Kannada NewsLatest

ಇನ್ನೊಬ್ಬರಿಗೆ ತೊಂದರೆಯಾಗದಂತೆ ಬದುಕುವುದೇ ಬಸವ ಮಾರ್ಗ

ಇನ್ನೊಬ್ಬರಿಗೆ ತೊಂದರೆಯಾಗದಂತೆ ಬದುಕುವುದೇ ಬಸವ ಮಾರ್ಗ

ಪ್ರಗತಿವಾಹಿನಿ ಸುದ್ದಿ – ಬೆಳಗಾವಿ : ಇನ್ನೊಬ್ಬರಿಗೆ ತೊಂದರೆಯಾಗದಂತೆ ಸರಳ ಮತ್ತು ಸಜ್ಜನಿಕೆಯಿಂದ ಬದುಕುವದೆ ಬಸವ ಮಾರ್ಗ ಎಂದು ಮಹಾನಗರ ಪಾಲಿಕೆಯ ನಿವೃತ್ತ ಅಧಿಕಾರಿ ಡಿ.ಕೆ.ನಿಂಬಾಳ ಹೇಳಿದ್ದಾರೆ.

ಬಸವ ಭೀಮ ಸೇನೆಯ ವತಿಯಿಂದ ನಗರದ ಶ್ರೀ ಬಸವೇಶ್ವರ ಉದ್ಯಾನದಲ್ಲಿಯ ಶ್ರೀ ಬಸವೇಶ್ವರರ ಪ್ರತಿಮೆಯ ಬಳಿ ಸೋಮವಾರದಂದು ಆಯೋಜಿಸಲಾಗಿದ್ದ ಬಸವಣ್ಣನವರ ಲಿಂಗೈಕ್ಯ ದಿನ ಬಸವ ಪಂಚಮಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಬಸವಣ್ಣನವರ ತತ್ವ ಸಿದ್ದಾಂತಗಳ ಪ್ರತಿಪಾದನೆಯೊಂದಿಗೆ ಆ ಬಸವಾದಿ ಶರಣರ ಸಮ ಸಮಾಜದ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕಾಗಿದೆ. ತಮ್ಮ ಸೇವಾವಧಿಯಲ್ಲಿ ಎಲ್ಲರೊಂದಿಗೆ ಸಮಚಿತ್ತನಾಗಿ ಮತ್ತು ಯಾರೊಬ್ಬರ ಮನಸ್ಸಿಗೆ ನೋವಾಗದಂತೆ ನಡೆದುಕೊಂಡಿದ್ದೇನೆ. ಬಸವ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡಿದ್ದೇನೆ ಎಂಬ ಸಮಾಧಾನ ನನಗಿದೆ ಎಂದರು.

ನ್ಯಾಯವಾದಿ ಬಸವರಾಜ ರೊಟ್ಟಿ ಮಾತನಾಡಿ, ಮಹಿಳೆಯರನ್ನು ಅಬಲೆಯರೆಂದು ಅವರ ಸ್ವಾತಂತ್ರ್ಯವನ್ನು ಕಸಿದುಕೊಂಡಿದ್ದ ಮನುಸ್ಮೃತಿಯ ವಿರುದ್ಧ ಸಮ ಸಮಾಜದ ವಚನ ಸಾಹಿತ್ಯವನ್ನು ಕಟ್ಟಿಕೊಟ್ಟಿರುವುದು ಬಸವಾದಿ ಶರಣರು ನೀಡಿರುವ ಬಹುದೊಡ್ಡ ಕೊಡುಗೆಯಾಗಿದೆ. ವರ್ಣ ವರ್ಗಗಳ ವಿರುದ್ಧ ಸಮಾನತೆಯ ಸಮಾಜದ ಕಲ್ಪನೆ ನೀಡಿರುವದು ಬಸವಣ್ಣನವರ ಬಹುದೊಡ್ಡ ಸಾಧನೆ. ಬಸವ ಮಾರ್ಗದಲ್ಲಿ ಎಲ್ಲ ಶೋಷಿತ ಸಮುದಾಯಗಳನ್ನು ಒಂದು ಗೂಡಿಸುವ ಮೂಲಕ ಸುಭದ್ರವಾದ ಬಸವ ಸಮಾಜ ಕಟ್ಟಬೇಕಾಗಿದೆ ಎಂದರು.

ನ್ಯಾಯವಾದಿ ಚನ್ನಬಸಪ್ಪ ಬಾಗೇವಾಡಿ ಮಾತನಾಡಿ, ಈ ದೇಶದ ಧರ್ಮವಾಗಿರುವ ಲಿಂಗಾಯತ ಧರ್ಮಕ್ಕೆ ಸಂವಿಧಾನದ ಮಾನ್ಯತೆ ಸಿಗಬೇಕಾಗಿತ್ತು. ಆದರೆ, ಇನ್ನೂ ಸಿಕ್ಕಿಲ್ಲ. ನಾವು ನಿರಾಶಾವಾದಿಗಳಲ್ಲ. ನಾವು ಆಶಾವಾದಿಗಳು. ಈ ದೇಶದ ನ್ಯಾಯಾಂಗದ ಮೇಲೆ ನಮಗೆ ಸಂಪೂರ್ಣ ಭರವಸೆ ಇದೆ. ಲಿಂಗಾಯತ ಧರ್ಮಕ್ಕೆ ಸಂವಿಧಾನದ ಮಾನ್ಯತೆ ಸಿಗುವುದೆಂಬ ಸಂಪೂರ್ಣ ವಿಶ್ವಾಸ ನಮಗಿದೆ ಎಂದರು.

ಲಿಂಗಾಯತ ಹಟಕಾರ ಸಮಾಜದ ಮುಖಂಡ ರಾಜಶೇಖರ ಭೋಜ ಮಾತನಾಡಿ, ವಚನ ಪಿತಾಮಹ ಫ.ಗು.ಹಳಕಟ್ಟಿ ಅವರ ಪರಂಪರೆಯೆ ಲಿಂಗಾಯತ ಹಟಕಾರ ಸಮಾಜವು ತಮ್ಮ ಪರಂಪರೆಯ ಬಗ್ಗೆ ಹೆಮ್ಮೆ ಪಡಬೇಕು. ತಾವು ಲಿಂಗಾಯತರು ಎಂದು ಹೆಮ್ಮೆಯಿಂದ ಹೇಳಿಕೊಳ್ಳಬೇಕು. ಈ ದಿಸೆಯಲ್ಲಿ ತಾವು ಕಳೆದ ಹಲವು ವರ್ಷಗಳಿಂದ ಸಮಾಜವನ್ನು ಸಂಘಟಿಸುತ್ತಿದ್ದೇನೆ. ತಮ್ಮ ಮನೆತನವು ಹಳಕಟ್ಟಿಯವರ ಹಿನ್ನೆಲೆ ಹೊಂದಿದೆ ಎಂಬುದು ನನಗೆ ಹೆಮ್ಮೆ ಎಂದು ಹೇಳಿದರು.

ಬಸವ ಭೀಮ ಸೇನೆಯ ಅಧ್ಯಕ್ಷ ಆರ್.ಎಸ್.ದರ್ಗೆ ಮಾತನಾಡಿ, ಬಹು ಭಾಷಾ ಮತ್ತು ಬಹು ಸಂಸ್ಕೃತಿಯ ಈ ದೇಶವನ್ನು ಹಿಂದುತ್ವದ ಅಡಿಯಲ್ಲಿ ಕಟ್ಟಲು ಸಾಧ್ಯವಿಲ್ಲ. ಎಲ್ಲ ಶೋಷಿತ ಸಮುದಾಯಗಳ ಕಾಯಕ ಜೀವಿಗಳನ್ನು ಗೌರವಿಸುವ ಬಸವ ಮಾರ್ಗದಿಂದ ಮಾತ್ರ ಸುಭದ್ರ ಭಾರತವನ್ನು ಕಟ್ಟಲು ಸಾಧ್ಯವಿದೆ. ಭಾರತ ಬಸವ ಭಾರತವಾಗಬೇಕಿದೆ ಎಂದರು.

ಬಸವಣ್ಣನವರು ಹಸಿವಿನ ಸಂಕಟ ಅರಿತ ವಿಶ್ವದ ಪ್ರಥಮ ಮಾನವೀಯ ನಾಯಕ. ಬಸವ ಅಂಬೇಡ್ಕರರ ಹೊರತಾಗಿ ಬಡವನ ಹೊಟ್ಟೆಯ ಹಸಿವು ಅರ್ಥಮಾಡಿಕೊಂಡ ಬೇರೊಬ್ಬ ನಾಯಕರಿಲ್ಲ. ನಾವೆಲ್ಲರು ಬಸವ ಭೀಮರ ಮಾರ್ಗದಲ್ಲಿ ನಡೆಯಬೇಕಾಗಿದೆ. ಧರ್ಮ ಸಂಪ್ರದಾಯದ ಹೆಸರಿನಲ್ಲಿ ಮಣ್ಣು ಪಾಲಾಗುತ್ತಿರುವ ಪೌಷ್ಟಿಕ ಆಹಾರಗಳು ನಮ್ಮ ಮಕ್ಕಳ ಸೊತ್ತಾಗಬೇಕು. ಈ ದಿಸೆಯಲ್ಲಿ ಸಮಾಜ ಜಾಗೃತವಾಗಬೇಕು ಎಂದರು.
ರೈತ ಮುಖಂಡ ಸಿದಗೌಡ ಮೋದಗಿ, ರಾಜು ಕುಂದಗೋಳ, ಬಿ.ಎ.ಪಾಟೀಲ, ಸಿದ್ರಾಮ ಸಾವಳಗಿ, ಆಕಾಶ ಹಲಗೇಕರ ಮುಂತಾದವರು ಭಾಗವಹಿಸಿದ್ದರು.////

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button