
ಪ್ರಗತಿವಾಹಿನಿ ಸುದ್ದಿ: ಪತಿಯ ಹಲ್ಲೆಯಿಂದ ತಲೆಗೆ ಗಂಭೀರ ಗಾಯಗೊಂಡಿದ್ದ ಮಹಿಳೆಯೊಬ್ಬರು ಚಿಕಿತ್ಸೆ ಫಲಿಸದೇ ಮೃತಪಟ್ಟಿರುವ ಘಟನೆ ದಾವಣಗೆರೆ ತಾಲೂಕಿನ ಬೇತೂರು ಗ್ರಾಮದಲ್ಲಿ ನಡೆದಿದೆ.
ಮೃತರನ್ನು ಬೇತೂರು ಗ್ರಾಮದ ಬಸಮ್ಮ (25) ಎಂದು ಗುರುತಿಸಲಾಗಿದೆ. ಬಸಮ್ಮ ಪ್ರೀತಿಸಿ ಅಂತರ್ಜಾತಿ ವಿವಾಹವಾಗಿದ್ದರು ಎನ್ನಲಾಗಿದೆ. ತುಂಬು ಗರ್ಭಿಣಿಯಾಗಿದ್ದ ಅವರ ಮೇಲೆ ವಾರದ ಹಿಂದೆ ಪತಿ ನಿಂಗರಾಜ್ ಹಲ್ಲೆ ನಡೆಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಹಲ್ಲೆಯಿಂದ ತಲೆಗೆ ಗಂಭೀರ ಗಾಯವಾಗಿತ್ತು.
ಗಾಯಗೊಂಡಿದ್ದ ಬಸಮ್ಮ ಅವರನ್ನು ದಾವಣಗೆರೆ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಇದೇ ವೇಳೆ ಆರು ದಿನಗಳ ಹಿಂದೆ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದರು. ಆದರೆ ತಲೆಗೆ ಬಿದ್ದಿದ್ದ ಗಂಭೀರ ಗಾಯದಿಂದ ಆರೋಗ್ಯ ಸ್ಥಿತಿ ಮತ್ತಷ್ಟು ಹದಗೆಟ್ಟ ಹಿನ್ನೆಲೆಯಲ್ಲಿ ವೈದ್ಯರ ಸಲಹೆಯಂತೆ ಅವರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು.
ಕಿಮ್ಸ್ನಲ್ಲಿ ಚಿಕಿತ್ಸೆ ಮುಂದುವರಿದರೂ ಬಸಮ್ಮ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬರಲಿಲ್ಲ. ಕೊನೆಗೆ ಚಿಕಿತ್ಸೆ ಫಲಿಸದೇ ಅವರು ಮೃತಪಟ್ಟಿದ್ದಾರೆ. ಶವವನ್ನು ನಡುರಸ್ತೆಯಲ್ಲಿ ಬಿಟ್ಟು ಮಗುವಿನೊಂದಿಗೆ ಪತಿ ಪರಾರಿ ಆರೋಪ
ಪತ್ನಿ ಮೃತಪಟ್ಟ ಬಳಿಕ ಮೃತದೇಹವನ್ನು ದಾವಣಗೆರೆಗೆ ಕರೆತರುತ್ತಿದ್ದ ವೇಳೆ ನಿಂಗರಾಜ್ ನಡುರಸ್ತೆಯಲ್ಲೇ ಶವವನ್ನು ಬಿಟ್ಟು, ಆರು ದಿನದ ಹಸುಗೂಸಿನೊಂದಿಗೆ ನಾಪತ್ತೆಯಾಗಿದ್ದಾನೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಬಳಿಕ ಬಸಮ್ಮ ಅವರ ಮೃತದೇಹವನ್ನು ದಾವಣಗೆರೆಯ ಇಂದಿರಾನಗರದಲ್ಲಿರುವ ತಾಯಿಯ ಮನೆಗೆ ತರಲಾಗಿದೆ.
ಘಟನೆಯಿಂದ ಆಘಾತಕ್ಕೊಳಗಾದ ಬಸಮ್ಮ ಅವರ ತಾಯಿ, ನಿಂಗರಾಜ್ ವಿರುದ್ಧ ಆಜಾದ್ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮೃತದೇಹವನ್ನು ಜಿಲ್ಲಾ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿದ್ದಾರೆ.
ಸಂಬಂಧಿಕರ ಒತ್ತಾಯದ ಮೇರೆಗೆ ಮರಣೋತ್ತರ ಪರೀಕ್ಷೆಗೆ ಪೊಲೀಸರು ಕ್ರಮ ಕೈಗೊಂಡಿದ್ದು, ನಾಪತ್ತೆಯಾಗಿರುವ ನಿಂಗರಾಜ್ ಹಾಗೂ ಹಸುಗೂಸಿಗಾಗಿ ಶೋಧ ಕಾರ್ಯ ಮುಂದುವರಿದಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




