*ಬೀಗರಿಗೆ ಟಿಕೆಟ್ ತಪ್ಪಿಸಿದ ಶೆಟ್ಟರ್, ಓರ್ವ ಸ್ವಾರ್ಥ ರಾಜಕಾರಣಿ*
ಮಗನ ಪರ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬಿರುಸಿನ ಪ್ರಚಾರ
ಪ್ರಗತಿವಾಹಿನಿ ಸುದ್ದಿ: ಹುಬ್ಬಳ್ಳಿ ಧಾರವಾಡ ಜನರಿಂದ ತಿರಸ್ಕರಿಸಲ್ಪಟ್ಟ ವ್ಯಕ್ತಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಬೆಳಗಾವಿಯಲ್ಲಿ ಸಲ್ಲಲು ಹೇಗೆ ಸಾಧ್ಯ. ಸ್ವತಃ ಬೀಗರಿಗೆ ಟಿಕೆಟ್ ತಪ್ಪಿಸಿ ತಾವೇ ಅಭ್ಯರ್ಥಿಯಾಗುವ ಮೂಲಕ ಸ್ವಾರ್ಥ ರಾಜಕಾರಣಿ ಎಂದು ನಿರೂಪಿಸಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಬಿಜೆಪಿ ಅಭ್ಯರ್ಥಿ ವಿರುದ್ಧ ಕಿಡಿ ಕಾರಿದರು.
ಲೋಕಸಭೆ ಚುನಾವಣೆಯ ಪ್ರಚಾರಾರ್ಥ ಇಂದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಮಾರಿಹಾಳ ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಹೆಬ್ಬಾಳ್ಕರ್ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಸತತವಾಗಿ ಆರು ಬಾರಿ ಆರಿಸಿದ ಹುಬ್ಬಳ್ಳಿ ಧಾರವಾಡ ಜನತೆಯನ್ನು ಮರೆತ ಶೆಟ್ಟರ್ ಅವರಿಂದ ಬೆಳಗಾವಿ ಜನತೆ ಅಭಿವೃದ್ಧಿ ನಿರೀಕ್ಷಿಸುವುದು ಅಸಾಧ್ಯ ಎಂದು ಹೇಳಿದರು. ಸಂಗೊಳ್ಳಿ ರಾಯಣ್ಣ, ಕಿತ್ತೂರು ರಾಣಿ ಚೆನ್ನಮ್ಮ, ಬೆಳವಾಡಿ ಮಲ್ಲಮ್ಮ ನಂತ ಮಹನಿಯರು ಹುಟ್ಟಿ ಬೆಳೆದ ಜಿಲ್ಲೆಗೆ ಇಂಥ ನಾಯಕರು ಬೇಡ ಎಂದು ಹೇಳಿದರು.
ಜಗದೀಶ್ ಶೆಟ್ಟರ್ ತಮ್ಮ 32 ವಯಸ್ಸಿಗೆ ಮೊದಲ ಬಾರಿಗೆ ಶಾಸಕರಾಗಿದ್ದರು. ಅವರಿಗೆ ಬಿಜೆಪಿ ಅಂಥ ಅವಕಾಶಗಳನ್ನು ನೀಡಿದ್ದಕ್ಕೆ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ, ಬಿಜೆಪಿ ರಾಜ್ಯಾಧ್ಯಕ್ಷರಾದರು. ಅವರು ಯುವಕರಾಗಿದ್ದ ಸಿಕ್ಕ ಅವಕಾಶದಿಂದಲೇ ದೊಡ್ಡ ನಾಯಕರೆನಿಸಿಕೊಂಡರು. ನನ್ನ ಮಗನಿಗೆ ಟಿಕೆಟ್ ನೀಡಿದ್ದಕ್ಕೆ ಇನ್ನೂ ಯುವಕ ಎಂದು ಹೇಳಲಾಗುತ್ತಿದೆ. ಯುವಕರಿಗೆ ಅವಕಾಶ ನೀಡೋದು ತಪ್ಪೆ ಎಂದು ಪ್ರಶ್ನಿಸಿದರು.
ಕಳೆದ 11 ವರ್ಷಗಳಿಂದ ಕ್ಷೇತ್ರದ ಜನರೊಂದಿಗೆ ನನ್ನ ಮಗ ಉತ್ತಮ ಒಡನಾಟ ಹೊಂದಿದ್ದಾನೆ. ಈ ಕ್ಷೇತ್ರದ ನಾಡಿ ಮಿಡಿತದ ಅರಿವು ಅವನಿಗಿದೆ. ನನಗೆ ಆಶೀರ್ವದಿಸಿದಂತೆ ನನ್ನ ಮಗನಿಗೂ ಜನ ಸೇವೆ ಮಾಡಲು ಅವಕಾಶ ನೀಡಬೇಕೆಂದು ಹೇಳಿದರು.
ಬೆಳಗಾವಿ ಲೋಕಸಭೆಯ ಸರ್ವಾಂಗೀಣ ಅಭಿವೃದ್ಧಿಗಾಗಿ ಮೃಣಾಲ್ ಉತ್ಸುಕನಾಗಿದ್ದು, ಹಲವಾರು ವಿಷಯಗಳ ಮೂಲಕ ಯುವಕರ ಸವಾಲುಗಳನ್ನು ಕೇಳುವುದರಲ್ಲಿ ಆಸಕ್ತಿ ಹೊಂದಿದ್ದಾನೆ. ಈಗಾಗಲೇ ಜನಸೇವೆಯ ಮೂಲಕ ಸಮಾಜದಲ್ಲಿ ಸಾಕಷ್ಟು ಕೆಲಸ ಮಾಡಿರುವುದು ಎಲ್ಲರಿಗೂ ಗೊತ್ತಿರುವ ವಿಷಯ, ಬೆಳಗಾವಿಯ ಸರ್ವತೋಮುಖದ ಅಭಿವೃದ್ಧಿಗಾಗಿ ಈ ಬಾರಿ ಮೃಣಾಲ್ ಹೆಬ್ಬಾಳಕರ್ ಗೆ ಒಂದು ಅವಕಾಶ ನೀಡಿರಿ ಎಂದು ವಿನಂತಿಸುತ್ತೇನೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿನಂತಿಸಿಕೊಂಡರು.
ಇದೇ ವೇಳೆ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೋಳಿ, ಬೆಳಗಾವಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಹೆಬ್ಬಾಳ್ಕರ್, ವಿನೋದ್ ಚೌವ್ಹಾನ್, ಆಶೀಫ್ ಮುಲ್ಲಾ, ಶಂಕರಗೌಡ ಪಾಟೀಲ, ನಾಗೇಶ್ ದೇಸಾಯಿ, ರಾಮಚಂದ್ರ ಚವ್ಹಾನ್, ಸಂಜಯ್ ಚಾಟೆ, ಬಾಗಣ್ಣ ನರೋಟಿ, ಸಮೀರ್, ಬಸವರಾಜ ಮ್ಯಾಗೋಟಿ, ಗೋರೆಸಾಬ್ ಜಮಾದಾರ ಹಾಗೂ ಪಕ್ಷದ ಕಾರ್ಯಕರ್ತರು ಇದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ