Kannada NewsKarnataka NewsLatest

ರಾಣಿ ಚನ್ನಮ್ಮರ ಶೌರ್ಯ ಯುವ ಪೀಳಿಗೆಗೆ ಮಾದರಿಯಾಗಲಿ: ಸಚಿವೆ ಶಶಿಕಲಾ ಜೊಲ್ಲೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ- ಕಿತ್ತೂರು ರಾಣಿ ಚನ್ನಮ ಹಾಗೂ ಸಂಗೊಳ್ಳಿ ರಾಯಣ್ಣ ಅವರ ಆದರ್ಶಗಳು, ಶೌರ್ಯವು ಇಂದಿನ ಹಾಗೂ ನಮ್ಮ ಮುಂದಿನ ಪಿಳಿಗೆಗೆ ಮಾದರಿಯಾಗಬೇಕಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವೆ ಶಶಿಕಲಾ ಜೊಲ್ಲೆ  ಹೇಳಿದರು.
ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅವರ ಸಂಯುಕ್ತ ಆಶ್ರಯದಲ್ಲಿ ಕಾಕತಿ ಗ್ರಾಮದಲ್ಲಿ ಬುಧವಾರ (ಅ.23 ) ನಡೆದ ಕಿತ್ತೂರ ರಾಣಿ ಚನ್ನಮ್ಮ ಮೂರ್ತಿ ಪೂಜೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಧೈರ್ಯ ಮತ್ತು ಸಾಹಸದಲ್ಲಿ ಕಿತ್ತೂರ ರಾಣಿ ಚನ್ನಮ್ಮ ನಾಡಿನ ಮಹಿಳೆಯರಿಗೆ ಸ್ಪೂರ್ತಿಯಾಗಿದ್ದಾರೆ. ಕಾಕತಿ ಗ್ರಾಮದಲ್ಲಿ ಜನಿಸಿದ ಚನ್ನಮ್ಮ ಸ್ವಾತಂತ್ರ್ಯದ ರಣಕಹಳೆಯನ್ನು ಊದಲು ತಂದೆ ತಾಯಿ ಪ್ರಮುಖ ಕಾರಣರಾಗಿದ್ದಾರೆ.
ಬ್ರಿಟಿಷ್ ರ ವಿರುದ್ಧ ಹೋರಾಡಿದ ದಿಟ್ಟ ಮಹಿಳೆ ಚನ್ನಮ್ಮಳ ವೀರತನವನ್ನು , ಸಂಗೊಳ್ಳಿ ರಾಯಣ್ಣ ಪ್ರಾಮಾಣಿಕತೆಯನ್ನು ನಾಡಿನ ಪ್ರತಿಯೊಂದು ಮನೆಯ ಮಕ್ಕಳಿಗೂ ತಿಳಿಸಬೇಕು ಎಂದು ಹೇಳಿದರು.
ಚನ್ನಮ್ಮ ಆದರ್ಶಗಳನ್ನು ಪ್ರತಿಯೊಬ್ಬ ಮಹಿಳೆಯರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ತಮ್ಮ ಉತ್ತಮ ಜೀವನವನ್ನು ನಡೆಸಬೇಕು. ಅದಕ್ಕಾಗಿ ನಾನು ಸಹ ಅವರ ಒಳ್ಳೆಯತನವನ್ನು ನನ್ನ ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆಯುತ್ತಿದ್ದೇನೆ ಎಂದು ಹೇಳಿದರು.
ತನ್ನ ಪ್ರಜೆಗಳ ಶಾಂತಿ ಸುಖಕ್ಕೊಸ್ಕರ ತನ್ನ ಪ್ರಾಣದ ಹಂಗು ತೊರೆದು ಹೋರಾಡಿದ ದಿಟ್ಟ ಮಹಿಳೆ ವೀರ ರಾಣಿ ಕಿತ್ತೂರ ಚನ್ನಮ್ಮ ಹಾಗಾಗಿ ಪ್ರತಿಯೊಂದು ಮನೆಯಲ್ಲಿ ಚನ್ನಮ್ಮರಂತಹ ಮಗಳು ರಾಯಣ್ಣ ರಂತಹ ಮಗ ಜನಿಸಲಿ ಎಂದರು.
ಅಧ್ಯಕ್ಷತೆ ವಹಿಸಿದ್ದ ಮಾಜಿ ಸಚಿವರು ಹಾಗೂ ಯಮಕನಮರಡಿ ಕ್ಷೇತ್ರದ ಶಾಸಕರಾದ ಸತೀಶ ಜಾರಕಿಹೋಳಿ ಅವರು ಮಾತನಾಡಿ, ಪ್ರತಿ ವರ್ಷವು ಕೂಡ ಕಾಕತಿಯಲ್ಲಿ ಚನ್ನಮ್ಮನ ಮೂರ್ತಿಯ ಪೂಜೆಯ ಬಳಿಕ ಕಿತ್ತೂರಿನಲ್ಲಿ ಸಂಭ್ರಮದಿಂದ ಉತ್ಸವ ಆಚರಿಸಲಾಗುತ್ತದೆ ಎಂದರು.
ಇವತ್ತಿನ ದಿನಗಳಲ್ಲಿ ಕಲೆ, ಇತಿಹಾಸ ನಾಶವಾಗುತ್ತಿದ್ದು, ಅವುಗಳಿಗೆ ಮರು ಜೀವ ಕೊಡುವ ಉದ್ದೇಶದಿಂದ ಇಂತಹ ಕಾರ್ಯಕ್ರಮ ಮಾಡಲಾಗುತ್ತಿದೆ ಎಂದರು.
ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಸ್ವಾತಂತ್ರ್ಯ ಕಿಚ್ಚು ಹಚ್ಚಿದ ರಾಣಿ ಚನ್ನಮ್ಮರ ಆದರ್ಶಗಳ ತಿಳಿಸುವ ಕಾರ್ಯಗಳು ಹಲವು ವರ್ಷಗಳಿಂದ ನಡೆಯುತ್ತಿವೆ ಎಂದರು.
ಊರಿನ ಹಿರಿಯರು ಇಲ್ಲಿ ಅಗತ್ಯವಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ನಮ್ಮ ಗಮನಕ್ಕೆ ತಂದಿದ್ದು, ಅವುಗಳನ್ನು ಸರ್ಕಾರದ ಮುಖಾಂತರ ಜಿಲ್ಲಾ ಮಟ್ಟದಲ್ಲಿ ಅನುಮೊದನೆ ಕೊಡುವ ಕೆಲಸವನ್ನು ಮಾಡಲಾಗುತ್ತದೆ ಎಂದರು.
ಇದೇ ವೇಳೆಯಲ್ಲಿ ಚನ್ನಮ್ಮನ ವಂಶಸ್ಥರಾದ ಬಾಬಾಸಾಹೇಬ್ ದೇಸಾಯಿ, ಪ್ರಭುಲಿಂಗ ದೇಸಾಯಿ ಹಾಗೂ ಹಿರಿಯ ಅಧಿಕಾರಿಗಳು, ಊರಿನ ಗಣ್ಯರುಗಳನ್ನು ಸನ್ಮಾನಿಸಲಾಯಿತು.
ಬೆಳಗಾವಿ ತಹಶಿಲ್ದಾರರಾದ ಮಂಜುಳಾ ನಾಯಕ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಕಾಕತಿ ಶಿವಪೂಜಾಮಠ ರಾಚಯ್ಯ ಮಹಾಸ್ವಾಮಿಗಳು, ಉದಯ ಮಹಾಸ್ವಾಮಿಗಳು, ಚಿಕ್ಕೋಡಿ ಲೋಕಸಭಾ ಸದಸ್ಯರಾದ ಅಣ್ಣಾಸಾಹೇಬ್ ಜೊಲ್ಲೆ, ಜಿಲ್ಲಾ ಪಂಚಾಯತ ಸದಸ್ಯರಾದ ಸಿದನಗೌಡ ಸುಣಗಾರ, ತಾಲ್ಲೂಕು ಪಂಚಾಯತ ಸದಸ್ಯರಾದ ಯಲ್ಲಪ್ಪ ಕೊಳೆಕರ, ಕಾಕತಿ ಗ್ರಾಮ ಪಂಚಾಯತ ಅಧ್ಯಕ್ಷರಾದ ಸುಮನ ಶವರಾಯಿ ಶಾಪೂರಕರ, ಡಾ. ಡಿ ಸಿ ಪಾಟೀಲ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಜ್ಯೋತಿಯ ಸ್ವಾಗತ- ಭವ್ಯ ಮರವಣಿಗೆ:

ಬೈಲಹೊಂಗಲದಲ್ಲಿರುವ ಚನ್ನಮ್ಮನ ಸಮಾಧಿ ಸ್ಥಳದಿಂದ ಹುಟ್ಟೂರಾದ ಕಾಕತಿಗೆ ಬಂದಿರುವ ವೀರಜ್ಯೋತಿಯ ಮೆರವಣಿಗೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವೆರಾದ ಶಶಿಕಲಾ ಜೊಲ್ಲೆ ಹಾಗೂ  ಯಮಕನಮರಡಿ ಶಾಸಕರಾದ ಸತೀಶ ಜಾರಕಿಹೋಳಿ ಅವರು ಚಾಲನೆ ನೀಡಿದರು .
ಈ ಸಂದರ್ಭದಲ್ಲಿ ಲೋಕಸಭಾ ಸದಸ್ಯರಾದ ಅಣ್ಣಾಸಾಹೇಬ ಜೊಲ್ಲೆ, ಜಿಲ್ಲಾಧಿಕಾರಿ ಎಸ್.ಬಿ. ಬೊಮ್ಮನಹಳ್ಳಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಮಾಜಿ ಶಾಸಕರಾದ ಶಶಿಕಾಂತ ನಾಯಕ, ಜಿಲ್ಲಾ ಪಂಚಾಯತ ಸದಸ್ಯರಾದ ಸಿದ್ದಗೌಡ ಸುಣಗಾರ, ತಾಲ್ಲೂಕು ಪಂಚಾಯತ ಸದಸ್ಯರಾದ ಯಲ್ಲಪ್ಪ ಕೊಳೆಕರ ಸೇರಿದಂತೆ ಇತರ ಗಣ್ಯರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button