ಪ್ರಗತಿವಾಹಿನಿ ಸುದ್ದಿ: ವಿಶ್ವದ ಅತಿದೊಡ್ಡ ಆಧ್ಯಾತ್ಮಿಕ ಹಬ್ಬ ಮಹಾ ಕುಂಭಮೇಳ ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ಆರಂಭವಾಗಿದೆ. 144 ವರ್ಷಗಳಿಗೊಮ್ಮೆ ನಡೆಯುವ ಈ ವಿಶೇಷ ಮಹಾಕುಂಭ ಮೇಳ ಈ ಬಾರಿ ನಡೆಯುತ್ತಿದ್ದು, ಪ್ರಯಾಗ್ ರಾಜ್ ಗೆ ಪ್ರತಿದಿನ ಲಕ್ಷಾಂತರ ಜನರು ಆಗಮಿಸಿ ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡುತ್ತಿದ್ದಾರೆ. ದೇಶ, ವಿದೇಶಗಳಿಂದಲೂ ಪ್ರಯಾಗ್ ರಾಜ್ ಗೆ ಜನರು ಆಗಮಿಸುತ್ತಿದ್ದು, ಮಹಾಕುಂಭಮೇಳದ ಸಂದರ್ಭದಲ್ಲಿ ಗಂಗಾ-ಯಮುನಾ-ಗುಪ್ತಗಾಮಿನಿ ಸರಸ್ವತಿ ನದಿಗಳ ತ್ರಿವೇಣಿ ಸಂಗಮದಲ್ಲಿ ತೀರ್ಥ ಸ್ನಾನ ಮಾಡಿದರೆ ಜನ್ಮಜನ್ಮಾಂತರಗಳ ಪಾಪಗಳು ನಾಶವಾಗಿ ಪುಣ್ಯ ಪ್ರಾಪ್ತಿಯಾಗುತ್ತದೆ. ಅಲ್ಲದೇ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂಬುದು ನಂಬಿಕೆ.
ಮಹಾಕುಂಭ ಮೇಳದಲ್ಲಿ ಲಕ್ಷಾಂತರ ಜನರು ಮಾತ್ರವಲ್ಲ ನಾಗಾಸಾಧುಗಳು, ಅಘೋರಿಗಳು, ಸಾಧು-ಸಂತರು, ಸನ್ಯಾಸಿಗಳ ಆದ್ಯಾತ್ಮ ಲೋಕವೇ ಅನಾವರಣಗೊಂಡಿದೆ. ಕುಂಭಮೇಳದಂತಹ ಸಂದರ್ಭಗಳಲ್ಲಿ ಮಾತ್ರ ಕಾಣಿಸಿಕೊಳ್ಳುವ ನಾಗಾಸಾಧುಗಳು ಈ ಬಾರಿ ಮಹಾಕುಂಭಮೇಳದಲ್ಲಿ ಗಮನ ಸೆಳೆಯುತ್ತಿದ್ದಾರೆ. ಕುಂಭಮೇಳದ ಬಳಿಕ ಯಾರಕಣ್ಣಿಗೂ ಕಾಣದಂತೆ ನಿಗೂಢವಾಗಿ ಮಾಯವಾಗುವ ನಾಗಾಸಾಧುಗಳು ಈ ಬಾರಿ ಕುಂಭ ಮೇಳದಲ್ಲಿ ಹೊಸ ಲೋಕವನ್ನು ಸೃಷ್ಟಿಸಿದ್ದಾರೆ. ಅದರಲ್ಲಿಯೂ 30 ವರ್ಷಗಳಿಂದ ಸ್ನಾನವನ್ನೇ ಮಾಡದ ಮೂರು ಅಡಿಯ ನಾಗಾಸಾಧು, ಬಾಲ ನಾಗಸಾಧು, 7 ಅಡಿ ಎತ್ತರದ ರಷ್ಯನ್ ಮೂಲದ ನಾಗಾಸಾಧು, ತಲೆಯ ಮೇಲೆ ಗಿಡಗಳನ್ನು ಬೆಳೆಸಿ ಪರಿಸರ ಕಾಳಜಿ ಸಾರುತ್ತಿರುವ ನಾಗಾಸಾಧು, ಹಲವು ವರ್ಷಗಳಿಂದ ಕೈಯನ್ನು ಕೆಳಗಿಳಿಸದೇ ಮೇಲೆ ಎತ್ತಿಕೊಂಡೇ ತಪ್ಪಸ್ಸಿನಲ್ಲಿರುವ ನಾಗಾಸಾಧು, ಜವಹರಲಾಲ್ ನೆಹರು ವಿವಿಯ ಬಡ ವಿದ್ಯಾರ್ಥಿಗಳಿಗೆ ಆನ್ ಲೈನ್ ಮೂಲಕ ಪಾಠ ಮಾಡುವ ಪ್ರೊಫೆಸರ್ ನಾಗಾಸಾಧು ಹೀಗೆ ಒಬ್ಬೊಬ್ಬ ನಾಗಾಸಾಧುಗಳು ಒಂದೊಂದು ವೈಶಿಷ್ಟ್ಯ ಹಾಗೂ ಕಠಿಣ ತಪ:ಶಕ್ತಿಯನ್ನು ಹೊಂದಿದ್ದಾರೆ. ನಾಗಾಸಾಧುಗಳ ದರ್ಶನ ಹಾಗೂ ಆಶಿರ್ವಾದ ಪಡೆಯಲು ಜನರು ಮುಗಿ ಬಿದ್ದಿದ್ದಾರೆ.
ನಾಗಾಸಾಧುಗಳ ಆಧ್ಯಾತ್ಮಿಕ ಸಾಧನೆ, ಅವರ ಶಕ್ತಿ, ನಿಗೂಢ ಬದುಕೇ ಕುತೂಹಲಕಾರಿ. ಇಂತಹ ವೈಶಿಷ್ಟ್ಯಪೂರ್ಣ ನಾಗಾಸಾಧುಗಳಲ್ಲಿ ಭಾರಿ ಗಮನ ಸೆಳೆಯುತ್ತಿರುವ ನಾಗಾಸಾಧುಗಳಲ್ಲಿ ಐಐಟಿ ಬಾಂಬೆ ಹಳೇ ವಿದ್ಯಾರ್ಥಿ, ಏರೋ ಸ್ಪೇಸ್ ಇಂಜಿನಿಯರ್ ನಾಗಾಸಾಧು ಅಭಯ್ ಸಿಂಗ್ ಕೂಡ ಒಬ್ಬರು.
ಹರಿಯಾಣ ಮೂಲದ ಅಭಯ್ ಸಿಂಗ್, ಬಾಂಬೆ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ(ಐಐಟಿ)ಯಲ್ಲಿ ನಾಲ್ಕು ವರ್ಷ ಏರೋಸ್ಪೇಸ್ ಇಂಜಿನಿಯರಿಂಗ್ ಅಧ್ಯಯನ ಮಾಡಿದ್ದವರು. ಅಭಯ್ ಸಿಂಗ್ ಈಗ ಲೌಕಿಕ ಪ್ರಪಂಚದಿಂದ ದೂರಾಗಿ ಸನ್ಯಾಸಿಯಾಗಿ ನಾಗಾಸಾಧು ದೀಕ್ಷೆ ಪಡೆದು ಆಧಾತ್ಮ ಮಾರ್ಗದಲ್ಲಿ ಸಾಗಿದ್ದಾರೆ. ಮಸಾನಿ ಘೋರಖ್ ಎಂದೇ ಹೆಸರಾಗಿದ್ದಾರೆ.
ಇಂಜಿನಿಯರಿಂಗ್ ತೊರೆದು ಫೋಟೋಗ್ರಫಿ ಕೆಲಸ ಮಾಡುತ್ತ ಬಳಿಕ ಟ್ರಾವೆಲ್ ಫೋಟೋಗ್ರಫಿ ಮಾಡುತ್ತಾ ನಂತರ ಫೋಟೋಗ್ರಫಿಯನ್ನೇ ವೃತ್ತಿಯನ್ನಾಗಿ ಮಾಡಿಕೊಂಡು ಕೋಚಿಂಗ್ ಸೆಂಟರ್ ಆರಂಭಿಸಿ ವಿದ್ಯಾರ್ಥಿಗಳಿಗೆ ಭೌತಶಾಸ್ತ್ರದ ಪಾಠವನ್ನು ಮಾಡುತ್ತಿದ್ದವರು ಈಗ ಅದೆಲ್ಲವನ್ನು ತೊರೆದು ಲೌಕಿಕ ಜೀವನವನ್ನು ತ್ಯಾಗ ಮಾಡಿ ಕಠಿಣ ಆಧ್ಯಾತ್ಮ ಬದುಕು ನಾಗಾಸಾಧುವಾಗಿದ್ದಾರೆ.
ಲಕ್ಷ ಲಕ್ಷ ಸಂಬಳ ಬರುವ ಕೆಲಸ, ಲೌಕಿಕ ಪ್ರಪಂಚದ ಸೆಳೆತದಿಂದ ದೂರಾಗಿ ನಾಗಾಸಾಧುವಾಗಲು ಕಾರಣವೇನು ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿರುವ ಅವರು, ಹಣ, ಪ್ರಾಪಂಚಿಕ ಸುಖಕ್ಕಿಂತ ನೆಮ್ಮದಿ ಬಹಳ ಮುಖ್ಯ. ನನ್ನ ಆಸಕ್ತಿ ಆಧ್ಯಾತ್ಮಿಕ ಬದುಕು, ಮೋಕ್ಷ ಸಾಧನೆ. ಹಾಗಾಗಿ ನನ್ನ ಜೀವನವನ್ನು ಆಧ್ಯಾತ್ಮ ಮಾರ್ಗದತ್ತ ಮುಡುಪಾಗಿಟ್ಟಿದ್ದೇನೆ ಎಂದು ತಿಳಿಸಿದ್ದಾರೆ.
ಇಂತಹ ಹಲವಾರು ನಾಗಾಸಾಧುಗಳು, ಸಂತರ ಲೋಕವೇ ಮಹಾಕುಂಭಮೇಳದಲ್ಲಿ ಕಂಡುಬರುತ್ತಿದ್ದು, ನಿಜಕ್ಕೂ ಭಾರತದ ಆಧ್ಯಾತ್ಮಿಕ ಪರಂಪರೆಗೆ ಮಹಾಕುಂಭಮೇಳ ಸಾಕ್ಷಿಯಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ