Latest

ಬದುಕು ನಿಸರ್ಗ ಕೊಡ ಮಾಡಿದ ಬಹುದೊಡ್ಡ ಉಡುಗೊರೆ; ಸಾರ್ಥಕತೆಯ ಕಡೆಗೆ ಪಯಣ ಸಾಗಲಿ

-ಲೇಖನ : ರವಿ ಕರಣಂ.
ಅವರವರ ಸ್ಥಿತಿಗತಿಗಳಿಗೆ ಅನುಗುಣವಾಗಿ ಚಿನ್ನದ ತಟ್ಟೆ, ಬೆಳ್ಳಿ ತಟ್ಟೆ, ಸ್ಟೀಲ್ ತಟ್ಟೆ, ಅಲ್ಯೂಮಿನಿಯಂ ತಟ್ಟೆ, ಬಾಳೆ ಎಲೆ, ಕೆಲವೊಮ್ಮೆ ಪೇಪರ್ ಪ್ಲೇಟ್ ಗಳಲ್ಲಿ ಆಹಾರವನ್ನು ಸೇವಿಸುವ ಪರಿಪಾಠವಿದೆ. ಅದರ ಮೇಲೆ ಆರ್ಥಿಕ ಮಟ್ಟವನ್ನು ಅಳತೆ ಮಾಡಬಹುದೇ ಹೊರತು, ನೆಮ್ಮದಿ, ಸಂತೋಷವಲ್ಲ ಎಂಬುದನ್ನು ಎಲ್ಲರೂ ಗಮನಿಸಬೇಕು. ತಿಂದ ಆಹಾರದ ರುಚಿ, ಶುಚಿತ್ವ ,ಗುಣಮಟ್ಟ ತೃಪ್ತಿ ತಂದಿತೇ? ಅದು ಮುಖ್ಯ. ಯಾವ ವಸ್ತು – ಪದಾರ್ಥದಲ್ಲಿ ತಿಂದಿದ್ದೇವೆ ಎಂಬುದು ಮುಖ್ಯವಲ್ಲ. ಯಾವುದೇ ವಸ್ತುವಿನಲ್ಲಿ ತಿಂದರೂ ತಿಂದ ಪದಾರ್ಥಕ್ಕೆ ಬೆಲೆ ಇದೆಯೇ ಹೊರತು ಉಳಿದೆಲ್ಲವುಗಳು ಕೂಡ ಗೌಣವಾಗಿ ಬಿಡುತ್ತವೆ. ಕಾರಣ, ಅವು ಯಾವುವೂ ಶಾಶ್ವತವಾಗಿ ನಮ್ಮ ಜೊತೆಗೆ ಇರುವಂತಹವುಗಳಲ್ಲ. ಆದರೆ ನಮಗೆ ಆಹಾರ ಲಭ್ಯತೆ,ನೆಮ್ಮದಿ, ಸಂತೋಷ ಯಾವತ್ತೂ ನಿರಂತರವಾಗಿ ಇರುವುದು ಮುಖ್ಯ.

ಜನರ ಜೀವನವೇ ಹಾಗೆ. ನಾಲ್ಕು ಜನರ ಮುಂದೆ ತಮ್ಮ ಪ್ರತಿಷ್ಠೆಯನ್ನು, ಆರ್ಥಿಕ ಸ್ಥಿತಿಗತಿಗಳನ್ನು ತೋರಿಸಿಕೊಳ್ಳುವ ಹುಚ್ಚು ಹಿಡಿದು ಬಿಟ್ಟಿರುತ್ತದೆ. ಅದಕ್ಕೆ ಯಾರೂ ಕೂಡ ಕಡಿವಾಣ ಹಾಕಲು ಸಾಧ್ಯವಿಲ್ಲ. ಜಗತ್ತು ತಾನು ತಿಳಿದುಕೊಂಡಂತೆ ಇದೆ ಎಂದೇ ಭಾವಿಸುವವರ ಸಂಖ್ಯೆ ಅಪಾರ. ಜೀವನದ ಸತ್ಯ ಅವರಿಗೆ ಅರಿವಾಗುವುದು ತುಂಬಾ ತಡವೇ ಆಗಿರುತ್ತದೆ. ಭ್ರಮಾ ಲೋಕದಲ್ಲಿ ತೇಲುವ ಮನಸುಗಳಿಗೆ ಭೂಮಿಯ ಮೇಲೆ ಪಾದಗಳು ಅಂಟಿಕೊಂಡಿರುವ ಸತ್ಯ ಗೊತ್ತಿರುವುದಿಲ್ಲ.
ಅಲ್ಪ ಜೀವಿತದ ಕಾಲದಲ್ಲಿ ನೆಮ್ಮದಿಯಾಗಿ, ಸಂತೋಷದಿಂದ, ಜೀವನದ ಸುಖವನ್ನು ಅನುಭವಿಸುವುದನ್ನು ಬಿಟ್ಟು, ಇವರು ಗೊಂದಲ-ಗೋಜಲು, ಕಷ್ಟ -ನಷ್ಟ, ನರಳಿಕೆಯಲ್ಲಿ ತೊಡಗಿಕೊಳ್ಳುತ್ತಾರೆಂದರೆ ಏನನ್ನಬೇಕು? ಯಾವ ಪುರುಷಾರ್ಥಕ್ಕಾಗಿ ಎಂಬುದು ಅವರಿಗೂ ಗೊತ್ತಿಲ್ಲ. ನಾಲ್ಕು ಜನರ ಮುಂದೆ ಗೌರವದಿಂದ ಬಾಳಲು ಬಂಗಲೆ, ಕಾರು, ಜಮೀನು, ತೋಟ-ಗದ್ದೆ, ಸೈಟು,ಒಡವೆ-ವಸ್ತ್ರ ಇವುಗಳೆಲ್ಲವೂ ಇರಬೇಡವೇ? ಎಂದುಕೊಂಡು ಗಂಟು ಮಾಡುತ್ತಲೇ, ಇಡೀ ಜೀವನದ ಆಯುಷ್ಯವನ್ನು ಕಳೆದು, ಕಡೆಯಲ್ಲಿ ಕೊಂಚವೂ ಅನುಭವಿಸದೆ ಹೋಗುವುದು. ಇದಕ್ಕೆ ಏನೆನ್ನಬೇಕು? ಹಾಗೆಂದ ಮಾತ್ರಕ್ಕೆ ಎಲ್ಲರ ಹಣೆಬರಹವು ಇಷ್ಟೇ ಎಂದು ಅರ್ಥವಲ್ಲ. ಬಹುತೇಕ ಜನರ ಹಣೆಬರಹ ಹೀಗೆ ಎಂದು ಹೇಳಬಹುದು.

ಯಾಕೆ ಈ ವಿಷಯದ ಬಗ್ಗೆ ಮಾತನಾಡುತ್ತಿದ್ದೇನೆ ಎಂದರೆ, ಇವತ್ತು ಜನರಲ್ಲಿ ತಾನು ಚೆನ್ನಾಗಿ ಜೀವಿಸುತ್ತಿದ್ದೇನೆ ಎಂದು ತೋರಿಸಿಕೊಳ್ಳುವುದೇ ಒಂದು ಸ್ಪರ್ಧೆಯಾಗಿ ಹೋಗಿದೆ. ಇದನ್ನು ಬಹಳಷ್ಟು ಕಡೆ ಗಮನಿಸಿದ್ದೇನೆ. ಮಾತುಗಳಲ್ಲಿ ಆಲಿಸಿದ್ದೇನೆ. ಭಾವನೆಗಳನ್ನು ಹೆಕ್ಕಿ ತೆಗೆದಿದ್ದೇನೆ. ಇಂಥದ್ದನ್ನೆಲ್ಲ ಕೇಳಿದಾಗ ಆಶ್ಚರ್ಯ ಉಂಟಾಗಿದೆ. ಅದರಲ್ಲಿ ಏನು ವಿಶೇಷತೆ ಇದೆ? ಕೇವಲ 50, 70, 80 ಬೇಡ 100 ವರ್ಷಗಳ ಕಾಲ ನಮಗೆ ದೇವರು ಆಯುಷ್ಯವನ್ನು ಕೊಟ್ಟಿದ್ದಾನೆ ಎಂದು ಇಟ್ಟುಕೊಳ್ಳೋಣ. ಅದರಲ್ಲಿ ಎಷ್ಟು ವರ್ಷ ನೆಮ್ಮದಿಯಾಗಿದ್ದೆವು ಎಂಬುದರ ಬಗ್ಗೆ ಯಾರೂ ವಿಚಾರ ಮಾಡಿದ್ದೇ ಇಲ್ಲ. ಬರೀ ಗೋಳಾಟ, ತೊಳಲಾಟ, ತಳಮಳ, ತಲ್ಲಣಗಳ ನಡುವೆ ಜೀವನವನ್ನು ಸಾಗಿಸಿ, ಹೈರಾಣಾಗಿರುವ ಜೀವಗಳ ಕಡೆಯ ನುಡಿಗಳನ್ನು ಕೇಳಿದಾಗ, ಬದುಕೆಂದರೆ ಇಷ್ಟೇನಾ? ಎನಿಸಿ ಬಿಡುವುದಿದೆ. ದೇಹವೆಲ್ಲಾ ಮಾಗಿ ಹಣ್ಣು ಹಣ್ಣಾಗಿ ಇನ್ನೇನು ಭೂಲೋಕದಿಂದ ದೂರ ಸರಿಯಬೇಕೆನ್ನುವ ವಯಸ್ಸಿನಲ್ಲೂ ಕೂಡ ನೆಮ್ಮದಿ ಕಾಣದೆ, ಹಪಹಪಿಸಿ, ಹೋಗುತ್ತಿರುವವರ ಸಂಖ್ಯೆ ಅತ್ಯಧಿಕ. ಆಗ ನನಗನಿಸುವುದು ಈ ಮನಸ್ಸು ಏಕೆ ಇನ್ನೂ ಮಾಗಿಲ್ಲ ? ಅಂತಾ. ಮನುಷ್ಯನ ಬದುಕಿನ ಉದ್ದೇಶವೇನು? ಜೀವನದ ಅಂತಿಮ ಗುರಿ ಏನು? ಅಸಂತೋಷ, ಅತೃಪ್ತಿ, ಅಸಮಾಧಾನಗಳಿಂದ ಈ ಭೂಮಿಯಿಂದ ತೆರಳುವುದು !

ಆದರೆ ಅದು ಹಾಗಲ್ಲ. ಜೀವನ ಎಂದರೆ ಅಭೂತಪೂರ್ವವಾದ ಪರಿಕಲ್ಪನೆ. ಅಮೂಲ್ಯ.ಅಮೋಘ, ಅನನ್ಯ, ಅದ್ಭುತ, ಅದ್ವಿತೀಯ. ಜೀವನವೆಂಬುದೇ ರಸಗವಳ. ಹೀರ ಬಲ್ಲವರಿಗಷ್ಟೇ ಗೊತ್ತು ಅದರ ಮಹತ್ವ. ಈ ಭೂಮಿಯ ಮೇಲೆ ನಾನು ಎಷ್ಟು ವರ್ಷ ಬದುಕಿದ್ದೆ ಎನ್ನುವುದಕ್ಕಿಂತ, ಎಷ್ಟು ವರ್ಷಗಳ ಕಾಲ ಸಂತೋಷದಿಂದ, ನಗುನಗುತ್ತಾ ಸುಖದಿಂದ ಇದ್ದೆ? ಎನ್ನುವುದೇ ದಾಖಲೆಯಾಗಿ ಉಳಿಯಬೇಕು ಅಲ್ಲವೇ? ಸಾವಿನ ಕಡೆ ಘಳಿಗೆಯಲ್ಲಿ ದೇವರೇ ಇನ್ನೂ ನಾಲ್ಕು ದಿನ ಬದುಕುವ ಸೌಭಾಗ್ಯ ಕರುಣಿಸಬಾರದೇ? ಎಂದು ಜೀವ ಮೊರೆಯಿಡಬೇಕು. ಅಷ್ಟರ ಮಟ್ಟಿಗೆ ಬದುಕನ್ನು ಪ್ರೀತಿಸಬೇಕು. ಅನುಭವಿಸಬೇಕು. ಆಸ್ವಾದಿಸಬೇಕು. ಹಾಗೆ ಮಾಡಿಕೊಳ್ಳುವುದಿದೆಯಲ್ಲ ಅದು ತುಂಬಾ ಕಾಠಿಣ್ಯ!

ಭೂಮಿಯ ಮೇಲೆ ಬದುಕಬೇಕಾದದ್ದು ನಾನು, ನನಗೋಸ್ಕರ ಮೊದಲು. ನಂತರ ಉಳಿದೆಲ್ಲರ ಕಡೆಗೆ ಗಮನ ಹರಿಸಬೇಕು. ಇದು ಸೃಷ್ಟಿ ನಿಯಮ. ಪರರಿಗಾಗಿ ಸಹಾಯಮಾಡು. ಬದುಕು.ಲೋಕ ಹಿತಕ್ಕೋಸ್ಕರ ತ್ಯಾಗ ಮಾಡು ಎಂದೆಲ್ಲ ವೇದಾಂತಿಗಳು ಹೇಳುತ್ತಾರೆ. ಆದರೆ ನೆಲೆ ನಿಲ್ಲಲು ನನಗೆ ಜಾಗ ಇಲ್ಲ ಎಂದಾಗ, ನಾನು ಹೇಗೆ ಇನ್ನೊಬ್ಬರಿಗೆ ನೆಲೆ ಕಾಣಿಸಬಹುದು? ಎಂಬುದು ನಿಗೂಢ ಪ್ರಶ್ನೆಯಾಗಿ ಉಳಿಯುತ್ತದೆ. ಅಲ್ಲವೇ? ಕಡೆಗದು, “ಹೊಟ್ಟೆಗೆ ಹಿಟ್ಟಿಲ್ಲ ಜುಟ್ಟಿಗೆ ಮಲ್ಲಿಗೆ ಹೂವು” ಎಂಬಂತಾಗಿ ಬಿಡುತ್ತದೆ.

ನಾವು ದುಡಿಯುವುದು ನಮಗೋಸ್ಕರವಾಗಿರುತ್ತದೆ. ಪರರಿಗೆ ಸಹಾಯ ಮಾಡುತ್ತಾ ಹೋಗಿ ಬಿಟ್ಟರೆ, ಆ ಪರರು ಎಂಬುವವರು ದುಡಿಯದೇ, ಪ್ರಯತ್ನಪಡದೇ ನಿಷ್ಕ್ರಿಯರಾಗಿ, ಕುಳಿತಲ್ಲಿಯೇ ತಿನ್ನುವಂತಹ ಗುಣವನ್ನು ಬೆಳೆಸಿಕೊಳ್ಳುತ್ತಾರೆ. ಇದಕ್ಕೆ ನೀವೇನು ಹೇಳುತ್ತೀರಿ ? ಒಂದು ವೇಳೆ, ಅವರಿಗೆ ಕಾಲು, ಕೈ, ಕಣ್ಣುಗಳಿಲ್ಲ. ಅಂಗ ಊನವಾಗಿದೆ ಎಂದಾಗ, ಸಹಾಯಕ್ಕೊಂದು ಅರ್ಥವಿದೆ. ಎಲ್ಲಾ ರೀತಿಯಿಂದಲೂ ಗಟ್ಟಿಮುಟ್ಟಾಗಿದ್ದು, ದುಡಿಯಲು ಅರ್ಹವಾಗಿದ್ದಂತವರಿಗೆ, ಸಹಾಯ ಮಾಡುತ್ತಾ ಹೋದರೆ, ಆ ಸಹಾಯಕ್ಕೆ ಬೆಲೆ ಇರುವುದಿಲ್ಲ ಎಂಬುದು ನನ್ನ ಅನಿಸಿಕೆ.

ಅದಿರಲಿ ಆಸ್ತಿ ಮಾಡುವ ಹುಚ್ಚು ಬಹಳಷ್ಟು ಜನರಿಗೆ ಇದೆ. ಒಂದು ಕಾಲದಲ್ಲಿ ಲಕ್ಷಾಧಿಪತಿ ಎಂದರೆ ಅತ್ಯಂತ ದೊಡ್ಡ ಶ್ರೀಮಂತ ವ್ಯಕ್ತಿ ಎಂದು ಪರಿಗಣಿಸುತ್ತಿದ್ದ ಕಾಲವಿತ್ತು. ಈಗ ಲಕ್ಷ ,ಕೋಟಿ,ನೂರು ಕೋಟಿಗಳಿಗೆ ಬೆಲೆ ಇಲ್ಲವಲ್ಲ! ಕೇವಲ ಸಾವಿರ, ಲಕ್ಷ ಕೋಟಿಗಳಲ್ಲಿ ಮಾತು. ಒಂದು ಮನೋರಂಜನೆಯ ಮಾಧ್ಯಮವಾದ ಸಿನಿಮಾ 1000, 2000 ಕೋಟಿಗಳ ಲೆಕ್ಕದಲ್ಲಿದೆ. ಇದು ಸತ್ಯವೋ! ಸತ್ಯಕ್ಕೆ ದೂರವಾದ ವಿಷಯವೋ! ಎಂಬುದೇ ಕನ್ಫ್ಯೂಷನ್.

ಜೀವನವನ್ನು ಕಬ್ಬಿನಂತೆ ಸವಿಯ ಬಲ್ಲ ಹೀರಬಲ್ಲ ಮನಸ್ಸು ಇದುವರೆಗೂ ಸಿಕ್ಕೇ ಇಲ್ಲ. ಎಲ್ಲ ಕಡೆಗಳಲ್ಲೂ ಬ್ಯಾಂಕ್ ಬ್ಯಾಲೆನ್ಸ್, ಆಸ್ತಿ, ಐಷಾರಾಮಿ ಸೌಕರ್ಯಗಳ ಬಗೆಗೆ ಚಿಂತಿಸುವ, ಯೋಚಿಸುವ, ಯೋಜನೆಗಳನ್ನು ಹಾಕುವ ವ್ಯಕ್ತಿಗಳನ್ನು ನೋಡಿದ್ದೇನೆ. ಆದರೆ, ನೆಮ್ಮದಿಗಾಗಿ ನಾನೇನು ಮಾಡಬೇಕು? ಎಂಬುದರ ಬಗ್ಗೆ ವಿಚಾರ ಮಾಡಿದ್ದನ್ನು ಇದುವರೆಗೂ ಕಾಣಲೇ ಇಲ್ಲ ಎಂಬುದೇ ಸ್ವಾರಸ್ಯಕರ ಸಂಗತಿ.

ನಿಜ ಹೇಳಬೇಕೆಂದರೆ ಸರ್ವ ಸಂಘ ಪರಿತ್ಯಾಗಿಯಾದ ಕಾವಿಯಲ್ಲೂ ಕೂಡ ಇಂತಹದೊಂದು ಗುಣವನ್ನು ಕಂಡಿಲ್ಲ. ಪ್ರತಿಯೊಂದು ಕಾವಿಯಲ್ಲಿಯೂ ಕೂಡ ಅರಿಷಡ್ವರ್ಗಗಳು ತುಂಬಿ ತುಳುಕುತ್ತಿರುವುದನ್ನು ನೀವೇ ನೋಡಿದ್ದೀರಿ ಅದರ ಬಗ್ಗೆ ಮಾತನಾಡುವುದೇ ಬೇಡ. ಪೂರ್ವಜನ್ಮ ಪುನರ್ಜನ್ಮಗಳ ಬಗೆಗೆ ನಾನು ಮಾತನಾಡಲಾರೆ. ಅಷ್ಟೊಂದು ಧಾರ್ಮಿಕತೆಯು ಒಡಮೂಡಿಲ್ಲ. ವಾಸ್ತವ ಜಗತ್ತಿನಲ್ಲಿ ಹೇಗೆ ನೆಮ್ಮದಿಯಿಂದ ಇರಬೇಕೆಂಬುದರ ಬಗ್ಗೆ ಸಾಕಷ್ಟು ಯೋಚನೆ ಮಾಡಿದ್ದಿದೆ. ಹಾಗೆಂದು ವೇದಾಂತಕ್ಕೆ ಕೈ ಹಾಕಿಲ್ಲ. ಭೋಗಕ್ಕೆ ಕೈ ಚಾಚಿಲ್ಲ. ಮನಸು ತನಗೆ ಬೇಕಾದುದನ್ನು ಒಂದು ಪ್ರಮಾಣದಲ್ಲಿ ಇಟ್ಟುಕೊಳ್ಳಬೇಕು. ಅದನ್ನು ಪಡೆದಾಗ ಅದಕ್ಕೆ ತೃಪ್ತಿಯಾಗುತ್ತದೆ. ಸಂತೋಷವಾಗುತ್ತದೆ. ಕೈಗೆ ನಿಲುಕದ್ದನ್ನು ಹಿಡಿಯಲು ಹೋದಾಗ ಸಿಗದೇ ದುಃಖವಾಗುತ್ತದೆ. ಇದಕ್ಕಿಂತ ದೊಡ್ಡದಾದ ಪಾಠ ಬೇಕಿಲ್ಲ ಎಂದು ಅನಿಸುತ್ತದೆ. ಕಾರಣ ನಮ್ಮ ಸಾಮರ್ಥ್ಯದ ಬಗ್ಗೆ ನಮಗೆ ಅರಿವಿಲ್ಲದಿರುವುದು. ನಮ್ಮ ಸಾಮರ್ಥ್ಯಕ್ಕೆ ಮೀರಿದ ವಿಷಯಗಳಿಗೆ ನಾವು ಕೈ ಹಾಕುತ್ತೇವೆ.ಆಗಲೇ ನೋಡಿ ನಿರಾಶೆ, ದುಃಖ- ದುಮ್ಮಾನ, ಜಿಗುಪ್ಸೆ, ಬೇಸರಿಕೆ ಎಲ್ಲವೂ ಶುರುವಾಗುತ್ತವೆ.

ಅದಲ್ಲದೆ ನಮ್ಮನ್ನು ಪರರಿಗೆ ಹೋಲಿಸಿಕೊಳ್ಳುವುದಿದೆಯಲ್ಲ ಅದಂತೂ ಬಹಳ ಅಪಾಯಕಾರಿ ಸಂಗತಿ. ಆವಾಗಲೇ ನಮ್ಮಲ್ಲಿ ಕೀಳರಿಮೆ ಭಾವನೆಗಳು ಬೆಳೆಯುತ್ತಾ ಹೋಗಿ,ಸಾಧನೆಯನ್ನು ಮಾಡುವುದು ಬಿಟ್ಟು ನರಳುವುದಕ್ಕೆ ನಿಲ್ಲುತ್ತೇವೆ ಅಷ್ಟೇ. ಮೊದಲು ನಾವು ನಾವಾಗುವುದನ್ನು ಕಲಿತುಕೊಳ್ಳಬೇಕು, ಇನ್ನೊಬ್ಬರಿಗೆ ಹೋಲಿಕೆ ಮಾಡಿಕೊಂಡು ಅವರಂತಾಗಲು ಹೋಗುವುದು ಮೂರ್ಖತನ ಎನಿಸುತ್ತದೆ. ನಮ್ಮತನ, ನಮ್ಮ ಅಸ್ತಿತ್ವ ವಿಭಿನ್ನವಾಗಿರಬೇಕು. ಭೂಮಿಯ ಮೇಲೆ 750 ಕೋಟಿಯಷ್ಟು ಜನರಿರಬಹುದು. ಅಷ್ಟರಲ್ಲಿ ನಾವು ಯಾವ ಮೂಲೆಯಲ್ಲಿದ್ದೇವೋ ! ಹೋಲಿಕೆ ಬೇಕಾಗಿಯೇ ಇಲ್ಲ.

ಏನೇ ಇರಲಿ-ಬಿಡಲಿ, ಬರಲಿ-ಬಾರದಿರಲಿ, ಸಿಗಲಿ-ಸಿಗದಿರಲಿ ಚಿಂತಿಸುವ ಅಗತ್ಯವಿಲ್ಲ. ನಿಸರ್ಗದ ಕೃಪೆಯಂತೂ ಇದ್ದೇ ಇದೆ. ಗಾಳಿ,ನೀರು,ಮಣ್ಣು,ಬೆಳಕು,ಅಗ್ನಿ ಈ ಪಂಚಭೂತಗಳಿಗೆ ಬಾಡಿಗೆ ಕೊಡಬೇಕಿಲ್ಲ. ವಿಶಾಲ ಜಗತ್ತು ನಮಗೆಲ್ಲ ಕೊಡಬೇಕಾದುದನ್ನು ಕೊಟ್ಟಿದೆ. ಅದಕ್ಕಾಗಿ ಹಿರಿಯರು ಹೇಳಿಬಿಟ್ಟಾಗಿದೆ. ಹುಟ್ಟಿಸಿದ ದೇವರು ಹೊಟ್ಟೆಗಿಟ್ಟು ಕಾಯ್ತಾನೆ ಅಂತಾ.ಅದರಲ್ಲಿ ತೃಪ್ತಿಯಿಂದಿರಲು ಮತ್ತೇನು ಬೇಕು? ನಾಗರಿಕತೆ, ಸಂಸ್ಕೃತಿ ಬಂದಾಗಿನಿಂದ ಈ ಪರಿಯ ಹೋರಾಟವಿದೆ. ಅದಕ್ಕಿಂತ ಮುನ್ನ ಕೇವಲ ಆಹಾರ-ರಕ್ಷಣೆ ಮಾತ್ರ ಹೋರಾಟವಿತ್ತು.

ಬದುಕು ಸುಂದರ. ಅದನ್ನು ಸಂತೋಷದಿಂದ ಕಳೆಯಬೇಕು. ಅತೃಪ್ತಿಯಿಂದಲ್ಲ. ಮನ ಪ್ರಪುಲ್ಲವಾಗಿಡಲು ಪ್ರಯತ್ನಿಸಬೇಕು. ಮನಸ್ಸನ್ನು ಅನಾರೋಗ್ಯಕ್ಕೆ ತಳ್ಳುವ ವಿಷಯಗಳಿಂದ ದೂರ ಉಳಿಯುವುದು ಲೇಸು.
ಬದುಕು ನಿಸರ್ಗ ಕೊಡ ಮಾಡಿದ ಬಹುದೊಡ್ಡ ಉಡುಗೊರೆ. ಸಾರ್ಥಕತೆಯ ಕಡೆಗೆ ಪಯಣ ಸಾಗಬೇಕು.

https://pragati.taskdun.com/ranadeep-surjevalabelagavipressmeet/
https://pragati.taskdun.com/satish-jarakiholikakatiwomens-day/
https://pragati.taskdun.com/the-countrys-exports-will-be-a-historic-record-this-year-minister-piyush-goyal/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button