ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಸಂಸತ್ ನಲ್ಲಿ ಭದ್ರತಾ ಲೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೋರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಮೂಲಕ ಬಂಧಿತ ಆರೋಪಿಗಳ ಸಂಖ್ಯೆ 6ಕ್ಕೆ ಏರಿಕೆಯಾಗಿದೆ.
ಮಹೇಶ್ ಕುಮಾರ್ ಬಂಧಿತ ಆರೋಪಿ. ಈತ ಸಂಸತ್ ಭದ್ರತಾ ಲೋಪ ಮಾಸ್ಟರ್ ಮೈಂಡ್ ಲಲಿತ್ ಝಾ ಸ್ನೇಹಿತ ಎನ್ನಲಾಗಿದೆ.
ಡಿಸೆಂಬರ್ 13ರಂದು ಸಂಸತ್ ಅಧಿವೇಶನದ ವೇಳೆ ಲೋಕಸಭಾ ಕಲಾಪ ನಡೆಯುತ್ತಿದ್ದಾಗ ಗ್ಯಾಲರಿಯಿಂದ ಜಿಗಿದ ಸಾಗರ್ ಶರ್ಮಾ ಹಾಗೂ ಮನೋರಂಜನ್ ಎಂಬುವವರು ಸದನದಲ್ಲಿ ಕಲರ್ ಸ್ಪ್ರೇ ಸಿಡಿಸಿ ಆತಂಕ ಸೃಷ್ಟಿಸಿದ್ದರು. ಇದೇ ವೇಳೆ ಸಂಸತ್ ಹೊರಗೆ ಅಮೋಲ್ ಹಾಗೂ ನೀಲಂ ಎಂಬ ಇಬ್ಬರು ಘೋಷಣೆಗಳನ್ನು ಕೂಗುತ್ತಾ ಕಲರ್ ಸ್ಫ್ರೇ ಸಿಡಿಸಿದ್ದರು. ನಾಲ್ವರನ್ನು ಪೊಲಿಸರು ಬಂಧಿಸಿದ್ದರು. ಇದೆಲ್ಲದರ ರೂವಾರಿ ವಿಡಿಯೋ ಮಾಡುತ್ತಿದ್ದ ಲಲಿತ್ ಝಾ ಎಂದು ಹೇಳಲಾಗುತ್ತಿದ್ದು, ಆತ ಘಟನೆ ಬಳಿಕ ಪೊಲೀಸರಿಗೆ ಶರಣಾಗಿದ್ದ.
ಇದೀಗ ಆತನ ಸ್ನೇಹಿತ ಮಹೇಶ್ ಕುಮಾರ್ ನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಇನ್ನೊಂದೆಡೆ ಲೋಕಸಭೆ ಗ್ಯಾಲರಿ ಪ್ರವೇಶಕ್ಕೆ ಸಾಗರ್ ಶರ್ಮಾ ಹಾಗೂ ಮನೋರಂಜನ್ ಗೆ ಪಾಸ್ ನೀಡಿದ್ದ ಬಿಜೆಪಿ ಸಂಸದ ಪ್ರತಾಪ್ ಸಿಂಹ ಅವರನ್ನು ಪೊಲೀಸರು ವಿಚಾರಣೆ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ