Kannada NewsKarnataka NewsPolitics

*ವಾಲ್ಮೀಕಿ ನಿಗಮದ ಹಗರಣದಲ್ಲಿ ರಿಪೋರ್ಟ್ ಬರೋವರೆಗೂ ಕಾಯೋಣ: ಸಚಿವ ಕೆಜೆ ಜಾರ್ಜ್*

ಪ್ರಗತಿವಾಹಿನಿ ಸುದ್ದಿ: ವಾಲ್ಮೀಕಿ ನಿಗಮದ ಹಗರಣಕ್ಕೆ ಸಂಬಂಧಿಸಿದಂತೆ ನಾವು ಎಸ್ಐಟಿ ರಚನೆ ಮಾಡಿದ್ದೇವೆ. ಈಗಾಗಲೇ ಎಸ್ಐಟಿ ತನಿಖೆ ಆರಂಭಿಸಿದೆ, ರಿಪೋರ್ಟ್ ಬರೋವರೆಗೂ ಕಾಯೋಣ. ತನಿಖೆಯ ವರದಿ ಬಂದ ಮೇಲೆ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳುತ್ತೇವೆ ಎಂದು ವಾಲ್ಮೀಕಿ ನಿಗಮದ ಪ್ರಕರಣದಲ್ಲಿ ಇಡಿ ದಾಳಿ ವಿಚಾರವಾಗಿ ಸಚಿವ ಕೆಜೆ ಜಾರ್ಜ್ ಅವರು ತಿಳಿಸಿದ್ದಾರೆ.

ಬಳ್ಳಾರಿಯಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು, ಬಿಜೆಪಿಯವರು ಈಗ ಭ್ರಮೆಯಲ್ಲಿದ್ದಾರೆ. ಕೇಂದ್ರದಲ್ಲಿ ಗೆಲ್ಲೋದಕ್ಕೆ ಆಗಿಲ್ಲ, ಅದನ್ನ ಮುಚ್ಚಿಕೊಳ್ಳೋದಕ್ಕೆ ಮಾತಾಡುತ್ತಿದ್ದಾರೆ.‌ ಸ್ವಲ್ಪ ಎಸ್ಐಟಿ ತನಿಖಾ ವರದಿ ಬರೋತನಕ ಕಾಯೋಣ ಎಂದರು.

ತನಿಖೆಗೆ ನಾಗೇಂದ್ರ ಸಹಕಾರ ನೀಡುತ್ತಿಲ್ಲ ಎಂಬ ವಿಚಾರವಾಗಿ ಮಾತನಾಡಿದ ಅವರು, ನಾಗೇಂದ್ರ ಅವರು ಸಹಕಾರ ಮಾಡುತ್ತಿಲ್ಲ ಎಂದು ಎಸ್ಐಟಿಯವರು ಹೇಳಿದ್ದಾರಾ..?ಎಸ್ಐಟಿಯವರು ಆ ರೀತಿ ಹೇಳಿಲ್ಲ, ನಾನು ಗೃಹ ಸಚಿವನಾಗಿದ್ದವನು, ಈಗ ಎಸ್ಐಟಿ ತನಿಖೆ ಮಾಡುತ್ತಿದೆ. ಸರ್ಕಾರ ಇದರಲ್ಲಿ ಯಾವುದೇ ಹಸ್ತಕ್ಷೇಪ ಮಾಡುತ್ತಿಲ್ಲ. ಈ ಪ್ರಕರಣದಿಂದ ಸರ್ಕಾರಕ್ಕೆ ಯಾವುದೇ ಮುಜುಗರ ಇಲ್ಲ ಎಂದರು.

ವಾಲ್ಮೀಕಿ ಹಗರಣ ಸಿಬಿಐಗೆ ಕೊಡುವಂತೆ ಬಿಜೆಪಿ ನಾಯಕರ ಒತ್ತಾಯ ವಿಚಾರವಾಗ ಮಾತನಾಡಿದ ಅವರು, ಬಿಜೆಪಿಯವರು ಯಾಕೆ ಸಿಬಿಐಗೆ ಕೊಡಿ ಅಂತಾ ಹೇಳುತ್ತದ್ದಾರೆ.‌ ಇಲ್ಲಿ ನಮ್ಮ ಅಧಿಕಾರಿಗಳು ದಕ್ಷರಿಲ್ವಾ..? ಸಿಬಿಐ ಕೇಂದ್ರದ್ದು, ಅದಕ್ಕೆ ಸಿಬಿಐಗೆ ಕೊಡಿ ಅಂತಾ ಹೇಳುತ್ತಿದ್ದಾರೆ. ಬಿಜೆಪಿ ನಾಯಕರ ಮೇಲೆ ಯಾವುದೇ ಕೇಸ್ ಗಳಿಲ್ವಾ..? ಬಿಜೆಪಿ ನಾಯಕರು ಬಹಳ ಜನ ಬೇಲ್ ಮೇಲೆ ಓಡಾಡುತ್ತಿದ್ದಾರೆ ಎಂದು ಬಿಜೆಪಿ ನಾಯಕರ ಮೇಲೆ ಗರಂ ಆದರು.‌

ಸರ್ಕಾರ ಏನೂ ಬೀಳೋದಿಲ್ಲ, ನಮಗೆ ಜನ ಬೆಂಬಲ ಕೊಟ್ಟಿದ್ದಾರೆ, ಸರ್ಕಾರ ಬೀಳುತ್ತೆ ಅನ್ನೋದು ಬಿಜೆಪಿಯವರ ಹಗಲು ಕನಸು. ನಮ್ಮ ಸಿಎಂ, ಡಿಸಿಎಂ, ಸಚಿವರು ಒಳ್ಳೆ ಕೆಲಸ ಮಾಡುತ್ತಿದ್ದಾರೆ ಎಂದರು. 

ಮೂಡಾ ಹಗರಣ ವಿಚಾರವಾಗಿ ಮತನಾಡಿದ ಅವರು, ಮೂಡಾ ಯಾರ ಕಾಲದಲ್ಲಿ ಆಗಿದೆ..? ಬಿಜೆಪಿಯವರ ಕಾಲದಲ್ಲಿ ಆಗಿದೆ. ಅವರ ಕಾಲದಲ್ಲೇ ಎಲ್ಲಾ ಆಗಿದೆ, ಆದ್ರೆ ಈಗ ಅವ್ರೇ ಪ್ರೊಟೆಸ್ಟ್ ಮಾಡುತ್ತಿದ್ದಾರೆ.‌ ಕರೆಂಟ್ ಬಿಲ್ ಆರಂಭದಲ್ಲಿ ಜಾಸ್ತಿ ಮಾಡಿದ್ದೇ ಬಿಜೆಪಿಯವರು. ನೂರು ಸುಳ್ಳು ಹೇಳಿ, ಅದನ್ನ ಸತ್ಯ ಮಾಡೋದಕ್ಕೆ ಹೊರಟಿದ್ದಾರೆ. ಮೂಡಾದಲ್ಲಿ ಯಾರು ತಪ್ಪು ಮಾಡಿದ್ರೂ ತನಿಖೆ ಮುಗಿಯುವವರೆಗೂ ಕಾಯೋಣ. ಸಿಎಂ ಬದಲಾವಣೆ ಬಿಜೆಪಿಯವರಿಗೆ ಮಾತ್ರ ಬೇಕಿದೆ ಎಂದು ತಿಳಿಸಿದರು. 

ಶಾಸಕರಾದವರು ಅನುದಾನ ಕೇಳುತ್ತಾರೆ, ಅದು ಅವರ ಕೆಲಸ. ಗ್ಯಾರಂಟಿ ಯೋಜನೆಯಿಂದ ಯಾವುದೇ ಸಮಸ್ಯೆ ಇಲ್ಲ. ಗ್ಯಾರಂಟಿ ಫಲಾನುಭವಿಗಳು ಮಹಿಳೆಯರೇ ಹೆಚ್ಚಿದ್ದಾರೆ. ಗ್ಯಾರಂಟಿ ಹಣ ಜನರಿಗೆ ಅಲ್ವಾ ನಾವು ಕೊಡೋದು. ನಾವು ಜನರಿಗೆ ಏನು ಬೇಡಿಕೆ ಕೊಟ್ಟಿದ್ವೋ ಅದನ್ನ ಈಡೇರಿಸಿದ್ದೇವೆ ಎಂದು ಸಚಿವ ಜಾರ್ಜ್ ತಿಳಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button