ಓ… ಕಡಲಾಚೆಯಿಂದ ಕನ್ನಡ ಕಾಡಿಗೆ ಬನ್ನಿ! ಗುಲಗಂಜಿ ತುಟಿಯ ಚುಂಬನ ತನ್ನಿ! ಶಕುಂತಲೆ ನಮ್ಮ ಮನೆಯಲ್ಲಿ ಹುಟ್ಟಲಿ !

 ಪ್ರೊ. ಜಿ. ಎಚ್. ಹನ್ನೆರಡುಮಠ

ನೆನಪಿದೆಯಾ ಆ ನಮ್ಮ ಹಳ್ಳಿಯ ಹಳ್ಳ- ಕೊಳ್ಳ- ಹಳವು- ಕೊನ್ನಾರುಗಳ ಹಸಿರುಕಾಡು?

ನಮ್ಮ ಅಜ್ಜ-ಅಮ್ಮ-ಮುತ್ತಮ್ಮ ಹರೆಯದವರಾಗಿದ್ದಾಗ ಎಲ್ಲೆಂದರಲ್ಲಿ ಹುಲುಸಾಗಿ ಹುಚ್ಚೆದ್ದು ಬೆಳೆದ ಹೊಲಗಳೇ ತಪೋವನಗಳು ! ಹೊಲದಲ್ಲಿ ಹುಲುಸಾಗಿ ಬೆಳೆದ ಕರ್ಕಿ-ಕಣಗಿಲೆಯೇ ಲಿಂಗಾರ್ಚನೆಯ ಪತ್ರಿಪುಷ್ಪ !

ಆ ಗಿಡಮರ ಗುಲ್ಮಗಳಲ್ಲಿ ಗಿಡಮಂಗನಾಟ, ಆ ಅಮೃತ ನೆರಳಲ್ಲಿ ಖಾಯಂ ನಡೆಯುತ್ತಿದ್ದ ಗುಂಡ-ಗಜಗ- ಚಿಣಿಪಣಿ- ವಟ್ಟಪ್ಪಾ- ಕುಂಟಾಟ- ಆಣಿಕಲ್ಲು ಆಟಗಳು, ಆ ಹಿಂಡು ಹಿಂಡು ಪೊದೆಗಳ ಮಧ್ಯದಲ್ಲಿ ಶಕುಂತಲೆಯ ಶೈಲಿಯಲ್ಲಿ ಮುಸುಗುಡುತ್ತಿದ್ದ ನಿರ್ಲಜ್ಜ ಪ್ರಿಯಕರ- ಪ್ರಣಯಿನಿಯರು, ಅವರ ಅಕ್ಕಪಕ್ಕದಲ್ಲೇ ಬೆಚ್ಚಗೆ ಮಲಗಿದ ಬಣ್ಣಬಣ್ಣದ ಹಾವುಗಳು, ಮುಂಗಲಿಗಳು, ಚೇಳುಗಳು, ಡೊಣ್ಣಿಕಾಟಗಳು, ಚಲ್ಲುಲ್ಲಿಗೋ ಚಲ್ಲಾಟವಾಡುತ್ತಿದ್ದ ಗುಬ್ಬಚ್ಚಿಗಳು, ಹಿಂಡುಹಿಂಡು ಮೊಲಗಳು-ಹರಿಣಗಳು, ಗಿಡದಿಂದ ಗಿಡಕ್ಕೆ ಜಿಗಿಯುವ ಕೆಂಪು-ಕರಿ ಜಾತಿಯ ಮಂಗಗಳು…. ಇವುಗಳ ಮಧ್ಯದಲ್ಲಿ ಹಳೇಗುಡಿಯಲ್ಲಿ ಕುಂತ ಬೋಳು ಬಸವಣ್ಣ, ಹಾಳುಹಳೆ ಲಿಂಗಯ್ಯ, ಎಣ್ಣೆ ಜಿಡ್ಡಿನಲ್ಲಿ ಗಂಡೋ-ಹೆಣ್ಣೊ ಗೊತ್ತಾಗದ ಹನುಮಂತ…. ಎಲ್ಲಾ…. ಎಲ್ಲಾ…. ಸಹಜ ಸುಂದರ !

ಆ ಕಾಲದಲ್ಲಿ ಪ್ರಕೃತಿ ನಮ್ಮ ತಾಯಿಯಾಗಿತ್ತು- ತಂದೆಯಾಗಿತ್ತು…. ಒಂದರ್ಥದಲ್ಲಿ ಅರಣ್ಯವೇ ನಮ್ಮ ತಣ್ಣನೆಯ ತವರು ಮನೆಯಾಗಿತ್ತು !

ಇತ್ತಿತ್ತಲಾಗಿ ಕಳ್ಳು-ಕಕ್ಕುಲಾತಿಯ ಸಂಬಂಧವೇ ಇಲ್ಲದ ಪಾಶ್ಚಿಮಾತ್ಯರ ಪ್ರಭಾವದಲ್ಲಿ….”ಗಾರ್ಡನಿಂಗ್” …. ಎಂಬ ಬರೆಬತ್ತಲೆಯ ಶಬ್ದ ಬಂದು …. ಕೈಯಲ್ಲಿ ಹೆಗ್ಗತ್ತಿ ಹಿಡಿದ ಕಟುಕರ ಪ್ರವೇಶವಾಯಿತು. ಇಂದು ಕೋಟಿ-ಕೋಟಿ ಹಣಸುರಿದು ಬೆಳೆಸಿದ ಈ ಎಲ್ಲಾ ಗಾರ್ಡನ್ನುಗಳಿಗೆ ಹೋಗಿ ನೋಡಿದರೆ; ಕಂಡಕಂಡಲ್ಲಿ ಹೆಗ್ಗತ್ತರಿಗಳ ಹಾವಳಿ ! ಹಾರ್ಟಿಕಲ್ಚರ್ ಬಂದು ಪಾರ್ಟಿಕಲ್ಚರ್ ಬಂತೇ…. ಅಗ್ರಿಕಲ್ಚರ್ ಬಂದು ಅಗ್ಲಿಕಲ್ಚರ್ ಇಣುಕಿತೇ ?

ಇಂದು ನಾವು ಯಾವ ಗಾರ್ಡನ್ನುಗಳಿಗೆ ಹೋದರೂ ಕತ್ತರಿಯ ಕಟುಕರು ಕತ್ತರಿಸಿದ ಚೌಕು ಪೊದೆಗಳು, ದುಂಡುಮರಗಳು, ಕೊಡೆ ಆಕಾರದ ಮರಗಳು, ಸಿಲಿಂಡರ- ಡ್ರಮ್ಮು- ಹೂಜಿ- ಫುಟಬಾಲ್ ಆಕಾರದ ಕಂಟಿಗಳು ! ಇಂಥದರಲ್ಲಿ ಅದೆಂಥದೋ ವಿದೇಶಿ ಗ್ರಾಸು ಬಂದು ಅದನ್ನು ಮಶೀನ್ ಮೂಲಕ ಕತ್ತರಿಸಿ ನೈಸಾಗಿ ಗ್ರೀನ್‌ಲಾನ್ ಮಾಡುವ ಗಾರ್ಡನ ಶೈಲಿ ಬಂತು. ಈ ಹುಚಪ್ಯಾಲಿ ಹಸಿರು ಲಾನ್‌ಗಳಿಗಾಗಿಯೇ ಕೋಟ್ಯಾಂತರ ಖರ್ಚು ! ಹಾಗೆ ಮಶೀನ್ನಿನಿಂದ ಗ್ರಾಸ್ ಕಟಿಂಗ್ ಮಾಡುವಾಗ ಹುಲ್ಲಿನಲ್ಲಿ ತಮ್ಮ ಮಕ್ಕಳೊಂದಿಗೆ ಬೆಚ್ಚಗೆ ಕುಂತ ಎಷ್ಟೋ ಮುಗ್ಧ ಕಪ್ಪೆಗಳು ಯಂತ್ರದ ಬಾಯಲ್ಲಿ ಸಿಕ್ಕು ….ಕ್ಷಣಾರ್ಧದಲ್ಲಿ ಚೂರುಚೂರಾಗಿ…. ತುಂಡುತುಂಡಾಗಿ ಬಿದ್ದ ಕಪ್ಪೆಯ ಹೆಣಗಳನ್ನು ನಾನು ಕಣ್ಣಾರೆ ಕಂಡಿದ್ದೇನೆ!

ಈ ಗಾರ್ಡನಿಂಗ್ ಶೈಲಿಯಲ್ಲಿ ಪ್ರಕೃತಿಗೂ ನಮಗೂ ಇರುವ ತಾಯಿ-ಮಕ್ಕಳ ಸಂಬಂಧ ತಪ್ಪಿಹೋಗಿ; ಈಗ ನಾವು ಈ ಗ್ರೀನ್‌ಗಾರ್ಡನ್ನಿನ ಒಡೆಯರು, ಧಣಿಗಳು ಎಂಬ ಸೈಕಾಲಾಜಿ ಬಂದುಬಿಟ್ಟಿದೆ. ಈಗ ಪ್ರಕೃತಿ ನಮ್ಮ ಚರಣ ದಾಸಿ, ಕೂಲಿ ಆಳು, ನೀರು-ಗೊಬ್ಬರ ಹಾಕಿ ನಾವು ಇಟ್ಟಂತೆ ಇರಲೇಬೇಕಾದ ನಮ್ಮ ವಿಕಟ ವಿಲಾಸದ ಚಲುವೆ ! ನಮ್ಮ ವೇಶ್ಯೆ!

ಕನ್ನಡದ ಹೆಸರಾಂತ ಮಹಾಕವಿ ಹರಿಹರ ಹೂವುಗಳನ್ನು ಹರಿಯುತ್ತಿರಲಿಲ್ಲ. ಅವುಗಳ ಮುಂದೆ ಕೈಮುಗಿದು ನಿಲ್ಲುತ್ತಿದ್ದ. ಅವುಗಳೊಂದಿಗೆ ಕಕ್ಕುಲಾತಿಯಿಂದ ಮಾತಾಡುತ್ತಿದ್ದ. “ಜಾಜಿ ಸಕಲ ಪುಷ್ಪ ಜಾತಿಗೆ ಜಾತಿ…. ಭೂತೇಶ್ವರನ ಜಡೆಯ ಮುಡಿಗೇರಿದೊಡೆ ಜಾತಿ…. ಭೂತೇಶ್ವರನ ಪೂಜೆಗೆ ನಿನ್ನ ಹೂವು ತಾರವ್ವಾ….” ಎಂದು ಪುಷ್ಪ ಸಂಕುಲಕ್ಕೆ ಪ್ರಾರ್ಥಿಸುತ್ತಿದ್ದ. ಹೊನ್ನೆ- ಸುರಹೊನ್ನೆ- ಜಾಜಿ- ಬಕುಲ- ಮಲ್ಲಿಗೆಗಳು ಅವನಿಗೆ ಶಿವನ ಪೂಜೆಗಾಗಿ ಹೂವು ಸುರಿಯುತ್ತಿದ್ದವು. ಆ ಹೂವು ಮಾಲೆ ಮಾಡುವಾಗ ಅವುಗಳಿಗೆ ಸೂಜಿಯಿಂದ ಚುಚ್ಚಿ ಮಾಲೆ ಮಾಡಿದರೆ ಅವುಗಳಿಗೆ ನೋವಾಗುತ್ತದೆಯೆಂದು…. ಮನಸಿನ ದಾರದಿಂದಲೇ ಮಾಲೆ ಹೆಣೆಯುತ್ತಿದ್ದ. ಹೂವಿನೊಂದಿಗೆ ಹೂವಾಗಿ ಮಾತಾಡುವ ಹರಿಹರನ “ಪುಷ್ಪರಗಳೆ” ಪುಷ್ಪಸಂಸ್ಕೃತಿಯಲ್ಲಿ ಜಾಗತಿಕ ಸಾಹಿತ್ಯಕ್ಕೆ ಕನ್ನಡದ ಅಸಾಧಾರಣ ಅಮರ ಕೊಡುಗೆ !

ಸವಣ್ಣನವರ ಸಮಕಾಲೀನನಾಗಿ ದಸರಯ್ಯನೆಂಬ ಶರಣನಿದ್ದ. ಆತ ಅಹಿಂಸಾ ಸಿದ್ಧಾಂತದಲ್ಲಿ ಗಾಂಧೀಜಿಗಿಂತಲೂ ಒಂದು ಹೆಜ್ಜೆ ಮಿಗಿಲೆಂದರೂ ನಡೆದೀತು. ಯಾಕೆಂದರೆ ಲಿಂಗಪೂಜೆಯೂ ಕೂಡ ಪರಿಸರಕ್ಕೆ ಒಂದು ಹಿಂಸೆ ಎಂದು ಅರಿತ ಆತ ಪರಿಸರಕ್ಕೆ ನೋವು ನೀಡಿ ಬಿಲ್ವಪತ್ರಿ ಪರಪರ ಹರಿಯುತ್ತಿರಲಿಲ್ಲ. ಒಂದು ಮಡಿ ಬಟ್ಟೆಯನ್ನು ಪತ್ರಿ ಗಿಡದ ಬುಡಕ್ಕೆ ಹಾಸಿ ಶಿವನ ಧ್ಯಾನ ಮಾಡುತ್ತ ಕೂಡುತ್ತಿದ್ದ. ಗಾಳಿ ಬೀಸಿದಾಗ ಸಹಜವಾಗಿ ಉದುರಿ ಬಿದ್ದ ಬಿಲ್ವ ಪತ್ರಿಯನ್ನೇ ಕೂಸಿನಂತೆ ಎತ್ತಿ ತಂದು ಲಿಂಗಯ್ಯನಿಗೆ ಏರಿಸಿದಾಗ ಆ ಲಿಂಗಯ್ಯ ಮಂಗಯ್ಯನಾಗಿ ಕುಲುಕುಲು ನಗುತ್ತಿದ್ದ!

ಅಬ್ಬಾ…. ನಾನು ಒಂದು ಮಠದಲ್ಲಿ ಒಬ್ಬ ಮಹಾದ್ಭುತ ಭಕ್ತನನ್ನು ಕಣಮುಟ್ಟ ಕಂಡೆ ! ಮಠದ ತೋಟದಲ್ಲಿ ಪತ್ರಿಗಿಡ ತುಂಬಾ ಎತ್ತರವಿತ್ತು. ಆ ಜಾಣ ಭಕ್ತ ಪತ್ರಿಗಿಡಕ್ಕೆ ಕಲ್ಲು ಬೀಸಿ ಒಗೆಯುತ್ತಿದ್ದ. ಕಲ್ಲಿನ ಏಟು ತಿಂದು ಉದುರಿ ಬಿದ್ದ ಪತ್ರಿದಲಗಳನ್ನು ಕಲ್ಲೇಶ್ವರ ಲಿಂಗಕ್ಕೆ ಏರಿಸುತ್ತಿದ್ದ ಆ ಕಲ್ಲುಭಕ್ತ !

ಹಾಂ ….ಇನ್ನೂ ಒಂದು ನೆನಪು ಬಂತು…. ಎಪ್ಪತ್ತು ವರ್ಷಗಳ ಹಿಂದೆ ಒಂದು ಮಠದ ಸ್ವಾಮಿಗಳಿಗೆ ಒಬ್ಬ ಮಹಾದ್ಭುತ ಭಕ್ತ ಒಂದು ಕೋಟಿ ಬಿಲ್ವಪತ್ರಿಗಳಿಂದ ಪೂಜೆ ಮಾಡುವ ಮಹಾ ಸಂಕಲ್ಪಯಜ್ಞ ಮಾಡಿದ. ಶಿವರಾತ್ರಿಯದಿನ ಸುತ್ತ ಎಂಟೂ ದಿಕ್ಕುಗಳಿಗೆ ಪತ್ರಿ ಸಂಗ್ರಹಕ್ಕಾಗಿ ೨೦-೩೦ ಟ್ರಕ್ಕು- ಟ್ರ್ಯಾಕ್ಟರುಗಳನ್ನು ಕಳಿಸಿ ಗುಡ್ಡದಷ್ಟು ಪತ್ರಿ ಹರಿಸಿ ತರಿಸಿದ ! ಅಸಂಖ್ಯಾತ ಭಕ್ತರು ಭಕ್ತಿಯಿಂದ…. ಓಂ ನಮಃ ಶಿವಾಯ…. ಎಂದು ಏಕ ಕಾಲಕ್ಕೆ ಕೈಲಾಸಕ್ಕೆ ಕೇಳುವಂತೆ ಕೂಗುತ್ತ …. ಸಹಸ್ರ ಸಹಸ್ರ ಪತ್ರೀ ದಲಗಳನ್ನು ಸ್ವಾಮಿಗಳ ತಲೆಮೇಲೆ ತೂರುತ್ತಿದ್ದರು. ಸ್ವಾಮಿಗಳಿಗೆ ಖುಶಿಯೇ ಖುಶಿ ! ಮಹಾತಪಸ್ವಿಯಂತೆ ಧ್ಯಾನಮಗ್ನರಾಗಿ ಕುಂತರು ! ಅವರ ಹೆಗಲೇರಿ ತಲೆಯೇರಿ ಪತ್ರಿಗಳು ಬಿದ್ದವು ! ಸ್ವಾಮಿಗಳು ಮತ್ತಿಷ್ಟು ಧ್ಯಾನ ಮಗ್ನರಾದರು ! ಆಗ ಏನಾಯಿತು ಗೊತ್ತೆ ? ಆ ಪತ್ರಿ ಎಲೆಗಳೊಂದಿಗೆ ಬಂದಿದ್ದ ಕೆಂಪು ಕೆಂಜಿಗ್ಯಾ ಹುಳುಗಳು ಪೂಜ್ಯ ಸ್ವಾಮಿಗಳ ಬರಿ ಮೈಯನ್ನು ಭಯಂಕರವಾಗಿ ಕಟಕಟ ಕಡಿಯತೊಡಗಿದವು ! ಕೆಂಜಿಗ್ಯಾಗಳ ಕಚ್ಚುವಿಕೆಯನ್ನು ತಡೆದುಕೊಳ್ಳುವದು ಸ್ವಾಮಿಗಳಿಗೆ ಅಸಾಧ್ಯವಾಯಿತು ! ಅವರ ಕಣ್ಣಲ್ಲಿ ಪಳಪಳ ಕಣ್ಣೀರು ಸುರಿಯತೊಡಗಿದವು. ಕಡೆಗೆ ಆ ಭಯಂಕರ ಉರಿಯೂತ ತಾಳಲಾದೇ ಸ್ವಾಮಿಗಳು ಪೂಜೆಗೆ ಭಂಗ ಬಂದರೂ ಬರಲೆಂದು ಪೂಜೆ ಹಿಡಿದ ಶ್ರೀಮಂತನನ್ನು ಶಪಿಸುತ್ತ ಅಲ್ಲಿಂದ ರಪಾಟಿ ಕಿತ್ತು ಪರಾರಿ ಪೌ ಆಗಿಬಿಟ್ಟರು ! [ನನಗೆ ಈ ಸ್ವಾರಸ್ಯಕರ ಘಟನೆಯನ್ನು ೬೦ ವರ್ಷಗಳ ಹಿಂದೆ ಕಾಶಿಪಂಡಿತರಾದ ಲಿಂಗೈಕ್ಯ ನಾಗಭೂಷಣ ಶಾಸ್ತ್ರಿಗಳು ಹೇಳಿದ್ದರು]

ಆದ್ದರಿಂದಲೇ ದೇವರ ದಾಸಿಮಯ್ಯ …..”ಇಳೆ ನಿಮ್ಮ ದಾನ…..ಬೆಳೆ ನಿಮ್ಮ ದಾನ….ಸುಳಿದು ಸೂಸುವ ಗಾಳಿ ನಿಮ್ಮ ದಾನ…. ನಿಮ್ಮ ದಾನವನುಂಡು ಅನ್ಯರ ಹೊಗಳುವ ಕುನ್ನಿಗಳನೇನೆಂಬೆ ರಾಮನಾಥಾ”…..ಎಂದು ಹಾಡಿದ್ದಾನೆ. ಇಂದು ಮದುವೆ ಸಮಾರಂಭಗಳಲ್ಲಿ ಹಾಳುಮಾಡುವ ಲಕ್ಷಲಕ್ಷ ಹೂಗಳ ರಾಶಿಯಿಂದ…. ಅಲ್ಲದೇ ರಾಜಕಾರಣಿಗಳಿಗೆ ಹಾಗೂ ಸಿನಿಮಾ ತಾರೆಯರ ಸನ್ಮಾನಗಳಿಗೆ ನಾವು ಹಾಳುಮಾಡುತ್ತಿರುವ ಹೊರಿಗಟ್ಟಲೆ ಹೂಗಳಿಂದ ನಮ್ಮ ಪ್ರಾಚೀನ ಕಾಲದಿಂದ ಬಂದ “ಪುಷ್ಪ ಸಂಸ್ಕೃತಿ” ಮಣ್ಣು ಪಾಲಾಗಿ….”ಪುಷ್ಪಗಳ ಮಾರ್ಕೇಟಿಂಗ” ಸ್ಥಾನ ಗಿಟ್ಟಿಸಿದೆ. ಒಂದು ಮಲ್ಲಿಗೆ ಹೂವು ನೀಡುವ ಅಪಾರ ಪ್ರೀತಿಯನ್ನು ಕೋಟಿ ಪ್ಲಾಸ್ಟಿಕ್ ಹೂಗಳು ಕೊಡಲಾರವು.

ಅಯ್ಯೋ…. ಇಂದು ನಾವು ಪ್ರಕೃತಿಯ ಧಣಿಗಳು…. ಮಿಂಡರು…. ಆಫೀಸರುಗಳು….; ಪ್ರಕೃತಿ ನಮ್ಮ ಆಳು….. ಗುಲಾಮಳು…..ಸೂಳೆ !

ಶಿವಶಿವಾ…. ಯಾರ ಭಯವಿಲ್ಲದೇ ಬೆಳೆದು…. ಹೂ- ಹಣ್ಣು- ಹಸಿರು- ಹಕ್ಕಿ- ಹಾಡು- ಸೊಂಪಾದ ತಂಗಾಳಿ ಕೊಡುತ್ತಿದ್ದ ಕನ್ನಡನಾಡಿನ ಆ ತಂಪು ತಪೋವನಗಳು ಏನಾದವು ? ಮಹಾಕವಿ ರಾಘವಾಂಕ ಪ್ರೀತಿಸಿದ ತಿಳಿಗೊಳದ ತಣ್ಣೆಳಲ ಮಳಲ ದಂಡೆಯ ಮಲ್ಲಿಗೆ-ಮಾಮರ ಎತ್ತ ಹೋದವು ? ಕವಿ ಚೂತವನ ಚೈತ್ರ ಕೋಗಿಲೆಯಾದ ಮಹಾಕವಿ ಲಕ್ಷೀಶನ ಬಣ್ಣನೆ ಏನಾಯಿತು? ಚಿಲಿಮಿಲಿ ಎಂದೋದುವ ಗಿಳಿಗಳ…. ಸ್ವರವೆತ್ತಿ ಪಾಡುವ ಕೋಗಿಲೆಗಳ…. ಗಿರಿಗಂಹ್ವರದೊಳಾಡುವ ನವಿಲುಗಳ ಮಧ್ಯದಲ್ಲಿ ಚಲುವ ಚನ್ನಮಲ್ಲನನ್ನು ಕೂಡಲೆಳಸಿದ ಅಕ್ಕ ಎತ್ತ ಕಾಣೆಯಾದಳು ? ಮಂಜಿನ ಶಿವಾಲಯಕ್ಕೆ ಬಿಸಿಲ ಕಳಶ ಇಡುವ ಅಲ್ಲಮ ಇನ್ನೆಲ್ಲಿ ? ಬಿದಿಗಿಯ ಚಂದ್ರನನ್ನೇ ಸೆರೆಯ ಬಟ್ಟಲು ಮಾಡಿ ಸುರಾಪಾನ ಮಾಡಿದ ಪಶ್ಚಿಮ ದಿಶಾವಲ್ಲಭೆಯ ಸುರಾಪಾನದ ನಶೆಯೇರಿದ ಗಲ್ಲದ ವರ್ಣನೆ ಮಾಡಿದ ಕನ್ನಡದ ಚಂಪೂ ಕವಿಗಳ ಪ್ರಕೃತ್ಯೋಪಾಸನೆ ಮರಳಿ ಕಾಣಬಲ್ಲೆವೇನು?

ಓ…. ಕಡಲಾಚೆಯಿಂದ ಕನ್ನಡ ಕಾಡಿಗೆ ಬನ್ನಿ ! ಗುಲಗಂಜಿ ತುಟಿಯ ಚುಂಬನ ತನ್ನಿ !

ಗಾರ್ಡನಿಂಗ ವಿಕೃತಿಯಿಂದ ಮರಳಿ ನಮ್ಮ ತಪೋವನ ಸಂಸ್ಕೃತಿ ಮರಳಿ ಬರಲಿ !

ಹೆಗ್ಗತ್ತರಿಯ ಕ್ರೂರ ಕತ್ತರಿಯಿಂದ ಕತ್ತರಿಸಿ ಹಾಕುವ ವಿದೇಶೀ ಗಾರ್ಡನಿಂಗ ಶೈಲಿ ಹೋಗಲಿ !

ಕಣ್ವಋಷ್ಯಾಶ್ರಮದ ಆ ಮುಗ್ಧ ಮನೋಹರ ಶಕುಂತಲೆ ಹೂಬಳ್ಳಿಗಳನ್ನು ಮುದ್ದಿಸುತ್ತ- ಮಾತಾಡಿಸುತ್ತ ನಮ್ಮ ತಪೋವನಕ್ಕೆ ಮತ್ತೆ ಮರಳಿ ಬರಲಿ !ಶಕುಂತಲೆ ನಮ್ಮ ಮನೆಯಲ್ಲಿ ಹುಟ್ಟಲಿ!

(ಲೇಖಕರು – ಪ್ರೊ. ಜಿ. ಎಚ್. ಹನ್ನೆರಡುಮಠ, ಖ್ಯಾತ ಸಾಹಿತಿಗಳು

# ೫ : “ಮಾವು ಮಲ್ಲಿಗೆ” : ಇಂದ್ರಪ್ರಸ್ಥ : ಬನ್ನೇರುಘಟ್ಟದ ದಾರಿ

ಗೊಟ್ಟಿಗೆರೆ ಅಂಚೆ : ಬೆಂಗಳೂರ-೫೬೦೦೮೩

ದೂ. ೯೯೪೫೭ ೦೧೧೦೮)

 

https://pragati.taskdun.com/pragativahini-special/special-article-by-g-h-hannerdumath-2/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button