ಪ್ರಗತಿವಾಹಿನಿ ಸುದ್ದಿ: ಬೀದರ್ ಜಿಲ್ಲೆಯ ಭಾಲ್ಕಿಯ ಗುತ್ತಿಗೆದಾರ ಸಚಿನ್ ಪಾಂಚಾಳ್ ಆತ್ಮಹತ್ಯೆ ಪ್ರಕರಣದ ಕುರಿತು ನಿಷ್ಪಕ್ಷಪಾತ ತನಿಖೆ ಆಗಬೇಕಾದರೆ ಸಿಬಿಐಗೆ ವಹಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಒತ್ತಾಯಿಸಿದರು.
ಮೃತ ಸಚಿನ್ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಬಿಜೆಪಿ ನಿಯೋಗದ ನಾಯಕರು ಸಾಂತ್ವನ ಹೇಳಿದರು. ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಕರಣವನ್ನು ಹಗುರವಾಗಿ ತೆಗೆದುಕೊಳ್ಳಬಾರದು. ಈ ಸರ್ಕಾರಕ್ಕೆ ಹಾಗೂ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಆತ್ಮಸಾಕ್ಷಿ ಇದ್ದರೆ ಪ್ರಕರಣದ ತನಿಖೆ ಸಿಬಿಐಗೆ ವಹಿಸಲಿ ಎಂದು ಆಗ್ರಹಿಸಿದರು.
ಸಚಿನ್ ಪ್ರಾಣವನ್ನು ಉಳಿಸುವುದು ಪೊಲೀಸರ ಕೈಯಲ್ಲಿತ್ತು. ಪೊಲೀಸರ ವರ್ತನೆಯಿಂದ ಮುಗ್ಧ ಜೀವ ಹೋಗಿದೆ. ಸಚಿನ್ ಸಾವಿನ ನಂತರ ಬಡ ಕುಟುಂಬದ ಆಧಾರಸ್ತಂಭ ಮುರಿದು ಬಿದ್ದಿದೆ. ಪೊಲೀಸರು ಅಮಾನವೀಯವಾಗಿ ವರ್ತಿಸಿದ್ದಾರೆ. ಇನ್ನು ಪೊಲೀಸ್ ವ್ಯವಸ್ಥೆಯನ್ನು ಕಾಂಗ್ರೆಸ್ ಸರ್ಕಾರ ದುರ್ಬಳಕೆ ಮಾಡಿಕೊಳ್ಳಬಾರದು ಎಂದು ಕುಟುಕಿದರು.
ಮುಂದಿನ ಬಿಜೆಪಿಯ ಹೋರಾಟದ ಬಗ್ಗೆ ಚರ್ಚಿಸಿ ತಿಳಿಸುತ್ತೇವೆ. ಸಚಿನ್ ಕುಟುಂಬದ ಪರ ಬಿಜೆಪಿ ಸದಾ ಇರಲಿದೆ. ಪ್ರಿಯಾಂಕ್ ಖರ್ಗೆ ಅವರ ದುಷ್ಟ ಕೂಟದ ಸದಸ್ಯರ ಕಿರುಕುಳ, ಬೆದರಿಕೆಗಳನ್ನು ಸಹಿಸಲಾಗದೇ ಆತ್ಮಹತ್ಯೆಗೆ ಸಚಿನ್ ಶರಣಾಗಿದ್ದಾರೆ ಎಂದು ವಿಜಯೇಂದ್ರ ಆರೋಪಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ