ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕೇಂದ್ರದ ಮಾಜಿ ಸಚಿವ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಎಂ.ವಿ. ರಾಜಶೇಖರನ್ ವಯೋಸಹಜ ಕಾಯಿಲೆ ಹಾಗೂ ತೀವ್ರ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಅವರ್ಗೆ 91 ವರ್ಷ ವಯಸ್ಸಾಗಿತ್ತು.
ಇಂದು ಮುಂಜಾನೆ ಬೆಂಗಳೂರಿನ ಜಯನಗರದ ಅಪೋಲೋ ಆಸ್ಪತ್ರೆಯಲ್ಲಿ ರಾಜಶೇಖರನ್ ಕೊನೆಯುಸಿರೆಳೆದಿದ್ದಾರೆ. ಎಂ.ವಿ. ರಾಜಶೇಖರನ್ ಅವರ ಮೃತದೇಹವನ್ನು ಅವರ ಮನೆಯಲ್ಲಿ ಕುಟುಂಬಸ್ಥರ ದರ್ಶನಕ್ಕೆ ಇರಿಸಲಾಗಿದೆ. ಲಾಕ್ಡೌನ್ ಹಿನ್ನೆಲೆಯಲ್ಲಿ ತೀರಾ ಆಪ್ತರು ಮತ್ತು ಕುಟುಂಬದವರಿಗೆ ಮಾತ್ರ ದರ್ಶನಕ್ಕೆ ಅವಕಾಶ ನೀಡಲಾಗಿದೆ.
1928ರಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕನಕಪುರ ತಾಲೂಕಿನ ಮರಳವಾಡಿಯಲ್ಲಿ ಹುಟ್ಟಿದ ಎಂ.ವಿ. ರಾಜಶೇಖರನ್ ದೇಶದ ಸಜ್ಜನ ರಾಜಕಾರಣಿಗಳಲ್ಲಿ ಒಬ್ಬರು. ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ನಡೆದ ಮೈಸೂರು ಚಲೋ ಚಳವಳಿಯಲ್ಲಿಯೂ ಪಾಲ್ಗೊಂಡಿದ್ದ ರಾಜಶೇಖರನ್ ನಂತರ ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡರು.
ರಾಜಶೇಖರನ್ ಅವರು 1953ರಲ್ಲಿ ದೆಹಲಿ ವಿಶ್ವವಿದ್ಯಾನಿಲಯದಲ್ಲಿ ಕಾನೂನು ವ್ಯಾಸಂಗ ಮುಗಿಸಿ ಬಂದು ಕೃಷಿಯಲ್ಲಿ ತೊಡಗಿದ್ದ ಅವರು, ಬಳಿಕ ಸಂಕ್ರಿಯ ರಾಜಕಾರಣದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಅಖಿಲ ಭಾರತ ಕಾಂಗ್ರೆಸ್ ಪಕ್ಷದಲ್ಲಿ ನಾನಾ ಹುದ್ದೆಗಳನ್ನು ನಿಭಾಯಿಸಿ, ಬಳಿಕ ಶಾಸಕರೂ ಆಗಿದ್ದರು. ರಾಜ್ಯಸಭೆ ಸದಸ್ಯರಾಗಿ ಆಯ್ಕೆಯಾಗಿದ್ದ ಅವರು ಯುಪಿಎ ಸರ್ಕಾರದಲ್ಲಿ ಯೋಜನಾ ಖಾತೆಯ ರಾಜ್ಯ ಸಚಿವರಾಗಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ