Latest

ಜನಾಕರ್ಷಿಸುತ್ತಿವೆ ಜೀವ ತಳೆದ ಜಲಪಾತಗಳು; ಸತತ ಮಳೆಗೆ ಸದ್ದಿಲ್ಲದೆ ಸೃಷ್ಟಿಯಾದ ಧಾರೆಗಳು

ಪ್ರಗತಿವಾಹಿನಿ ಸುದ್ದಿ, ಮೈಸೂರು: ಸಣ್ಣಸಣ್ಣ ಜಲಪಾತ, ತೊರೆಗಳಲ್ಲಿ ಹರಿಯುವ ನೀರನ್ನು ನೋಡಲು ಮೈಸೂರಿಗರು ಈಗ ಕೊಡಗು ಹಾಗೂ ಮಲೆನಾಡಿಗೆ ತೆರಳಬೇಕಿಲ್ಲ. ಸತತ ಮಳೆಯ ಕಾರಣ ಚಾಮುಂಡಿಬೆಟ್ಟದ ಹಲವೆಡೆ ಜಲಪಾತಗಳು ಸೃಷ್ಟಿಯಾಗಿವೆ.

ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ನಗರದಾದ್ಯಂತ ಎಲ್ಲೆಲ್ಲೂ ನೀರಧಾರೆ ಕಂಡುಬರುತ್ತಿದೆ. ಇದೇ ವೇಳೆ ಅಧಿಕ ಮಳೆಯ ಕಾರಣದಿಂದ ಚಾಮುಂಡಿಬೆಟ್ಟದಲ್ಲಿ ಸಣ್ಣಸಣ್ಣ ತೊರೆಗಳಲ್ಲಿ ನೀರು ಹರಿಯುತ್ತಿದ್ದು, ನಗರದ ಜನರನ್ನು ತನ್ನತ್ತ ಸೆಳೆಯುತ್ತಿದೆ.

ಕಳೆದ ಒಂದು ವಾರದಿಂದ ಸತತವಾಗಿ ಮಳೆ ಸುರಿಯುತ್ತಿರುವ ಕಾರಣ ನಗರದಾದ್ಯಂತ ಹಳ್ಳಕೊಳ್ಳಗಳಲ್ಲಿ ನೀರು ತುಂಬಿ ತುಳುಕುತ್ತಿವೆ. ಕುಕ್ಕರಹಳ್ಳಿ, ಲಿಂಗಾಂಬುಧಿ, ಭೋಗಾದಿ, ಶ್ರೀರಾಂಪುರ, ಹೆಬ್ಬಾಳ ಸೇರಿದಂತೆ ಮೈಸೂರು ಸುತ್ತಮುತ್ತಲಿನ ಕೆರೆಕಟ್ಟೆಗಳು ತುಂಬಿ ಹರಿಯುತ್ತಿವೆ. ಅದರಂತೆ ಚಾಮುಂಡಿಬೆಟ್ಟದಲ್ಲಿ ಕೂಡ ಮಳೆಯ ಕಾರಣ ಸಣ್ಣಪುಟ್ಟ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ನೀರಿನ ಹರಿವು ಹೆಚ್ಚಾದ ಕಾರಣ ಬೆಟ್ಟದ ಮೇಲಿಂದ ನಾನಾ ಸ್ಥಳಗಳಲ್ಲಿ ನೀರು ಜಲಪಾತದಂತೆ ಧುಮ್ಮಿಕ್ಕುತ್ತಿದೆ. ಇದನ್ನು ಕಣ್ತುಂಬಿಕೊಳ್ಳಲು ನಗರದ ಜನತೆ ಬೆಟ್ಟದ ಕಡೆಗೆ ಧಾವಿಸುತ್ತಿದ್ದು ಜಲಪಾತದ ದೃಶ್ಯಗಳೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಡುತ್ತಿದ್ದಾರೆ.

ಚಾಮುಂಡಿಬೆಟ್ಟಕ್ಕೆ ತೆರಳುವ ದಾರಿಯುದ್ದಕ್ಕೂ ಕಾಣಿಸುತ್ತಿರುವ ನೀರಿನ ತೊರೆಗಳನ್ನು ಕಂಡು ಭಕ್ತರು ಪುಳಕಿತರಾಗುತ್ತಿದ್ದಾರೆ. ಬೆಟ್ಟದ ಸುವಾರು 10 ಸ್ಥಳಗಳಲ್ಲಿ ಮಿನಿ ಜಲಪಾತ ಕಂಡುಬಂದಿದೆ. ಬೆಟ್ಟದಿಂದ ಬರುವ ನೀರು ಕಾರಂಜಿ ಕೆರೆಯನ್ನು ಸೇರುತ್ತಿದೆ.

ನಂದಿ ಮಾರ್ಗದಲ್ಲಿ ಮತ್ತೆ ರಸ್ತೆ ಕುಸಿತ:

ಮಳೆಯ ಕಾರಣದಿಂದ ಕೆಲ ತಿಂಗಳ ಹಿಂದೆ ನಂದಿ ವಿಗ್ರಹದ ರಸ್ತೆಯಲ್ಲಿ ರಸ್ತೆ ಕುಸಿತ ಕಂಡಿತ್ತು. ಅಲ್ಲಿ ಸಂಚಾರ ನಿಷೇಧಿಸಿದ ಜಿಲ್ಲಾಡಳಿತ ಕುಸಿದ ರಸ್ತೆಯನ್ನು ಭಾಗಶಃ ದುರಸ್ತಿಗೊಳಿಸಿತ್ತು. ಆದರೀಗ ತೀವ್ರ ಮಳೆಯ ಕಾರಣ ಅದೇ ರಸ್ತೆಯಲ್ಲಿ ಮತ್ತೆ ಎರಡು ಕಡೆ ಸಣ್ಣ ಪ್ರಮಾಣದಲ್ಲಿ ರಸ್ತೆ ಕುಸಿದಿದೆ. ಹೀಗಾಗಿ ಅಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದೆ.

ಬಿಜೆಪಿ ಲೇವಡಿಗೆ ತಿರುಗೇಟು ನೀಡಿದ ಡಿ.ಕೆ.ಶಿವಕುಮಾರ್

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button