*ಶೆಟ್ಟರ್ ಭೇಟಿಯಾದ ರಮೇಶ್ ಜಾರಕಿಹೊಳಿ; ಸಚಿವ ಎಂ.ಬಿ.ಪಾಟೀಲ್ ಹೇಳಿದ್ದೇನು?*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಶಾಸಕ ರಮೇಶ್ ಜಾರಕಿಹೊಳಿ, ಮಾಜಿ ಸಿಎಂ ಜಗದೀಶ್ ಶೆಟ್ಟರ್ ಭೇಟಿ ರಾಜ್ಯ ರಾಜಕೀಯದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಈ ಕುರಿತು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಪ್ರತಿಕ್ರಿಯೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಎಂ.ಬಿ.ಪಾಟೀಲ್, ರಮೇಶ್ ಜಾರಕಿಹೊಳಿ ಹಾಗೂ ಶೆಟ್ಟರ್ ಭೇಟಿ ವೈಯಕ್ತಿಕ ಭೇಟಿಯೋ ಅಥವಾ ರಾಜಕೀಯ ಭೇಟಿಯೋ ಎಂಬ ಬಗ್ಗೆ ನನಗೆ ಗೊತ್ತಿಲ್ಲ. ಬಹುಶಃ ರಮೇಶ್ ಜಾರಕಿಹೊಳಿಗೆ ಕಾಂಗ್ರೆಸ್ ಸೇರುವ ಒಲವಿರಬಹುದು ಎಂದು ಹೇಳಿದ್ದಾರೆ.
ಬೇರೆ ಪಕ್ಷದ ನಾಯಕರು ಕಾಂಗ್ರೆಸ್ ಸೇರುವ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ನವರು ನಿರ್ಧರಿಸುತ್ತಾರೆ. ಈ ಬಗ್ಗೆ ನಾನು ಏನೂ ಹೇಳಲ್ಲ ಎಂದು ಹೇಳಿದರು.
ಇನ್ನು ಬಿಜೆಪಿ ಆಪರೇಷನ್ ಕಮಲ ವಿಚಾರವಾಗಿ ಮಾತನಾಡಿದ ಅವರು, ಆಪರೇಷನ್ ಕಮಲ ಮಾಡಬೇಕಾದರೆ 65 ಶಾಸಕರು ಬೇಕು. ಬಿಜೆಪಿಗೆ ಅಷ್ಟು ಶಾಸಕರು ಸಿಗ್ತಾರಾ? 5 ಶಾಸಕರು ಕೂಡ ಸಿಗಲ್ಲ ಎಂದು ಟಾಂಗ್ ನೀಡಿದ್ದಾರೆ.
ಆಪರೇಷನ್ ಕಮಲದ ಬಳಿಕ ಬಿಜೆಪಿ ಕಥೆ ಏನಾಗಿದೆ ಅಂತ ಗೊತ್ತಿದೆಯಲ್ಲ. ಬಿಜೆಪಿ ಮುಳುಗುತ್ತಿರುವ ಹಡಗಲ್ಲ, ಈಗಾಗಲೇ ಮುಳುಗಿರುವ ಹಡಗು. ಪಕ್ಷಕ್ಕೆ ನಾಯಕರೇ ಇಲ್ಲ ಎಂದು ಅವರದ್ದೇ ಪಕ್ಷದ ರೇಣುಕಾಚಾರ್ಯ ಹೇಳಿಕೆ ನೀಡಿದ್ದಾರೆ ಎಂದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ