*ಲೋಕ ಅದಾಲತ್ ಜು.12 ರಂದು: ಹೆಚ್ಚಿನ ಪ್ರಕರಣಗಳ ಇತ್ಯರ್ಥಕ್ಕೆ ಕ್ರಮ: ಸಂದೀಪ ಪಾಟೀಲ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಜುಲೈ 12 ರಂದು ನಡೆಯಲಿರುವ ರಾಷ್ಟ್ರೀಯ ಲೋಕ ಅದಾಲತ್ ನಲ್ಲಿ, ಜಿಲ್ಲೆಯ 85 ನ್ಯಾಯಾಲಯಗಳಲ್ಲಿ ಒಟ್ಟು 1 ಲಕ್ಷ 47 ಸಾವಿರ ಪ್ರಕರಣಗಳು ಇತ್ಯರ್ಥಕ್ಕೆ ನೋಂದಣಿಯಾಗಿವೆ. ಅದರಲ್ಲಿ ಗುರುತಿಸಿರುವ ಸುಮಾರು 20 ಸಾವಿರ ಪ್ರಕರಣಗಳನ್ನು ಇತ್ಯರ್ಥ ಪಡಿಸಬಹುದಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯದರ್ಶಿ ಸಂದೀಪ ಪಾಟೀಲ ಅವರು ತಿಳಿಸಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಹೊಸ ನ್ಯಾಯಾಲಯಗಳ ಸಂಕೀರ್ಣದ ಆವರಣದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಕಚೇರಿಯ ಸಭಾಂಗಣದಲ್ಲಿ ಶುಕ್ರವಾರ (ಜು.11) ನಡೆದ ರಾಷ್ಟ್ರೀಯ ಲೋಕ ಅದಾಲತ್ ಮಾತು ವಿವಿಧ ಜಾಗೃತಿ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು.
ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಹೆಚ್ಚಿನ ಪ್ರಕರಣಗಳ ಇತ್ಯರ್ಥಕ್ಕೆ ಈಗಾಗಲೇ ಎಲ್ಲ ನ್ಯಾಯಾಲಯಗಳಲ್ಲ ನಿರ್ದೇಶನ ನೀಡಲಾಗಿದೆ. ಖಾಯಂ ಲೋಕ್ ಅದಾಲತ್ ರಾಜ್ಯದಲ್ಲಿ ಬೆಳಗಾವಿ ಸೇರಿದಂತೆ 6 ಭಾಗದಲ್ಲಿ ನಡೆಯುತ್ತಿದ್ದು ನ್ಯಾಯಾಲಯಗಳಲ್ಲಿ ವಿವಿಧ ರಾಜಿಯಾಗುವಂತಹ ಪ್ರಕರಣಗಳನ್ನು ನೋಂದಾಯಿಸಿಕೊಂಡು ಕಾನೂನು ಸೇವೆಗೆ ಯಾವುದೇ ಹಣ ಪಾವತಿಸದೇ ಇತ್ಯರ್ಥ ಪಡಿಸಿಕೊಳ್ಳಬಹುದಾಗಿದೆ ಎಂದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಸಾಥಿ ಸಮಿತಿ, ಜಾಗೃತಿ ಸಮಿತಿ, ಆಶಾ ಸಮಿತಿ, ಸಂವಾದ ಮತ್ತು ಡೌನ್ ಎಂದು 5 ಸಮಿತಿಗಳನ್ನು ರಚಿಸಲಾಗಿದ್ದು, ಸಾರ್ವಜನಿಕರಿಗೆ ಮಾಹಿತಿ, ಕಾನೂನು ಸಲಹೆ, ಸರ್ಕಾರಿ ಯೋಜನೆಗಳ ಅರಿವು ಸೇರಿದಂತೆ ಇನ್ನಿತರ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಸಾಥಿ ಸಮಿತಿ
ಸಾಥಿ ಸಮಿತಿ ಮೂಲಕ ಎಲ್ಲ ಇಲಾಖೆಗಳ ಸಮನ್ವಯದೊಂದಿಗೆ ಜಿಲ್ಲೆಯಲ್ಲಿ ಆಧಾರ ಕಾರ್ಡ್ ಹೊಂದಿರದ ನಿರ್ಗತಿಕ ಮಕ್ಕಳನ್ನು ಗುರುತಿಸಿ ಅಂತವರಿಗೆ ಆಧಾರ ಕಾರ್ಡ್ ಗುರುತಿನ ಚೀಟಿ ಮಾಡಲಿದೆ ಈ ಕುರಿತು ಜುಲೈ.30 ರವರೆಗೆ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದರು.
ಜಾಗೃತಿ ಸಮಿತಿ
ಸರ್ಕಾರದ ವಿವಿಧ ಇಲಾಖೆಯ ಎಲ್ಲ ಯೋಜನೆಗಳ ಮಾಹಿತಿಯನ್ನು ಒದಗಿಸಲು ಸಾರ್ವಜನಿಕ ವಲಯಗಳಿಗೆ ತೆರಳಿ ಕಾರ್ಯಕ್ರಮಗಳ ಮೂಲಕ ಜಾಗೃತಿ ಮೂಡಿಸಲು ಜಾಗೃತಿ ಸಮಿತಿ ರಚಿಸಲಾಗಿದೆ.
ಆಶಾ ಸಮಿತಿ
ಬಾಲ್ಯ ವಿವಾಹ, ದೌರ್ಜನ್ಯ ನಿಯಂತ್ರಣ, ಬಾಲ ಕಾರ್ಮಿಕರ ತಂದೆ ತಾಯಿಗಳಲ್ಲಿ ಜಾಗೃತಿ ಸೇರಿದಂತೆ ಇನ್ನಿತರ ದೌರ್ಜನ್ಯ ನಿಯಂತ್ರಣಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಕುರಿತು ಜಾಗೃತಿ ಮೂಡಿಸಲು ಆಶಾ ಸಮಿತಿ ಕಾರ್ಯ ನಿರ್ವಹಿಸುತ್ತದೆ.
ಸಂವಾದ
ಕಾಡಂಚಿನ ಗ್ರಾಮಗಳು ಮತ್ತು ಬುಡಕಟ್ಟು ಜನರಿಗೆ ಕಾನೂನು ಕಾಯ್ದೆ, ಕಡ್ಡಾಯ ಶಿಕ್ಷಣ ಸೇರಿದಂತೆ ಅಂತವರನ್ನು ಮುಖ್ಯ ವಾಹಿನಿಗೆ ತರಲು ಇರುವ ವಿಷಯ ಕಾಯ್ದೆಗಳನ್ನು ತಿಳಿಸುವುದು ಸಂವಾದ ಸಮಿತಿ ಮಾಡಲಿದೆ.
ಡೌನ್ ಸಮಿತಿ
ಜೀವನ ಶೈಲಿ, ಆಹಾರ ಪದ್ಧತಿ, ಮದ್ಯ, ಮಾದಕ ವಸ್ತುಗಳಿಂದ ದೂರು ಉಳಿಯುವಂತೆ ಶಾಲಾ-ಕಾಲೇಜುಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಡೌನ್ ಸಮಿತಿ ಕಾರ್ಯ ನಿರ್ವಹಿಸಲಿದೆ ಎಂದು ತಿಳಿಸಿದರು.
ಕರ್ನಾಟಕ ರಾಜ್ಯ ಸರ್ಕಾರದ ಸಮಾಜ ಕಲ್ಯಾಣಕ್ಕಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ. ಅರ್ಹರಿಗೆ ಯೋಜನೆಗಳು ತಲುಪುವ ಅವಶ್ಯಕತೆ ಬಹಳಷ್ಟಿದೆ. ಈ ಯೋಜನೆಗಳನ್ನು ಜನರಿಗೆ ಅತಿ ಸುಲಭವಾಗಿ ತಲುಪಿಸಲು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಆಯೋಜಿಸಲಾದ ಸಭೆ, ಸಮಾರಂಭಗಳಲ್ಲಿ ಯೋಜನೆಗಳ ಕುರಿತು ಸಾರ್ವಜನಿಕರಿಗೆ ಸತತವಾಗಿ ಮಾಹಿತಿ ತಲುಪಿಸಲಾಗುವುದು.
ಅದೇ ರೀತಿಯಲ್ಲಿ ರಾಜಿಯಾಗಬಹುದಾದ ಪ್ರಕರಣಗಳನ್ನು ಗುರುಸಿ, ಎರಡು ಕಡೆಯ ಕಕ್ಷಿದಾರರನ್ನು ಕರೆಸಿ ಹಿರಿಯ ವಕೀಲರರ ಸಮ್ಮುಖದಲ್ಲಿ ಮಧ್ಯಸ್ಥಿಕೆ ವಹಿಸಿ ರಾಜೀ-ಸಂದಾನಕ್ಕೆ ಯಾವುದೇ ರೀತಿಯ ಒತ್ತಾಯ ಮಾಡದೇ ಮಾತುಕತೆ ನಡೆಸಲಾಗುವುದು ಈ ಕುರಿತು ಈಗಾಗಲೇ 90 ದಿನಗಳ ಕಾಲ ಅಭಿಯಾನ ಹಮ್ಮಿಕೊಳ್ಳಲಾಗಿದೆ.
ಒಂದುವೇಳೆ ಇಬ್ಬರು ಕಕ್ಷಿದಾರರ ಮಧ್ಯ ಪ್ರಕರಣ ಇತ್ಯರ್ಥವಾದಲ್ಲಿ, ನ್ಯಾಯಾಲಯ ಇಬ್ಬರು ಕಕ್ಷಿದಾರ ಮುಚ್ಚಳಿಕೆ ಪಡೆದು ಪ್ರಕರಣ ಖುಲಾಸೆ ಮಾಡಲಾಗುವುದು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯದರ್ಶಿ ಸಂದೀಪ ಪಾಟೀಲ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.