*ಮಾಜಿ ಸಿಎಂ ಬೊಮ್ಮಾಯಿಗೆ ಕಾಂಗ್ರೆಸ್ ಗೆ ಆಹ್ವಾನಿಸಿದ ಸಚಿವ ಎಂ.ಬಿ.ಪಾಟೀಲ್*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ವಿಧಾನಸಭೆ ಚುನಾವಣೆ ಫಲಿತಾಂಶ ಬಂದು ಹೊಸ ಸರ್ಕಾರ ರಚನೆಯಾಗಿ ತಿಂಗಳು ಕಳೆದಿದೆ. ಅಧಿವೇಶನವೂ ಮುಗಿಯುತ್ತಾ ಬಂದಿದೆ. ಆದರೂ ವಿಪಕ್ಷ ನಾಯಕನ ಆಯ್ಕೆ ಮಾತ್ರ ಇನ್ನೂ ಕಗ್ಗಂಟಾಗೇ ಉಳಿದಿದೆ. ಈ ಬಗ್ಗೆ ಕಾಂಗ್ರೆಸ್ ನಾಯಕರು ಬಿಜೆಪಿ ಕಾಲೆಳೆದಿದ್ದಾರೆ.
ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್, ಟ್ವೀಟ್ ಮೂಲಕ ಶೀಘ್ರದಲ್ಲಿಯೇ ವಿಪಕ್ಷ ನಾಯಕನಾಗಲಿರುವ ಹೆಚ್.ಡಿ.ಕುಮಾರಸ್ವಾಮಿಯವರಿಗೆ ಅಭಿನಂದನೆಗಳು. ಅಂತಿಮವಾಗಿ ಬಸವರಾಜ್ ಬೊಮ್ಮಾಯಿ ಅವರನ್ನು ಮೂಲೆಗುಂಪು ಮಾಡಲು ನಿರ್ಧರಿಸಿದಂತಿದೆ. ಬೊಮ್ಮಾಯಿ ಅವರಿಗೂ ಸಹ ಬಿ.ಎಸ್.ಯಡಿಯೂರಪ್ಪ, ಜಗದೀಶ್ ಶೆಟ್ಟರ್ ಅವರಿಗೆ ಬಂದ ಸ್ಥಿತಿಯೇ ಬರಲಿದೆ. ಬಿಜೆಪಿ ಕುಸಿಯುತ್ತಿರುವ ಕಾರ್ಡ್ ಗಳ ಮನೆ ಎಂದು ತಿಳಿಸಿದ್ದಾರೆ.
ಇದೇ ವೇಳೆ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಅವರು ಕಾಂಗ್ರೆಸ್ ಸೇರುವ ಬಗ್ಗೆ ಯೋಚಿಸಬೇಕು ಎಂದು ಹೇಳುವ ಮೂಲಕ ಕಾಂಗ್ರೆಸ್ ಗೆ ಆಹ್ವಾನ ನೀಡಿದ್ದಾರೆ. ಬೊಮ್ಮಾಯಿ ಅವರು ಈ ಹಿಂದಿನಂತೆ ಹಾಗೂ ಹಿರಿಯ ಬೊಮ್ಮಾಯಿ ಅವರಂತೆ ಜಾತ್ಯಾತೀತ ಸಿದ್ಧಾಂತಕ್ಕೆ ಮರಳಿದರೆ ಕಾಂಗ್ರೆಸ್ ಹೈಕಮಾಂಡ್ ಪರಿಗಣಿಸಬಹುದು ಎಂದು ಹೇಳಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ