*ರಾಜ್ಯ ಬಿಜೆಪಿಯಲ್ಲಿ ಸಂಚಲನ ಸೃಷ್ಟಿಸಿದ ರೇಣುಕಾಚಾರ್ಯ ಹೇಳಿಕೆ*
ಪ್ರಗತಿವಾಹಿನಿ ಸುದ್ದಿ; ದಾವಣಗೆರೆ: ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲಿನ ಬಳಿಕ ಸ್ವಪಕ್ಷದ ವಿರುದ್ಧವೇ ಬಹಿರಂಗವಾಗಿ ಅಸಮಾಧಾನಹೊರ ಹಾಕುವ ಮೂಲಕ ರಾಜ್ಯ ಬಿಜೆಪಿ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಇದೀಗ ಮತ್ತೊಂದು ಹೇಳಿಕೆ ನೀಡಿದ್ದಾರೆ.
ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರೇಣುಕಾಚಾರ್ಯ, ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ಬಿ.ವೈ.ವಿಜಯೇಂದ್ರ ಅವರನ್ನು ನೇಮಕ ಮಾಡಬೇಕು. ಇದರಿಂದ ಪಕ್ಷಕ್ಕೆ ಹಾಗೂ ಲೋಕಸಭಾ ಚುನಾವಣೆ ಎದುರಿಸಲು ಒಳ್ಳೆಯದಾಗುತ್ತದೆ ಎಂದು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಮಾಸ್ ಲೀಡರ್. ದೇಶಕ್ಕೆ ನಾಯಕ. ಆದರೆ ರಾಜ್ಯದಲ್ಲಿ ಮೋದಿ ಫೋಟೋ ತೋರಿಸಿದ್ರೆ ಸಾಲದು. ಅದು ಚುನಾವಣೆಯಲ್ಲಿ ಮತವಾಗಿ ಪರಿವರ್ತನೆಯಾಗಬೇಕು. ಬಿ.ವೈ.ವಿಜಯೇಂದ್ರಗೆ ಮತವಾಗಿ ಪರಿಗಣಿಸುವ ಶಕ್ತಿ ಇದೆ. ಬರೀ ಪ್ರಧಾನಿ ಮೋದಿ ಫೋಟೋ ಇಟ್ಟುಕೊಂಡರೆ ಆಗದು ಎಂದಿದ್ದಾರೆ.
ರಾಜ್ಯದಲ್ಲಿ ಬಿಜೆಪಿಗೆ ಮತ ತರುವ ಶಕ್ತಿ ಇರುವುದು ಯಡಿಯೂರಪ್ಪ ಹಾಗೂ ವಿಜಯೇಂದ್ರಗೆ ಮಾತ್ರ. ಈ ನಿಟ್ಟಿನಲ್ಲಿ ವಿಜಯೇಂದ್ರಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಲಿ ಎಂದು ಬಹಿರಂಗವಾಗಿ ಹೇಳಿದ್ದಾರೆ. ರೇಣುಕಾಚಾರ್ಯ ಅವರ ಈ ಹೇಳಿಕೆ ರಾಜ್ಯಾಧ್ಯಕ್ಷ ಹುದ್ದೆ ಮೇಲೆ ಕಣ್ಣಿಟ್ಟಿದ್ದ ಹಲವು ಬಿಜೆಪಿ ನಾಯಕರಿಗೆ ಇರಿಸುಮುರಿಸುಂಟಾಗುವಂತೆ ಮಾಡಿದೆ. ಬಿಜೆಪಿ ವಲಯದಲ್ಲಿಯೇ ಚರ್ಚೆಗೂ ಕಾರಣವಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ