ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ದೆಹಲಿ ಸೇರಿದಂತೆ ಹೊರ ರಾಜ್ಯದಲ್ಲಿರುವ ಸಾವಿರಕ್ಕೂ ಅಧಿಕ ಕನ್ನಡಿಗರು ಇಂದು ವಿಶೇಷ ರೈಲಿನಲ್ಲಿ ಬೆಂಗಳೂರಿಗೆ ಆಗಮಿಸಿದ್ದು, ಅವರನ್ನು 14 ದಿನಗಳ ಕಾಲ ಕ್ವಾರಂಟೈನ್ ಗೆ ಒಳಪಡಿಸಲು ಸಿಧತೆ ನಡೆಸಲಾಗಿದೆ. ಆದರೆ ಪ್ರಯಾಣಿಕರು ಕ್ವಾರಂಟೈನ್ ಗೆ ಒಳಪಡಲು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ತಮ್ಮನ್ನು ಮನೆಗೆ ಕಳುಹಿಸುವಂತೆ ಒತ್ತಾಯಿಸಿದ್ದಾರೆ.
ದೆಹಲಿಯಿಂದ ಬೆಂಗಳೂರು ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣಕ್ಕೆ ಇಂದು ಬೆಳಿಗ್ಗೆ ಆಗಮಿಸಿದ ಸಾವಿರಕ್ಕೂ ಹೆಚ್ಚು ಜನರು, ಕ್ವಾರಂಟೈನ್ ಆಗಲು ಒಪ್ಪುತ್ತಿಲ್ಲ. ನಮಗೆ ಕ್ವಾರಂಟೈನ್ ಮಾಡುವ ವಿಚಾರವೇ ಗೊತ್ತಿರಲಿಲ್ಲ. ಕ್ವಾರಂಟೈನ್ ಆಗಲು ನಾವು ಅಲ್ಲಿಂದ ಇಲ್ಲಿ ಬರಬೇಕಿತ್ತಾ ಇಂದು ಕಿಡಿಕಾರಿದ್ದಾರೆ.
ದೆಹಲಿಯಿಂದ ಬಂದ ಟ್ರೈನ್‍ನಲ್ಲಿ ಕುಡಿಯೋಕೆ ನೀರಿಲ್ಲ. ಟಾಯ್ಲೆಟ್ ನಲ್ಲಿ ಕೂಡ ನೀರು ಇರಲಿಲ್ಲ. ಇದೀಗ ಕ್ವಾರೆಂಟೈನ್ ಅಂತಾ ಹೇಳುತ್ತಿದ್ದಾರೆ. ನಾವು ಬಡವರು, ನಮ್ಮ ಜತೆ ಚಿಕ್ಕ ಚಿಕ್ಕ ಮಕ್ಕಳೂ ಇದ್ದಾರೆ. 1,800-2,000 ರೂ. ಕ್ವಾರಂಟೈನ್ ಗೆ ಹೋಟೆಲ್ ಗೆ ಕೇಳುತ್ತಿದ್ದಾರೆ. ನಾವು ಎಲ್ಲಿಂದ ಹಣ ತರುವುದು. ನಮಗೆ ಈ ವರೆಗೆ ಆರೋಗ್ಯ ಸಮಸ್ಯೆಯಿಲ್ಲ. ಕ್ವಾರಂಟೈನ್ ನಲ್ಲಿ ನಮಗೂ ಕೊರೊನಾ ಸೋಂಕು ಬರುವ ಸದಹ್ಯತೆಯಿದೆ. ಹಾಗಾಗಿ ನಮ್ಮನ್ನು ನೇರವಾಗಿ ನಮ್ಮ ನಮ್ಮ ಮನೆಗಳಿಗೆ ಕಳುಹಿಸಿಕೊಡಿ ಎಂದು ಪಟ್ಟು ಹಿಡಿದಿದ್ದಾರೆ.
ರೈಲು ಫ್ಲಾಟ್ ಫಾರಂ 1ಕ್ಕೆ ಬಂದಿದ್ದು, ಒಂದು ಬೋಗಿಯ ನಂತರ ಇನ್ನೊಂದು ಬೋಗಿಯಲ್ಲಿದ್ದ ಪ್ರಯಾಣಿಕರು ಇಳಿಯುವಂತೆ ವ್ಯವಸ್ಥೆ ಮಾಡಲಾಗಿತ್ತು. ಅಲ್ಲದೆ ಎಲ್ಲಾ ಪ್ರಯಾಣಿಕರಿಗೆ ವೈದ್ಯರು ಥರ್ಮಲ್ ಸ್ಕ್ರೀನಿಂಗ್ ಮಾಡಿದ್ದಾರೆ. 11 ಬಿಎಂಟಿಸಿ ಬಸ್ಸುಗಳ ಮೂಲಕ ನಿಗದಿತ ಹೋಟೆಲ್‍ಗಳಿಗೆ ಕ್ವಾರಂಟೈನ್‍ಗೆ ಪೊಲೀಸರು ಕರೆದುಕೊಂಡು ಹೋಗಲು ವ್ಯವಸ್ಥೆ ಮಾಡಿದ್ದಾರೆ. ಆದರೆ ರೈಲ್ವೆ ನಿಲ್ದಾಣದಲ್ಲೇ ಪ್ರಯಾಣಿಕರು ಕ್ವಾರಂಟೈನ್ ಗೆ ಬರುವುದಿಲ್ಲ ಎಂದು ಪಟ್ಟು ಹಿಡಿದಿದ್ದು, ಮನವೊಲಿಕೆ ಕಾರ್ಯ ನಡೆದಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ