
ಪ್ರಗತಿವಾಹಿನಿ ಸುದ್ದಿ: ಬೆಳಗಾವಿ : ಬೆಳಗಾವಿಯ ಲಿಂಗಾಯತ ಬಿಸಿನೆಸ್ ಫೊರಮ್ನ ಮಹಿಳಾ ಘಟಕದ ಉದ್ಘಾಟನೆ ಹಾಗೂ ಪದಗ್ರಹಣ ಸಮಾರಂಭವು ಇತ್ತೀಚೆಗೆ ನಗರದ ಹೊರವಲಯದ ಕಾಕತಿ ವುಡ್ರೋಸ್ ಹೋಟೆಲ್ ಸಭಾಭವನದಲ್ಲಿ ನೆರವೇರಿತು.
ಉದ್ಯಮಿ ಅಜಿತ ಪಾಟೀಲ ಅವರು ಮಹಿಳಾ ಘಟಕವನ್ನು ಉದ್ಘಾಟಸಿ ಮಾತನಾಡಿ, ಪ್ರತಿ ಭಾರತೀಯ ಮಹಿಳೆ ಹುಟ್ಟುತ್ತಲೇ ಮನೆಯಲ್ಲಿ ಸ್ವಾಭಾವಿಕವಾಗಿ ದೈನಂದಿನ ಕೆಲಸ ಕಲಿಯುತ್ತಾ ಉದ್ಯಮಶೀಲತೆಯನ್ನು ಸಹಜವಾಗಿ ಮೈಗೂಡಿಸಿಕೊಂಡಿರುತ್ತಾಳೆ. ಆದರೆ ಬಹಳಷ್ಟು ಜನ ಆ ಪ್ರತಿಭೆಯನ್ನು ಮತ್ತು ಕೌಶಲ್ಯವನ್ನು ಅಧಿಕೃತವಾಗಿ ಬಳಸದೆ ಉದ್ಯಮಿ ಆಗುವುದರಲ್ಲಿ ಹಿಂಜರಿಯುತ್ತಿರುವದು ನಮ್ಮ ಸಮಾಜದ ದೌರ್ಭಾಗ್ಯ. ಮಹಿಳೆಯರು ಈ ದೇಶದ ಬೆನ್ನೆಲುಬು ಆಗಿದ್ದಾರೆ. ಇವರಿಂದ ಪರಿಪೂರ್ಣವಾಗಿ ದೇಶದ ಏಳಿಗೆ ಸಾಧ್ಯ. ಬೆಳಗಾವಿಯ ಪ್ರತಿಭೆಗಳು ಮರಳಿ ಬಂದು ಇಲ್ಲಿಯೇ ಮಹಾ ಸಾಧನೆ ಮಾಡಲು ಯೋಗ್ಯ ಪೂರಕವಾದ ವಾತಾವರಣ ನಿರ್ಮಾಣ ಮಾಡುವದು ಅತ್ಯವಶ್ಯ. ಈ ನಿಟ್ಟಿನಲ್ಲಿ ಲಿಂಗಾಯತ ಬಿಸಿನೆಸ್ ಫೋರಂ ಬೆಳವಣಿಗೆ ಶ್ಲಾಘನೀಯ ಎಂದರು.
ಸಮುದಾಯ ಸೇವಾ ನಿರ್ದೇಶಕಿ ಶಿವಲೀಲಾ ಕಂಪ್ಲಿ ಅವರು ಮಾತನಾಡಿ, ಶೀತಲ ಚಿಲಮಿ ಅವರು ಸ್ಟಾರ್ಟ್ ಅಪ್ ಗಳು ಮತ್ತು ಉದ್ಯಮಗಳಿಂದ ಹಿಡಿದು ಕಾರ್ಪೊರೇಟ್ ಸಂಸ್ಥೆಗಳ ವರೆಗೆ ವ್ಯವಹಾರದಲ್ಲಿ ಮಹಿಳೆಯರಿಗೆ ಬೆಂಬಲವಾಗಿ ನಿಂತಿದ್ದಾರೆ. ಈ ವಿಭಾಗ ಮಾರ್ಗದರ್ಶನ, ಆರ್ಥಿಕತೆ, ಸಾಕ್ಷರತೆ, ಮಾರುಕಟ್ಟೆ, ಸಂಪರ್ಕ, ಅವಕಾಶ ಮತ್ತು ವೈವಿಧ್ಯಮಯ ಕೈಗಾರಿಕಾ ವಲಯಗಳಲ್ಲಿ ಹೊಸ ಎತ್ತರಕ್ಕೆ ಏರಲು ವೇದಿಕೆ ಒದಗಿಸುವ ಗುರಿ ಹೊಂದಿದೆ ಎಂದು ತಿಳಿಸಿದರು.
ಲಿಂಗಾಯತ ಬಿಸಿನೆಸ್ ಫೋರಂ ಸಂಸ್ಥಾಪಕ ಸದಸ್ಯ ಮಲ್ಲಿಕಾರ್ಜುನ ಮೂದನೂರ ಅವರು ಲಿಂಗಾಯತ ಬಿಸಿನೆಸ್ ಫೋರಂನ ಪ್ರಮುಖ ಮಜಲುಗಳನ್ನು ಸವಿಸ್ತಾರವಾಗಿ ವಿವರಿಸಿದರು.
ಕಾರ್ಯಕಾರಿ ಸಮಿತಿ ಅಧ್ಯಕ್ಷ ಲಿಂಗರಾಜ ಜಗಜಂಪಿ ಅವರು ಲಿಂಗಾಯತ ಬಿಸಿನೆಸ್ ಫೋರಂನ ಮಹಿಳಾ ಘಟಕದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿ, ಲಿಂಗಾಯತ ಧರ್ಮದ ತಳಹದಿ ಆಗಿರುವ ಸಮಾನತೆಯ ತತ್ವವನ್ನು ಸಾರುವ ಕಾರ್ಯದಲ್ಲಿ ಇದೊಂದು ಮಹತ್ತರ ಹೆಜ್ಜೆಯಾಗಿದೆ ಎಂದರು. ಲಿಂಗಾಯತ ಬಿಸಿನೆಸ್ ಫೋರಂನ ಮಹಿಳಾ ಘಟಕದ ಅಧ್ಯಕ್ಷೆ ಶೀತಲ ಚಿಲಮಿ ಮಾತನಾಡಿ, ಮಹಿಳೆಯರು ತಮ್ಮ ಸಾಮರ್ಥ್ಯವನ್ನು ಈ ವೇದಿಕೆ ಮೂಲಕ ಸಮಾಜಕ್ಕೆ ತೋರಿಸಬೇಕು. ಮುಂದಿನ ಪೀಳಿಗೆಗೆ ಸ್ಪೂರ್ತಿ ನೀಡುವಲ್ಲಿ ಸ್ವಾವಲಂಬಿ ಮತ್ತು ಯಶಸ್ವಿ ಮಹಿಳಾ ಉದ್ಯಮಿಗಳ ಪರಂಪರೆಯನ್ನು ಸೃಷ್ಟಿಸುವ ಗುರಿ ಹೊಂದಲಾಗಿದೆ ಎಂದು ಹೇಳಿದರು.
ಪದಾಧಿಕಾರಿಗಳು: ಕಾರ್ಯಕಾರಿ ಸಮಿತಿಗೆ ಶೀತಲ ಚಿಲಮಿ ಅಧ್ಯಕ್ಷೆ, ಶಿವಲೀಲಾ ಕಂಪ್ಲಿ, ಜ್ಯೋತಿ ನಿಂಬಾಳ ಖಜಾಂಚಿ, ಡಾ.ಜ್ಯೋತಿ ಮಾಸ್ತಿಹೊಳಿ, ಉಪಾಧ್ಯಕ್ಷೆ ಆಶಾ ಪಾಟೀಲ, ನಿರ್ದೇಶಕಿ ಅಶ್ವಿನಿ ಪಾಟೀಲ, ರೇಖಾ ಕಳ್ಳಿಮನಿ ಸಾರ್ವಜನಿಕ ಸ್ವರೂಪದ ನಿರ್ದೇಶಕಿಯರು.
ಆಡಳಿತ ಮಂಡಳಿ ಟ್ರಸ್ಟಿಗಳಾದ ಈರಣ್ಣ ದೇಯನ್ನವರ, ರಾಜೀವ ಶೀಗಿಹಳ್ಳಿ, ಲಕ್ಷ್ಮಿಕಾಂತ ಗುರವ, ವಿಜಯ ಪಾಟೀಲ, ಮಹಾಂತೇಶ ಪುರಾಣಿಕ ಉಪಸ್ಥಿತರಿದ್ದರು. ಈರಾ ತಿಗಡಿ ಹಾಗೂ ಆರೋಹಿ ಶೀಲವಂತ ಪ್ರಾರ್ಥಿಸಿದರು. ಶಿವಲೀಲಾ ಪ್ರಣಾಳಿಕೆ ಮಂಡಿಸಿದರು. ಸಂತೋಷ ಪಾವಟೆ ಮತ್ತು ಜ್ಯೋತಿ ನಿಂಬಾಳ ಪರಿಚಯಿಸಿದರು. ಲಿಂಗರಾಜ ಜಗಜಂಪಿ ಸ್ವಾಗತಿಸಿದರು. ಮಡಿವಾಳಪ್ಪ ತಿಗಡಿ ನಿರೂಪಿಸಿದರು. ಕಾರ್ಯದರ್ಶಿ ಸಚಿನ್ ಬೈಲವಾಡ ವಂದಿಸಿದರು.



