-ಸಂಗಮೇಶ. ಆರ್.ನಿರಾಣಿ
ಕೊರೋನಾ ವೈರಸ್ ಭಯದಿಂದ ಲಾಕ್ ಡೌನದಲ್ಲಿ ಕುಳಿತ ನನಗೆ ನಮ್ಮ ಮನೆಯ ಹಿತ್ತಲದ ಗಿಡಗಳಲ್ಲಿ ಗುಬ್ಬಿಗಳು ಚಿಂವಗುಟ್ಟುವ ಶಬ್ದ ಮುಂಜಾನೆ, ಸಂಜೆ ಕೇಳತೊಡಗಿದೆ. ಇಂದು ಬೆಳಿಗ್ಗೆ ಗುಬ್ಬಿಗಳ ಕಲರವ ಕಿವಿಗೆ ಬಿದ್ದಾಗ ಆಸಕ್ತಿಯಿಂದ ಇಣುಕಿ ನೋಡಿದೆ. ಗುಬ್ಬಿಗಳ ಜೋಡಿಯೊಂದು ಮತ್ತೆ ಮತ್ತೆ ಪ್ರೀತಿಸುತ್ತಿದ್ದವು. ಮನುಷ್ಯರು ಲಾಕ್ ಡೌನ್ ಶಿಕ್ಷೆಗೆ ಒಳಗಾದರೆ ಪಶು, ಪಕ್ಷಿ, ವನಸಿರಿ ಫ್ರೀ ಆಗಿ ಸಂಭ್ರಮಿಸುತ್ತಿರಬಹುದೇನೋ!
ಜೀವ ವಿಕಾಸ ವಿಜ್ಞಾನದಲ್ಲಿ ವಿಶೇಷ ಪರಿಣಿತಿ ಪಡೆದ ನನ್ನ ಸ್ನೇಹಿತರೊಬ್ಬರು ರಣಹದ್ದುಗಳು, ಕಾಗೆಗಳು ಮಾಯವಾದದ್ದು ವಿಚಿತ್ರ ಬೇನೆಗಳು ಹರಡುವುದಕ್ಕೆ ಕಾರಣವಾಗಬಹುದು ಎಂದು ಹೇಳಿದ ಮಾತು ಥಟ್ಟನೆ ನೆನಪಾಯಿತು. ಈ ಪಕ್ಷಿಗಳು ಪ್ರತಿದಿನ ದೇಶದಲ್ಲಿ ಉತ್ಪಾದನೆಯಾಗುವ ಆರು ಲಕ್ಷಟನ್ ಕೊಳೆತ ಮಾಂಸವನ್ನು ಭಕ್ಷಿಸುತ್ತಿದ್ದವು. ಅದು ಈಗ ಹೆಚ್ಚು ಕಡಿಮೆ ನಿಂತು ಹೋಗಿದೆ. ಕೊಳೆತ ಮಾಂಸ ದೊಡ್ಡ ಪ್ರಮಾಣದಲ್ಲಿ ಸೊಂಕುಗಳನ್ನು ಹರಡುತ್ತವೆ. ಬಹು ಸೂಕ್ಷ್ಮಸಂಗತಿಯನ್ನು ಅವರು ಹೇಳಿದ್ದರು.
ಜಗತ್ತನ್ನು ಗೆದ್ದ ನೆಪೋಲಿಯನ್ ದೊರೆಗೆ ಪೃಷ್ಠದಲ್ಲಿ ಒಂದು ಸಣ್ಣ ಕುರು ಆಗುತ್ತದೆ. ಅಲೆಕ್ಸಾಂಡರ್ ಸುಮ್ಮನೇ ಒಂದೆರಡು ದಿನ ತುರಿಸಿಕೊಂಡು ನಿರ್ಲಕ್ಷಿಸುತ್ತಾನೆ. ಕುರು ಕ್ರಮೇಣ ಬೆಳೆದು ಪೃಷ್ಠದ ತುಂಬ ಆವರಿಸುತ್ತದೆ. ಕೀವು ತುಂಬಿ ಜ್ವರ ಬರುತ್ತದೆ. ಜಗತ್ತನ್ನು ಗೆಲ್ಲುವದು ಸುಲಭವಾಯಿತು ಆದರೆ ಈ ಕುರು ಬಾಧೆ ನಾನು ತಾಳಿಕೊಳ್ಳಲಾರೆ ಎಂದು ಸಾಮ್ರಾಟ್ ನೆಪೊಲಿಯನ್ ನರಳತೊಡಗುತ್ತಾನೆ. ಸಾವಿನ ಬಾಗಿಲಿಗೆ ಬಂದು ನಿಂತ ದೊರೆಗೆ ಬದುಕಿನ ಕ್ಷಣಿಕತೆ ಮತ್ತು ನಶ್ವರತೆಯ ಅರಿವಾಗುತ್ತದೆ. ತನ್ನ ಸಹಾಯಕರನ್ನು ಕರೆದು ನಾನು ಹೊರಟು ಹೋದಮೇಲೆ ಕಟ್ಟುವ ಸಮಾಧಿಯಲ್ಲಿ ನನ್ನ ಕೈಗಳನ್ನು ಹೊರಗೆ ಬಿಡಿ. ನಾನು ಬರಿಗೈಯಲ್ಲಿ ಹೊರಟು ಹೋದ ಸಂಕೇತ ಇದಾಗಿರಲಿ ಎಂದು ಹೇಳುತ್ತಾನೆ.
ಲಾಕ್ ಡೌನ್ ಅವಧಿ ಮುಗಿಯುವ ದಿನಗಳು ಖಂಡಿತ ಬರಲಿವೆ. ಕೊರೋನಾ ಮಾರಿ ಕೂಡಾ ಹೊರಟು ಹೋಗಲಿದೆ. ಆಗ ಬಿಡುಗಡೆ ಆಚರಿಸುವ ಉತ್ಸಾಹ ಕಾಣತೊಡಗಿದೆ. ಸುಮಾರು ಒಂದು ಶತಮಾನದ ಹಿಂದೆ ಜಗತ್ತನ್ನು ಭೀಕರವಾಗಿ ಕಾಡಿದ ಪ್ಲೇಗ್ ಕುರಿತು ಪ್ರಕಟವಾದ ’ದಿ ಪ್ಲೇಗ್’ ಎಂಬ ಕಾದಂಬರಿ ತುಂಬ ಪ್ರಸಿದ್ಧವಾಗಿದೆ. ಈ ಕಾದಂಬರಿ ’ದಿ ಪ್ಲೇಗ್’ ಎಂಬ ಹೆಸರಿನಲ್ಲಿಯೇ ಚಲನಚಿತ್ರವಾಗಿದೆ. ಜಗತ್ತಿನ ಹಲವು ಭಾಷೆಗಳಿಗೆ ಕಾದಂಬರಿ ಅನುವಾದಗೊಂಡಿದೆ. ಕೊನೆಯಲ್ಲಿ ಪ್ಲೇಗ್ ಮಾರಿ ಹೊರಟು ಹೋದದ್ದು ಖಾತ್ರಿಯಾಗಿ ಜನ ಕುಣಿದು, ಹಾಡಿ ಸಂಭ್ರಮಾಚರಣೆ ಮಾಡುತ್ತಾರೆ. ಆದರೆ ಈ ಕಾದಂಬರಿಯ ಕಥಾನಾಯಕ ಡಾ|| ರಿಯಾ ಈ ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳುವದಿಲ್ಲ. ದೂರದಲ್ಲಿ ನಿಂತು ನಮ್ಮ ನೆಲದ ಅರ್ಧಕ್ಕೂ ಹೆಚ್ಚು ಜನ ಹೊರಟು ಹೋಗಿದ್ದಾರೆ ಎಂದು ಕಣ್ಣೀರು ಹಾಕುತ್ತಿರುತ್ತಾನೆ.
ಪ್ಲೇಗ್ ಮಾರಿಯಿಂದ ನಮ್ಮ ಬಾಂಧವರು ಅನುಭವಿಸಿದ ಸಂಕಟ, ಕಳವಳ, ಹಾನಿ ಮತ್ತು ಭಯದ ನಡುವೆ ಸಂಭ್ರಮ ಒಂದು ವಿಷಾದಗೀತೆಯಂತೆ ಕೇಳಿಸುತ್ತದೆ ಎಂದು ಹಳಹಳಿ ವ್ಯಕ್ತಪಡಿಸುತ್ತಾನೆ. ಇದೇ ಕ್ಷಣದಲ್ಲಿ ಒಬ್ಬ ಮುದುಕಿ ಡಾ|| ರಿಯಾ ಬಳಿ ಬಂದು ತಮ್ಮ ಮಗಳಿಗೆ ಪ್ರಸವ ವೇದನೆ ಶುರುವಾಗಿದೆ ಬೇಗ ಬನ್ನಿ ಎಂದು ಕರೆಯುತ್ತಾಳೆ. ವೈದ್ಯರು ಮನೆ ತಲುಪುವದರಲ್ಲಿ ಹೊಚ್ಚ ಹೊಸ ಮಗು ಭೂಮಿಗೆ ಬಂದು ಅಳುತ್ತಿರುತ್ತದೆ. ಮನೆಯವರೆಲ್ಲ ಹರ್ಷದಿಂದ ಸಂಭ್ರಮಿಸುತ್ತಿರುತ್ತಾರೆ. ಮಾನವ ಸೇವೆಗಿಂತ ದೊಡ್ಡ ಧರ್ಮವಿಲ್ಲ, ಎಲ್ಲರ ಒಳಿತಿಗಾಗಿ ಮಾಡುವ ಕಾರ್ಯಕ್ಕಿಂತ ಶ್ರೇಷ್ಠ ಪಂಥವಿಲ್ಲ ಎಂಬ ದಾರ್ಶನಿಕ ವುಡ್ರೋ ವಿಲ್ಸನ್ ಮಾತು ನೆನಪಾಗಿ ಡಾ|| ರಿಯಾ ಓಡಿಹೋಗಿ ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳುತ್ತಾನೆ.
ಈ ಬದುಕಿಗೆ ತನ್ನದೇ ಆದ ಒಂದು ಗತಿಯಿದೆ. ಮುಂಜಾಗ್ರತೆ, ಶಿಸ್ತು, ಸಂಯಮ ಕಾಪಾಡಿಕೊಂಡು ನಡೆಯುವಾಗ ಕ್ರಿಯಾಶೀಲತೆಯನ್ನು ಉಳಿಸಿಕೊಳ್ಳುವದು ಅವಶ್ಯ. ಹಿಂದೆ ಕೂಡಾ ಮಹಾಮಾರಿಗಳು ಮನುಷ್ಯರನ್ನು ಅಕ್ಷರಶಃ ಬೇಟೆಯಾಡಿ ಹೋಗಿವೆ. ಶತಮಾನದ ಹಿಂದೆ ಮೈಸೂರು ರಾಜ್ಯ ಪ್ಲೇಗ್ ಎದುರಿಸಿದ ಹಾಗೂ ಆಗ ತೆಗೆದುಕೊಂಡ ಕ್ರಮಗಳ ವಿವರಗಳನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಆಸಕ್ತಿಯಿಂದ ಅಧ್ಯಯನ ಮಾಡಿದ್ದಾರೆಂದು ಅವರ ಆಪ್ತರಿಂದ ತಿಳಿಯಿತು. ಆಗಿನ ಬೆಂಗಳೂರು ಆಡಳಿತ ಮಂಡಳಿಯ ೧೮೯೮-೯೯ರ ವಾರ್ಷಿಕ ವರದಿಯಲ್ಲಿಯ ಈ ಮಾಹಿತಿ ತುಂಬ ಆಸಕ್ತಿದಾಯಕವಾಗಿದೆ. ಪ್ಲೇಗ್ ಸುಮಾರು ಮೂರು ವರ್ಷ ಕಾಡಿದೆ.
ಮುಂಬೈಯಲ್ಲಿ ಕಾಣಿಸಿಕೊಂಡ ಪ್ಲೇಗ್ ಸದರ್ನ ಮರಾಠಾ ರೈಲು ಮೂಲಕ ಬೆಂಗಳೂರಿಗೆ ಹರಡಿತು. ಆಗ ಜನರನ್ನು ಮನೆಯಲ್ಲಿ ಲಾಕ್ ಡೌನ್ ಮಾಡದೆ, ಊರ ಹೊರಗೆ, ಹೊಲಗಳಲ್ಲಿ ಇಡುವ ವ್ಯವಸ್ಥೆ ಮಾಡಲಾಗಿತ್ತು. ರೋಗಿಗಳನ್ನು ಆಸ್ಪತ್ರೆಗೆ ಸಾಗಿಸಲು ೧೨ ಚಕ್ಕಡಿಗಳನ್ನು ಅಂಬ್ಯುಲನ್ಸ ಮಾಡಲಾಗಿತ್ತು. ಸುಮಾರು ಮೂರು ವರ್ಷಗಳ ಕಾಲ ಕಾಡಿದ ಈ ಬೇನೆಯನ್ನು ಅಂದು ಯಶಸ್ವಿಯಾಗಿ ಹೊಡೆದೋಡಿಸಲಾಗಿತ್ತು.
ಕೊರೋನಾ ನಿಯಂತ್ರಣದ ಪುರಿಣಾಮಕಾರಿ ಔಷಧಿಗಳು ಹಾಗೂ ಲಸಿಕೆ ಬಳಕೆಗೆ ಲಭ್ಯವಾಗಲು ೧೨-೧೮ ತಿಂಗಳ ಕಾಲಾವಕಾಶ ಬೇಕು ಎಂಬ ಅಭಿಪ್ರಾಯಗಳು ಕೇಳಿಬರುತ್ತಿವೆ. ತ್ವರಿತಗತಿಯಲ್ಲಿ ಎಲ್ಲ ಪ್ರಯೋಗಗಳಿಗೆ ಅವಕಾಶ ದೊರೆತರೆ ಕೇವಲ ೭-೮ ತಿಂಗಳಲ್ಲಿ ಈ ಮಹಾಮಾರಿಯನ್ನು ಗೆಲ್ಲಬಹುದು ಎಂಬ ವಿಶ್ವಾಸವನ್ನು ವಿಜ್ಞಾನಿಗಳು ವ್ಯಕ್ತಪಡಿಸಿದ್ದಾರೆ. ಮಾನವ ಸಂತತಿಯನ್ನು ಅನೇಕ ಭಯಾನಕ ರೋಗ-ರುಜಿನಗಳು ಕಾಡಿವೆ. ವಿಜ್ಞಾನದ ಬೆಳಕಿನಲ್ಲಿ ಅವುಗಳಿಗೆಲ್ಲ ಸೂಕ್ತ ಪರಿಹಾರ ಕಂಡುಹಿಡಿಯಲಾಗಿದೆ. ಇಂದಿನ ಸಮಸ್ಯೆಗೂ ವಿಜ್ಞಾನ ಮಾತ್ರ ಪರಿಹಾರ ಸೂಚಿಸಬಲ್ಲುದು ಎಂಬುದನ್ನು ಬೇಗನೇ ಅರ್ಥಮಾಡಿಕೊಳ್ಳಬೇಕು.
(ಲೇಖಕರು – ಕಾರ್ಯನಿರ್ವಾಹಕ ನಿರ್ದೇಶಕರು
ಎಂ.ಆರ್.ಎನ್ (ನಿರಾಣಿ) ಫೌಂಡೇಷನ್ ಮುಧೋಳ)
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ