*ಎಣ್ಣೆ ಅಮಲಿನಲ್ಲಿ 20ಕ್ಕೂ ಹೆಚ್ಚು ವಾಹನಗಳಿಗೆ ಗುದ್ದಿದ ಲಾರಿ ಚಾಲಕ: ಇಬ್ಬರು ಸಾವು*

ಪ್ರಗತಿವಾಹಿನಿ ಸುದ್ದಿ: ಮದ್ಯದ ಅಮಲಿನಲ್ಲಿ ಲಾರಿ ಚಾಲಕನೊಬ್ಬ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮೃತಪಟ್ಟಿದ್ದು ಹಲವರಿಗೆ ಗಂಭೀರ ಗಾಯವಾದ ಘಟನೆ ಆನೆಕಲ್ನಲ್ಲಿ ನಡೆದಿದೆ.
ಆನೇಕಲ್ ಪಟ್ಟಣ ಸಮೀಪದ ಬೆಸ್ತಮಾನಹಳ್ಳಿಯಲ್ಲಿ ಈ ಅಪಘಾತ ನಡೆದಿದೆ. ಲಾರಿ ಚಾಲಕ ರಸ್ತೆಯಲ್ಲಿ ಸಂಚರಿಸುತ್ತಿದ್ದ ವಾಹನ, ನಿಲ್ಲಿಸಿದ್ದ ವಾಹನಗಳಿಗೆ ಡಿಕ್ಕಿ ಹೊಡೆದು ವೇಗವಾಗಿ ಚಲಿಸಿದ್ದಾನೆ. ಘಟನೆಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಇನ್ನು ಐದಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಸ್ಥಳೀಯ ಆಸ್ಪತ್ರೆಯಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಸರಣಿ ಅಪಘಾತ ನಡೆಸಿ ಅತೀ ವೇಗವಾಗಿ ಸಾಗುತ್ತಿದ್ದ ಕಂಟೈನರ್ನ್ನು ಪೊಲೀಸರು ಚೇಸ್ ಮಾಡಿದ್ದಾರೆ. ಆದರೆ ಚಾಲಕ ಪೊಲೀಸರಿಂದ 14 ಕಿಮೀ ತಪ್ಪಿಸಿಕೊಂಡು ಹೋಗಿದ್ದಾನೆ. ಹೊಸೂರು ಹೆದ್ದಾರಿ ಚಂದಾಪುರದಲ್ಲಿ ಸಾರ್ವಜನಿಕರು ಕಲ್ಲುತೂರಾಟ ನಡೆಸಿದ್ದಾರೆ.ಕಲ್ಲು ತೂರಾಟ ನಡೆಸಿದ್ದರಿಂದ ಚಾಲಕ ಗಾಯಗೊಂಡಿದ್ದಾನೆ. ಹೀಗಾಗಿ ವಾಹನ ನಿಲ್ಲಿಸಿದ್ದಾನೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು ಪರಿಸ್ಥಿತಿಯನ್ನು ತಿಳಿಗೊಳಿಸಿದ ಪೊಲೀಸರು ಚಾಲಕನನ್ನು ವಶಕ್ಕೆ ಪಡೆದಿದ್ದಾರೆ.




