*ಸುಪ್ರೀಂ ಕೋರ್ಟ್‌ನ ನಕಲಿ ಆದೇಶ ಸೃಷ್ಟಿಸಿ ಜೀವಾವಧಿ ಕೈದಿ ಬಿಡುಗಡೆ*: *ಜೈಲು ಡಿಐಜಿ ಸೋಮಶೇಖರ್ ವಶಕ್ಕೆ*

ಪ್ರಗತಿವಾಹಿನಿ ಸುದ್ದಿ: ಸುಪ್ರೀಂ ಕೋರ್ಟ್‌ನ ನಕಲಿ ಆದೇಶ ಸೃಷ್ಟಿಸಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಕೈದಿಯನ್ನು ಜೈಲಿನಿಂದ ಬಿಡುಗಡೆ ಮಾಡಿದ ಆರೋಪದ ಪ್ರಕರಣದಲ್ಲಿ ಜೈಲು ಡಿಐಜಿ ಸೋಮಶೇಖರ್ ಅವರನ್ನು ಪರಪ್ಪನ ಅಗ್ರಹಾರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರಕರಣದ ತನಿಖೆ ಮುಂದುವರಿದಿದ್ದು, ಈ ಪ್ರಕರಣದಲ್ಲಿ ಅಧಿಕಾರಿಯ ಪಾತ್ರದ ಬಗ್ಗೆಯೂ ವಿಚಾರಣೆ ನಡೆಯುತ್ತಿದೆ.
2018ರಲ್ಲಿ ಕೊಲೆ ಪ್ರಕರಣವೊಂದರಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಶಂಕರ್ ಎಂಬ ಕೈದಿಯನ್ನು ನಕಲಿ ಸುಪ್ರೀಂ ಕೋರ್ಟ್ ಆದೇಶದ ಆಧಾರದ ಮೇಲೆ ಜೈಲಿನಿಂದ ಬಿಡುಗಡೆ ಮಾಡಲಾಗಿತ್ತು. ಈ ನಕಲಿ ಆದೇಶವನ್ನು ಜೈಲಿನ ಎಸ್‌ಡಿಎ ಆಗಿದ್ದ ಶ್ರೀಕಾಂತ್ ಎಸ್. ಸೃಷ್ಟಿಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
ತನಿಖೆಯ ಪ್ರಕಾರ, ನಕಲಿ ಆದೇಶದ ಆಧಾರದ ಮೇಲೆ 2018ರ ನವೆಂಬರ್ 13ರಂದು ಶಂಕರ್‌ನನ್ನು ಜೈಲಿನಿಂದ ಬಿಡುಗಡೆ ಮಾಡಲಾಗಿತ್ತು. ಪ್ರಕರಣ ಬೆಳಕಿಗೆ ಬಂದ ಬಳಿಕ ನಕಲಿ ಆದೇಶದ ಮೂಲ ಹಾಗೂ ಕೈದಿ ಬಿಡುಗಡೆಯಲ್ಲಿ ಭಾಗಿಯಾಗಿದ್ದವರ ಕುರಿತು ತನಿಖೆ ಚುರುಕುಗೊಂಡಿದೆ.
ಈ ಪ್ರಕರಣದಲ್ಲಿ ಕೈದಿ ಶಂಕರ್ ಹಾಗೂ ನಕಲಿ ಆದೇಶ ಸೃಷ್ಟಿಸಿದ ಆರೋಪ ಎದುರಿಸುತ್ತಿರುವ ಶ್ರೀಕಾಂತ್ ಎಸ್. ಅವರನ್ನು ಈಗಾಗಲೇ ಬಂಧಿಸಲಾಗಿದೆ. ಇಬ್ಬರ ವಿಚಾರಣೆಯ ಬಳಿಕ ಪ್ರಕರಣದಲ್ಲಿ ಮತ್ತಷ್ಟು ಮಾಹಿತಿ ಹೊರಬರುವ ನಿರೀಕ್ಷೆಯಿದೆ.
ಇದೀಗ ಅಂದಿನ ಜೈಲು ಚೀಫ್ ಸೂಪರಿಂಟೆಂಡೆಂಟ್ ಆಗಿದ್ದ ಸೋಮಶೇಖರ್ ಅವರ ಪಾತ್ರದ ಮೇಲೂ ಪೊಲೀಸರ ತನಿಖೆ ಕೇಂದ್ರೀಕೃತವಾಗಿದೆ. ಸದ್ಯ ಡಿಐಜಿ ಹುದ್ದೆಯಲ್ಲಿರುವ ಸೋಮಶೇಖರ್ ಅವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ನಕಲಿ ಸುಪ್ರೀಂ ಕೋರ್ಟ್ ಆದೇಶ ಹೇಗೆ ಸಿದ್ಧವಾಯಿತು, ಜೈಲು ದಾಖಲೆಗಳಲ್ಲಿ ಅದನ್ನು ಹೇಗೆ ಬಳಸಲಾಯಿತು ಹಾಗೂ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಕೈದಿ ಬಿಡುಗಡೆಗೊಳ್ಳಲು ಯಾವ ರೀತಿಯ ಪ್ರಕ್ರಿಯೆ ನಡೆದಿದೆ ಎಂಬ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಪ್ರಕರಣದಲ್ಲಿ ಬಂಧಿತರಾಗಿರುವ ವ್ಯಕ್ತಿಗಳ ಹೇಳಿಕೆಗಳು ಹಾಗೂ ಲಭ್ಯ ದಾಖಲೆಗಳ ಆಧಾರದ ಮೇಲೆ ಮುಂದಿನ ತನಿಖೆ ನಡೆಯುತ್ತಿದೆ. ಸೋಮಶೇಖರ್ ವಿರುದ್ಧದ ಆರೋಪಗಳ ಕುರಿತು ತನಿಖೆಯ ಅಂತಿಮ ಫಲಿತಾಂಶದ ಬಳಿಕ ಹೆಚ್ಚಿನ ಸ್ಪಷ್ಟತೆ ಸಿಗಲಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




