ಪ್ರಗತಿವಾಹಿನಿ ಸುದ್ದಿ, ನವದೆಹಲಿ – ಕೊರೋನಾ ವಿರುದ್ಧದ ಹೋರಾಟಕ್ಕೆ ಇಡೀ ದೇಶ ಒಗ್ಗಟ್ಟಾಗಿ ಕೆಲಸ ಮಾಡಬೇಕು ಎನ್ನುವ ಸಂದೇಶವನ್ನು ಮತ್ತೊಮ್ಮೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ, ಏಪ್ರಿಲ್ 5ರಂದು ರಾತ್ರಿ ದೀಪ ಬೆಳಗಿಸಿ ಎಂದು ಕರೆ ನೀಡಿದ್ದಾರೆ.
ದೇಶವನ್ನುದ್ದೇಶಿಸಿ ಮಾತನಾಡಿದ ಅವರು, ಏಪ್ರಿಲ್ 5ರ ರಾತ್ರಿ 9 ಗಂಟೆಗೆ ಮನೆಯ ಎದುರು ಇಲ್ಲವೆ ಬಾಲ್ಕನಿಯಲ್ಲಿ ನಿಂತು 9 ನಿಮಿಷ ಮೊಂಬತ್ತಿ, ದೀಪ, ಬ್ಯಾಟರಿ ಇಲ್ಲವೆ ಮೊಬೈಲ್ ಲೈಟ್ ಬೆಳಗಿಸಿ. ಈ ಸಂದರ್ಭದಲ್ಲಿ ಮನೆಯ ಲೈಟ್ ಗಳನ್ನು ಸಂಪೂರ್ಣ ಆರಿಸಿರಿ ಎಂದು ಕರೆ ನೀಡಿದ್ದಾರೆ.
ಮಾರ್ಚ್ 22ರಂದು ನಡೆಸಿದ ಜನತಾ ಕರ್ಫ್ಯೂ ಅತ್ಯಂತ ಯಶಸ್ವಿಯಾಗಿದೆ. ಇಡೀ ವಿಶ್ವವೇ ಇದನ್ನು ಪ್ರಶಂಸಿಸಿದೆ ಮತ್ತು ಅನುಸರಿಸುತ್ತಿದೆ ಎಂದ ಮೋದಿ, ಇನ್ನೂ ಎಷ್ಟು ದಿನ ಈ ಪರಿಸ್ಥಿತಿ ಎಂದು ನೀವು ಯೋಚಿಸುತ್ತಿರಬಹುದು. ಆದರೆ ಕೊರೋನಾ ಹೊಡೆದೋಡಿಸಲು ಇದು ಅನಿವಾರ್ಯ ಎಂದರು.
ಏಪ್ರಿಲ್ 5ರಂದು ಎಲ್ಲರೂ ಸಾಮಾಜಿಕ ಅಂತರ ಕಾಯ್ದುಕೊಂಡೇ ದೀಪ ಬೆಳಗಿಸಬೇಕು. ಯಾರೂ ಹತ್ತಿರ ಸೇರಬಾರದು. ರಸ್ತೆಗೆ ಇಳಿಯಬಾರದು. ಮಹಾಭಾರತದ ಸಂದೇಶವನ್ನು ಮನಸ್ಸಿನಲ್ಲಿ ಸ್ಮರಿಸಿಕೊಳ್ಳಿ. ನಾವು 130 ಕೋಟಿ ಜನರೂ ಒಂದಾಗಿದ್ದೇವೆ ಎನ್ನುವ ಸಂದೇಶವನ್ನು ಸಾರಬೇಕಾಗಿದೆ ಎಂದೂ ಅವರು ವಿನಂತಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ