Latest

ಮಹದಾಯಿ: ಕರ್ನಾಟಕಕ್ಕೆ ಹಲವು ನಿಬಂಧನೆ ಹಾಕಲಾಗಿದೆ

 ಪ್ರಗತಿವಾಹಿನಿ ಸುದ್ದಿ, ಪಣಜಿ: ಗೋವಾದಲ್ಲಿ ಪಬ್ಲಿಕ್ ಹಿಯರಿಂಗ್ ನಡೆಸಿದ ನಂತರವೇ ಮಹದಾಯಿ ವಿಷಯದಲ್ಲಿ ಕರ್ನಾಟಕಕ್ಕೆ ಪರಿಸರ ಪರವಾನಗಿ ಲಭಿಸುತ್ತದೆ ಎಂಬ ನಿಬಂಧನೆ ಹಾಕಲಾಗಿದೆ ಎಂದು ಕೇಂದ್ರ ಸಚಿವ ಪ್ರಕಾಶ ಜಾವಡೇಕರ್ ಮಾಹಿತಿ ನೀಡಿದ್ದಾರೆ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹೇಳಿದ್ದಾರೆ.

ಮಂಗಳವಾರ ಪಣಜಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು.

Related Articles

ಮಹದಾಯಿ ನದಿ ವಿಷಯದಲ್ಲಿ ನಾವು ಗಂಭೀರವಾಗಿದ್ದೇವೆ ಮತ್ತು ಪ್ರಾಮಾಣಿಕವಾಗಿದ್ದೇವೆ. ನಿನ್ನೆ ದೆಹಲಿಯಲ್ಲಿ ಕೇಂದ್ರ ಸಚಿವ ಪ್ರಕಾಶ ಜಾವಡೇಕರ್ ರವರನ್ನು ಭೇಟಿ ಮಾಡಿ ಗೋವಾದ ಸರ್ವಪಕ್ಷ ನಿಯೋಗ ಚರ್ಚೆ ನಡೆಸಿದೆ. ಮಹದಾಯಿ ವಿಷಯದಲ್ಲಿ ನಾನು ಕೇಂದ್ರ ಸಚಿವರಿಗೆ ಗೋವಾದ ಅಭಿಪ್ರಾಯವನ್ನು ಮಂಡಿಸಿದ್ದೇನೆ. ಕರ್ನಾಟಕಕ್ಕೆ ನೀಡಿರುವ ಪರಿಸರ ಪರವಾನಗಿ ಪತ್ರ ನನ್ನ ಕೈಗೆ ಬಂದಿರಲಿಲ್ಲ ಮತ್ತು ನಾನು ಸಹಿ ಮಾಡಿಲ್ಲ. ಆ ಪತ್ರದಲ್ಲಿ ಹಲವು ನಿಬಂಧನೆಗಳನ್ನು ಹಾಕಲಾಗಿದೆ. ಗೋವಾದಲ್ಲಿ ಪಬ್ಲಿಕ್ ಹಿಯರಿಂಗ್ ನಡೆಸಿದ ನಂತರವೇ ಪರಿಸರ ಪರವಾನಗಿ ಲಭಿಸುತ್ತದೆ ಎಂಬ ನಿಬಂಧನೆ ಹಾಕಲಾಗಿದೆ ಎಂದು ಕೇಂದ್ರ ಸಚಿವ ಪ್ರಕಾಶ ಜಾವಡೇಕರ್ ಮಾಹಿತಿ ನೀಡಿದ್ದಾರೆ ಎಂದು   ಸಾವಂತ್  ಮಾಹಿತಿ ನೀಡಿದರು.
ಮಹದಾಯಿ ನದಿ ವಿಷಯಕ್ಕೆ ಸಂಬಂಧಿಸಿದಂತೆ ಮಂಗಳವಾರ ಗೋವಾದ ಎಲ್ಲ ಶಾಸಕರು ಮತ್ತು ಸಚಿವರೊಂದಿಗೆ ಬೈಠಕ್ ನಡೆಸಿ ಚರ್ಚೆ ನಡೆಸಿದರು. ನಂತರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು.
೨೦೧೮ ರಲ್ಲಿ ರಾಷ್ಟ್ರೀಯ ಹಸಿರು ಪೀಠವು ತೀರ್ಪು ನೀಡಿದ್ದ ಸಂದರ್ಭದಲ್ಲಿ ಗೋವಾದ ಅಂದಿನ ಮುಖ್ಯಮಂತ್ರಿಗಳು ಅನಾರೋಗ್ಯದಲ್ಲಿದ್ದರು. ಅಂದಿನ ಜಲಸಂಪನ್ಮೂಲ ಸಚಿವರಾಗಿದ್ದವರು ಮಹದಾಯಿ ತೀರ್ಪಿನ ಬಗ್ಗೆ ಹೆಚ್ಚಿನ ಲಕ್ಷ್ಯವಹಿಸಿಲ್ಲ. ಲಕ್ಷ್ಯವಹಿಸಿದ್ದರೆ ಇಂದು ರಾಷ್ಟ್ರೀಯ ಹಸಿರು ಪೀಠದಲ್ಲಿ ಅರ್ಜಿ ಸಲ್ಲಿಸುವವರು ಅಂದೇ ಸಲ್ಲಿಸಬಹುದಾಗಿತ್ತು. ಅಂದು ಆ ಸಚಿವರಿಗೆ ಎಷ್ಟು ತಿಳಿಯುತ್ತಿತ್ತು ಎಂಬುದು ನಿಮಗೂ ಗೊತ್ತಿದೆ. ನಾನು ಮುಖ್ಯಮಂತ್ರಿಯಾದ ನಂತರ ಏಪ್ರಿಲ್‌ನಲ್ಲಿ ನಾವು ಮಹದಾಯಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ವೋಚ್ಛ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದೆವು ಎಂದು ಮುಖ್ಯಮಂತ್ರಿ ಸಾವಂತ್ ನುಡಿದರು.
ಕರ್ನಾಟಕಕ್ಕೆ ಕಳಸಾ ಬಂಡೂರಿ ಯೋಜನೆಗೆ ಪರಿಸರ ಪರವಾನಗಿ ನೀಡಿರುವುದನ್ನು ಹಿಂಪಡೆಯಬೇಕು. ಮಹದಾಯಿ ನದಿ ನೀರು ವಿಷಯ ಸರ್ವೋಚ್ಛ ನ್ಯಾಯಾಲಯಲ್ಲಿದೆ. ಇದರಿಂದಾಗಿ ಮುಂಬರುವ ದಿನಗಳಲ್ಲಿ ಕೇಂದ್ರ ಸರ್ಕಾರವು ಮಹದಾಯಿ ನದಿ ನೀರು ವಿಷಯದಲ್ಲಿ ನ್ಯಾಯಾಲಯದ ಹೊರಗೆ ನಿರ್ಣಯ ತೆಗೆದುಕೊಳ್ಳುವುದು ಬೇಡ. ಒಂದು ವೇಳೆ ಮಧ್ಯ ಪ್ರವೇಶಿಸಲೇಬೇಕಾದರೆ ಗೋವಾ, ಕರ್ನಾಟಕ, ಮಹಾರಾಷ್ಟ್ರ ಈ ಮೂರು ರಾಜ್ಯಗಳ ಪ್ರತಿನಿಧಿಗಳು ಮಹದಾಯಿ ಅಭಯಾರಣ್ಯ ಭಾಗದಲ್ಲಿ ಸ್ಥಳ ಪರಿಶೀಲನೆ ನಡೆಸಿ ನಂತರ ಮೂರೂ ರಾಜ್ಯಗಳು ಚರ್ಚೆ ನಡೆಸಿದ ನಂತರವೇ ನಿರ್ಣಯ ತೆಗೆದುಕೊಳ್ಳಬೇಕು ಎಂದು ಕೇಂದ್ರ ಸಚಿವ ಪ್ರಕಾಶ ಜಾವಡೇಕರ್ ರವರಿಗೆ ಮನವಿ ಮಾಡಿದ್ದೇವೆ. ಮೂರು ರಾಜ್ಯಗಳ ಹಿತ ನನ್ನ ಗಮನದಲ್ಲಿದೆ. ಹತ್ತು ದಿನಗಳ ಒಳಗಾಗಿ ನಾನು ಯೋಗ್ಯ ನಿರ್ಣಯ ತೆಗೆದುಕೊಳ್ಳುತ್ತೇನೆ. ನಂತರ ಅಧೀಕೃತ ಪತ್ರವನ್ನೂ ಗೋವಾಕ್ಕೆ ಕಳುಹಿಸುವುದಾಗಿ ಕೇಂದ್ರ ಸಚಿವ ಜಾವಡೇಕರ್ ಭರವಸೆ ನೀಡಿದ್ದಾರೆ. ಮಹದಾಯಿ ಪ್ರಕರಣದಲ್ಲಿ ನಾವು ಜಯಗಳಿಸುತ್ತೇವೆ ಎಂಬ ಸಂಪೂರ್ಣ ವಿಶ್ವಾಸ ನನಗಿದೆ ಎಂದು ಮುಖ್ಯಮಂತ್ರಿ ಸಾವಂತ್ ವಿಶ್ವಾಸ ವ್ಯಕ್ತಪಡಿಸಿದರು.
ಕೇಂದ್ರ ಸಚಿವ ಜಾವಡೇಕರ್ ರವರು ಕರ್ನಾಟಕಕ್ಕೆ ಪರಿಸರ ಪರವಾನಗಿ ವಿಷಯಕ್ಕೆ ಸಂಬಂಧಿಸಿದಂತೆ ತಮ್ಮ ಟ್ವೀಟರ್‌ನಲ್ಲಿ ಟ್ವೀಟ್ ಮಾಡಿರುವುದಕ್ಕೆ ಸಂಬಂಧಿಸಿದಂತೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿ ಸಾವಂತ್- ಮಂತ್ರಿಗಳ ಕಛೇರಿಯೇ ಈ ಎಲ್ಲ ವ್ಯವಹಾರವನ್ನು ನೋಡಿಕೊಳ್ಳುತ್ತದೆ. ಇದರಿಂದಾಗಿ ತಪ್ಪು ಮೆಸೇಜ್ ಸೆಂಡ್ ಆಗಿರಬಹುದು. ಟ್ರಿಬುನಲ್ ಆರ್ಡರ್ ಆದ ನಂತರ ನೋಟಿಫೈ ಆಗಿಲ್ಲ. ನೋಟಿಫೈ ಆದ ನಂತರ ಅದು ಇಂಪ್ಲಿಮೆಂಟ್ ಆಗುತ್ತದೆ. ನಾವು ಇದಕ್ಕೂ ಮುನ್ನವೇ ಮಹದಾಯಿ ವಿಷಯದಲ್ಲಿ ಸರ್ವೋಚ್ಛ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದೇವೆ ಎಂದು ಮುಖ್ಯಮಂತ್ರಿ ಪ್ರಮೋದ ಸಾವಂತ್ ನುಡಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button