
ಪ್ರಗತಿವಾಹಿನಿ ಸುದ್ದಿ, ವಿಜಯಪುರ: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಅಶ್ಲೀಲ, ಅವಮಾನಕರ ಪದಗಳ ಬಳಕೆಯಿಂದ ಧರ್ಮ- ಜಾತಿಗಳ ಮಧ್ಯೆ ದ್ವೇಷ ಬಿತ್ತುವ ಕೆಲಸ ಮಾಡುತ್ತಿದ್ದು, ಅವರು ತಮ್ಮ ನಡವಳಿಕೆಗಳ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್ ಕಿಡಿ ಕಾರಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಯತ್ನಾಳ್ ಪ್ರತಿ ದಿನ ಇದೇ ಕೆಲಸವನ್ನು ಹಚ್ಚಿಕೊಂಡಿದ್ದಾರೆ. ಸೋನಿಯಾ ಗಾಂಧಿ ಅವರಿಗೆ ವಿಷಕನ್ಯೆ, ಪಾಕಿಸ್ತಾನ ಏಜೆಂಟ್ ಎಂದು ಹೇಳುವ ಮೂಲಕ ಅವಹೇಳನ ಮಾಡಿದ್ದಾರೆ. ಸೋನಿಯಾ ಗಾಂಧಿ ಅವರು ತಮಗೆ ಎರಡು ಬಾರಿ ಒದಗಿ ಬಂದಿದ್ದ ಪ್ರಧಾನಮಂತ್ರಿ ಸ್ಥಾನದ ಅವಕಾಶ ತ್ಯಾಗ ಮಾಡಿ, ಮನಮೋಹನ ಸಿಂಗ್ ಅವರನ್ನು ಪ್ರಧಾನಿ ಮಾಡಿದ್ದಾರೆ. ಅಧಿಕಾರಕ್ಕೆ ಆಸೆ ಪಡದ ಮಹಿಳೆಯೊಬ್ಬರ ಬಗ್ಗೆ ಯತ್ನಾಳ ಕನಿಷ್ಠವಾಗಿ ಮಾತನಾಡಿದ್ದಾರೆ” ಎಂದರು.
“ಯತ್ನಾಳ್ ಅವರು ಈವರೆಗೆ ಯಾರೆಲ್ಲರನ್ನೂ ಟೀಕಿಸಿದ್ದಾರೋ ಅವೆಲ್ಲವನ್ನೂ ಕ್ರೋಢೀಕರಿಸಿದರೆ ದೊಡ್ಡ ಗ್ರಂಥವೇ ಆಗುತ್ತದೆ. ಒಂದೆಡೆ ಕಾಂಗ್ರೆಸ್ ನಾಯಕರನ್ನು ಹೀನಾಯವಾಗಿ ಟೀಕಿಸುತ್ತಾರೆ, ಇನ್ನೊಂದೆಡೆ ಸ್ವಪಕ್ಷೀಯರನ್ನು ಟೀಕಿಸುತ್ತಾರೆ. ಯಡಿಯೂರಪ್ಪ ಹಾಗೂ ವಿಜಯೇಂದ್ರ ಅವರನ್ನು ವರ್ಷಗಟ್ಟಲೆ ಅಸಹ್ಯಕರ ರೀತಿಯಲ್ಲಿ ಟೀಕೆ ಮಾಡಿದ್ದಾರೆ. ವಿ. ಸೋಮಣ್ಣ ಅವರೊಂದಿಗೆ ಕಿತ್ತಾಡಿಕೊಂಡು ಈಗ ಮತ್ತೆ ಗೆಳೆತನ ಮಾಡುತ್ತಿದ್ದಾರೆ. ಇವರನ್ನು ರಾಜ್ಯದ ಜನತೆ ಏನೆಂದು ಕರೆಯುತ್ತಾರೆ ಎಂಬ ಬಗ್ಗೆ ಅವರಿಗೆ ಪ್ರಜ್ಞೆ ಬೇಕು” ಎಂದು ಎಂ.ಬಿ. ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ