಿದೆ. ಪರಿಹಾರವೂ ಮಾತಿನಲ್ಲಿದೆ. ವಿಚಿತ್ರವೆನಿಸಿದರೂ ಸತ್ಯವಾದ ಮಾತು. ಬಂಧಗಳ ನಡುವೆ ಕಾಣಿಸುವ ಅರೆ ಬರೆಯ ಅತೃಪ್ತಿಯನ್ನು ಇಲ್ಲವಾಗಿಸುವ ತಾಕತ್ತು ಮಾತಿಗಿದೆ. ಎಲ್ಲೂ ಏರು ದನಿಯಿಲ್ಲದೇ ಮನಸ್ಸನ್ನು ತಾಗುವಂತೆ ಮಾತನಾಡುವುದೂ ಒಂದು ಕಲೆ. ಅದನ್ನು ಜರೂರು ಕಲಿತುಕೊಳ್ಳೋಣ. ದಾವಂತದಲ್ಲಿ ಏದುಸಿರು ಬಿಡುತ್ತಿರುವ ಬದುಕನ್ನು ತುಸುವಾದರೂ ಹಸನುಗೊಳಿಸೋಣ. ತನ್ಮೂಲಕ ಬದುಕಿನ ಸೌಂದರ್ಯ ನೂರ್ಮಡಿಗೊಳಿಸೋಣ.
(ಲೇಖಕರು ಇಂಗ್ಲೀಷ್ ಉಪನ್ಯಾಸಕರು)
ಇದೇ ಲೇಖಕರ ಇತರ ಬರಹಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ –
ಪರೀಕ್ಷೆ ಮುಗೀತು, ಫಲಿತಾಂಶವೂ ಬರುತ್ತೆ, ಮುಂದೇನು?
ಶಿಕ್ಷಕರ ದಿನಾಚರಣೆ ನಿಮಿತ್ತ ವಿಶೇಷ ಲೇಖನ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ