*ಆಪರೇಶನ್ ಸಕ್ಸಸ್, ಪೇಷಂಟ್ ಡೈಡ್ ಎನ್ನುವಂತಾದ ರಾಮದುರ್ಗ ಸಂಧಾನ!!*
ಪ್ರಗತಿವಾಹಿನಿ ಸುದ್ದಿ: ರಾಜ್ಯದ ಹೈ ವೋಲ್ಟೇಜ್ ಕ್ಷೇತ್ರವಾಗಿರುವ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರಿಗೆ ಘೋಷಣೆ ಮಾಡಿದಾಗಿಂದಲು ಅವರಿಗೆ ಸಂಕಷ್ಟದ ಮೇಲೆ ಸಂಕಷ್ಟ ಎದುರಾಗುತ್ತಿದೆ.
ಟಿಕೆಟ್ ಘೋಷಣೆ ಆಗುತ್ತಲೆ ಅವರ ವಿರುದ್ಧ ಸ್ಥಳೀಯ ಬಿಜೆಪಿ ನಾಯಕರು ಗೋ ಬ್ಯಾಕ್ ಶೆಟ್ಟರ್ ಅಭಿಯಾನ ನಡೆಸಿದರು. ಅದರ ಬೆನ್ನಲೆ ಗೆಲುವಿನ ಉತ್ಸಾಹದಲ್ಲಿದ್ದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ.
ರಾಮದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ವಿಧಾನಸಭಾ ಚುನಾವಣೆಯಲ್ಲಾದ ರಾಜಕೀಯ ಬದಲಾವಣೆಯಿಂದ ಮನೆಯೊಂದು ಮೂರು ಬಾಗಿಲು ಎಂಬ ಪರಿಸ್ಥಿತಿ ಅಲ್ಲಿಯ ಬಿಜೆಪಿ ಪಾಳಯದಲ್ಲಿ ಆಗಿತ್ತು, ಯಾವಾಗ ಬಿಜೆಪಿ ಹೈಕಮಾಂಡ್ ವಿಧಾನಸಭಾ ಚುನಾವಣೆಗೆ ಕೇವಲ 8 ದಿನಗಳ ಮುಂಚೆ ಬಿಜೆಪಿ ಸೇರಿದ ಚಿಕ್ಕರೇವಣ್ಣ ಅವರಿಗೆ ಟಿಕೆಟ್ ನೀಡಿತ್ತೊ ಆಗ, ಟಿಕೆಟ್ ಸಿಗುವ ನೀರಿಕ್ಷೆಯಲ್ಲಿದ್ದ ಆ ಸಂದರ್ಭದಲ್ಲಿ ಶಾಸಕರಾಗಿದ್ದ ಮಾಹೇದವಪ್ಪ ಯಾದವಾಡ ಬಿಜೆಪಿ ವರಿಷ್ಠರ ವಿರುದ್ಧ ಗರಂ ಆಗಿ ಚುನಾವಣಾ ಪ್ರಚಾರದಿಂದ ದೂರ ಉಳಿದರು. ಮಹಾದೇವಪ್ಪ ಯಾದವಾಡ ಅವರ ಸಹೋದರ ಮಲ್ಲಣ್ಣ ಯಾದವಾಡ ಬಹಿರಂಗವಾಗಿಯೇ ಕಾಂಗ್ರೆಸ್ ಗೆ ಬೆಂಬಲ ನೀಡಿ ಬಿಜೆಪಿ ಅಭ್ಯರ್ಥಿ ಚಿಕ್ಕರೇವಣ್ಣ ಸೋಲಲು ಪ್ರಮುಖ ಪಾತ್ರ ವಹಿಸಿದರು.
ಆದರೆ ಈಗ ಲೋಕಸಭಾ ಚುನಾವಣೆಯಲ್ಲಿ ಜಗದೀಶ್ ಶೆಟ್ಟರ್ ಮಹಾದೇವಪ್ಪ ಯಾದವಾಡ ಅವರ ಜೊತೆ ಸಭೆ ಮಾಡಿ, ಮತ್ತೆ ಪಕ್ಷದ ಪರವಾಗಿ ಪ್ರಚಾರ ಮಾಡಲು ಸಂಧಾನ ಮಾಡಿದರು. ಇದರಿಂದ ಕೆರಳಿ ಕೆಂಡವಾಗಿರುವ ಚಿಕ್ಕರೇವಣ್ಣ ಅಭಿಮಾನಿಗಳು ಮಹಾದೇವಪ್ಪ ಯಾದವಾಡ ಬಿಜೆಪಿ ಪರವಾಗಿ ಪ್ರಚಾರಕ್ಕೆ ಬಂದರೆ ನಾವು ನಿಮ್ಮ ಪರವಾಗಿ ಪ್ರಚಾರಕ್ಕೆ ಬರುವದಿಲ್ಲ ಎಂದು ಜಗದೀಶ್ ಶೆಟ್ಟರ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಕೆಲಸ ಮಾಡಿದ್ದವರನ್ನೇ ಭೇಟಿ ಮಾಡಿದ್ದೀರಿ. ಇದರ ಅವಶ್ಯಕತೆ ಏನಿತ್ತು. ಚಿಕ್ಕರೇವಣ್ಣ ಅವರು ಕ್ಷೇತ್ರಕ್ಕೆ ಬಂದಿಲ್ಲ ಎಂದು ಹೇಳುತ್ತೀರಿ. ಈ ಕ್ಷಣದಲ್ಲೇ ಅವರನ್ನು ಕರೆಸಿಕೊಳ್ಳುವ ಶಕ್ತಿ ನಮಗಿದೆ. ಒಂದು ವೇಳೆ ಯಾದವಾಡ ನಿಮಗೆ ಬೇಕಾದರೆ ದಯವಿಟ್ಟು ನಮ್ಮ ಬೆಂಬಲ ನಿಮಗೆ ಇಲ್ಲ ಎಂದು ಚಿಕ್ಕರೇವಣ್ಣ ಅಭಿಮಾನಿಗಳು ಶೆಟ್ಟರ್ ಗೆ ಹೇಳಿರುವ ವೀಡಿಯೋ ವೈರಲ್ ಆಗಿದೆ.
ಸುಮಾರು 20 ವರ್ಷಗಳಿಂದ ಬಿಜೆಪಿ ವಶದಲ್ಲಿರುವ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಈಗ ಅಸಮಾಧಾನದ ಹೊಗೆ ಆಡುತ್ತಿದ್ದು, ಬಿಜೆಪಿ ಪಕ್ಷ ಸೋಲಿನ ಭೀತಿಯಲ್ಲಿದೆ. ಸದ್ಯಕ್ಕೆ ಬಿಜೆಪಿ ಒಳಗಿನ ಬಂಡಾಯದ ಬಿಸಿ ಸದ್ಯಕ್ಕೆ ತಣ್ಣಗಾಗುವ ಲಕ್ಷಣ ಕಂಡುಬರುತ್ತಿಲ್ಲ. ಇದರ ನೇರ ಲಾಭ ಕಾಂಗ್ರೆಸ್ ಅಭ್ಯರ್ಥಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಪುತ್ರ ಮೃಣಾಲ ಹೆಬ್ಬಾಳ್ಕರ್ ಗೆ ಸಿಗುವ ಎಲ್ಲಾ ಕ್ಷಣಗಳು ಕಂಡು ಬರುತ್ತಿದೆ. ಬೆಳಗಾವಿ ಬಿಜೆಪಿಯಲ್ಲಿ ಆಡುತ್ತಿರುವ ಅಸಮಾಧಾನವನ್ನು ಬಿಜೆಪಿ ಲೀಡರ್ಸ್ ಶಮನ ಮಾಡುತ್ತಾರಾ ಕಾದು ನೋಡಬೇಕು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ