*ಲಿಂಗಾಯತ ಧರ್ಮ ಅರ್ಥೈಸಿಕೊಳ್ಳುವ ಅಗತ್ಯವಿದೆ: ಸಚಿವ ಸತೀಶ ಜಾರಕಿಹೊಳಿ*
ಪ್ರಗತಿವಾಹಿನಿ ಸುದ್ದಿ: ಕರ್ನಾಟಕದ ಸಾಂಸ್ಕೃತಿಕ ರಾಯಬಾರಿ ಬಸವಣ್ಣನವರು ಕಟ್ಟಿರುವ ಲಿಂಗಾಯತ ಧರ್ಮವನ್ನು ಪ್ರತಿಯೊಬ್ಬರೂ ಅರ್ಥೈಸಿಕೊಳ್ಳಬೇಕಿರುವ ಅಗತ್ಯವಿದೆ ಎಂದು ಲೋಕೋಪಯೋಗಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅಭಿಪ್ರಾಯಪಟ್ಟರು.
ತಾಲೂಕಿನ ಬೆಳವಿ ಗ್ರಾಮದ ಚರಮೂರ್ತಿ ಚರಂತೇಶ್ವರ ವಿರಕ್ತಮಠದಲ್ಲಿ ಶುಕ್ರವಾರ ರಾತ್ರಿ ನಡೆದ ಬಸವ ಜಯಂತಿ ಸಂಭ್ರಮೋತ್ಸವ ಮತ್ತು ಶರಣ ಸಂಸ್ಕೃತಿ ಉತ್ಸವದಲ್ಲಿ ಮಾತನಾಡಿದ ಅವರು, ಸ್ವತಂತ್ರ ಧರ್ಮ ಎನಿಸಿರುವ ಲಿಂಗಾಯತ ಧರ್ಮದ ಬೆಳವಣಿಗೆಗೆ ಕೆಲ ಪಟ್ಟಭದ್ರ ಸಾಂಪ್ರದಾಯಿಗಳಿಂದ ಹಿನ್ನಡೆಯಾಗಿದೆ ಎಂದರು.
ಪ್ರಸ್ತುತ ದಿನಗಳಲ್ಲಿ ಬಸವಣ್ಣನವರ ವಿಚಾರಧಾರೆ, ಕಾಯಕ ತತ್ವದ ಅಧ್ಯಯನ ಮಾಡಬೇಕಿರುವ ಅಗತ್ಯವಿದೆ. ಇಂದಿನ ಜಾತಿ ವ್ಯವಸ್ಥೆ ಹೋಗಲಾಡಿಸಲು ಬಸವೇಶ್ವರರ ಸಿದ್ಧಾಂತದ ಮೂಲಕ ಪರಿಹಾರ ಕಂಡುಕೊಳ್ಳಬೇಕು. ಮಹಾನ್ ಪುರುಷರು ತೋರಿರುವ ಸನ್ಮಾರ್ಗದಲ್ಲಿ ನಾವೆಲ್ಲ ಸಾಗಬೇಕು ಎಂದು ಅವರು ಹೇಳಿದರು.
ಶರಣ ಬಸವ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಇಳಕಲ್ ಗುರು ಮಹಾಂತ ಸ್ವಾಮೀಜಿ, ಮುಖಂಡ ಮಹಾವೀರ ಮೋಹಿತೆ, ನಿವೃತ್ತ ಪ್ರಾಧ್ಯಾಪಕ ಡಾ.ಗುರುಪಾದ ಮರೆಗುದ್ದಿ, ಡಾ.ಜಯಪ್ರಕಾಶ ಕರಜಗಿ, ಮಹಾಂತೇಶ ತಾಂವಶಿ, ಸಂಗಪ್ಪ ಸರಿಕರ, ರಾಜಶೇಖರ ಯಂಕಚಿ, ವಿಜಯ ರವದಿ ಮತ್ತಿತರರು ಉಪಸ್ಥಿತರಿದ್ದರು.
ಇದೇ ವೇಳೆ ಸಚಿವ ಸತೀಶ ಜಾರಕಿಹೊಳಿ ಅವರಿಗೆ ಬಸವ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ರಾಮಕೃಷ್ಣ ಪಾನಬುಡೆ ನಿರೂಪಿಸಿದರು. ಶ್ರೀಶೈಲ ಮಠಪತಿ ವಂದಿಸಿದರು. ಇದಕ್ಕೂ ಮೊದಲು ಶೂನ್ಯ ಲಿಂಗ ವಿವೇಚನೆ, ವಚನ ಶಾಸ್ತ್ರ ಭಾಗ-೧ರ ವಿಶ್ಲೇಷಣೆ ನಡೆಯಿತು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ