ಲಾಕ್ ಡೌನ್ ನಡುವೆಯೂ ಕಿಡಿಗೇಡಿಗಳ ಅಟ್ಟಹಾಸ: ಆಟೋ ಡ್ರೈವರ್ ಗೆ ಇರಿದು ಪರಾರಿ

ಪ್ರಗತಿವಾಹಿನಿ ಸುದ್ದಿ; ಹಾಸನ: ಲಾಕ್‍ಡೌನ್ ನಡುವೆಯೂ ಕಿಡಿಗೇಡಿಗಳು ಮನೆ ಮುಂದೆ ಗಲಾಟೆ ನಡೆಸಿ, ಬುದ್ಧಿವಾದ ಹೇಳಿದ್ದಕ್ಕೆ ವ್ಯಕ್ತಿಗೆ ಚಾಕುವಿನಿಂದ ಇರಿದು ಪರಾರಿಯಾಗಿರುವ ಘಟನೆ ಹಾಸನದಲ್ಲಿ ನಡೆದಿದೆ.

ಹಾಸನದ ಬೇಲೂರು ರಸ್ತೆಯ ಈಶ್ವರ ದೇವಾಲಯ ಬಳಿಯ ಆಟೋಚಾಲಕ ನವೀನ್ ಗಾಯಗೊಂಡ ವ್ಯಕ್ತಿ. ಮೂವರು ಯುವಕರು ಸಿಗರೇಟ್ ಸೇದುತ್ತಾ ಗಲಾಟೆ ಮಾಡುತ್ತಿದ್ದರು. ಇದನ್ನು ನೋಡಿದ ಆಟೋ ಚಾಲಕ ದೇವಾಲಯದ ಬಳಿ ಸಿಗರೇಟ್ ಸೇದಬಾರದು ಎಂದು ಬುದ್ಧಿವಾದ ಹೇಳಿದ್ದಾರೆ.

ಇದಕ್ಕೆ ಕೋಪಗೊಂಡ ಯುವಕರು ಏಕಾಏಕಿ ಕೈಲಿದ್ದ ಚಾಕುವಿನಿಂದ ಕತ್ತು ಇರಿಯಲು ಬಂದಿದ್ದಾರೆ. ಅಕಸ್ಮಾತ್ ಆಗಿ ಚಾಕು ಕುತ್ತಿಗೆ ಬದಲು ಕೆನ್ನೆಗೆ ಇರಿದಿದೆ. ನವೀನ್ ಕೂಗಾಟದಿಂದ ತಕ್ಷಣ ಸ್ಥಳಕ್ಕೆ ಬಂದ ಸ್ಥಳೀಯರು ಆತನನ್ನು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸ್ಥಳೀಯರು ಬರುತ್ತಿದ್ದಂತೆ ಕಿಡಿಗೇಡಿಗಳು ಸ್ಥಳದಿಂದ ಕಾಲ್ಕಿತ್ತಿದ್ದಾರೆ.

ಹಾಸನ ಪೆನ್ಷನ್ ಮೊಹಲ್ಲ ಠಾಣೆಯಲ್ಲಿ ಗಾಯಾಳು ನವೀನ್ ದೂರು ದಾಖಲಿಸಿದ್ದಾರೆ.

Home add -Advt

Related Articles

Back to top button