Kannada NewsKarnataka NewsPolitics

*ಮಹದಾಯಿಗೆ ಅನುಮತಿ ನಿರಾಕರಣೆ: ಬಿಜೆಪಿಯ ದ್ವೇಷದ ರಾಜಕಾರಣ ಎಂದ ಸಿಎಂ*

ಪ್ರಗತಿವಾಹಿನಿ ಸುದ್ದಿ: ಮಹದಾಯಿ ಯೋಜನೆಗೆ ಅನುಮತಿ ನೀಡುವುದಿಲ್ಲ ಎಂಬ ಕೇಂದ್ರ ಸರ್ಕಾರದ ನಿರ್ಧಾರ ಕರ್ನಾಟಕದ ಜನತೆಗೆ ಬಗೆಯುವ ದ್ರೋಹವಾಗಿದ್ದು, ಇದನ್ನು ಕರ್ನಾಟಕ ಸರ್ಕಾರ ಅತ್ಯುಗ್ರವಾಗಿ ಖಂಡಿಸುವುದು ಮಾತ್ರವಲ್ಲ ಈ ಅನ್ಯಾಯದ ವಿರುದ್ದ ಸಮಸ್ತ ಕನ್ನಡಿಗರೊಂದಿಗೆ ಹೋರಾಟ ನಡೆಸಲಿದೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಮಹದಾಯಿ ಯೋಜನೆಗೆ ಅನುಮತಿ ನೀಡುವುದಿಲ್ಲ ಎಂದು ಕೇಂದ್ರ ಪರಿಸರ ಮತ್ತು ಅರಣ್ಯ ಖಾತೆ ಸಚಿವ ಭೂಪೇಂದ್ರ ಯಾದವ್‍ ಅವರೇ ನನಗೆ ತಿಳಿಸಿದ್ದಾರೆ ಎಂದು ಸಾವಂತ್ ಅವರು ಇಂದು ವಿಧಾನಸಭೆಯಲ್ಲಿ ಹೇಳಿದ್ದಾರೆ. ಕೇಂದ್ರ ಸರ್ಕಾರದ ಈ ನಿರ್ಧಾರ ಕರ್ನಾಟಕದ ಹಿತಾಸಕ್ತಿ ಮೇಲಿನ ಇನ್ನೊಂದು ಪ್ರಹಾರವಾಗಿದೆ. 2018ರಲ್ಲಿ ಮಹದಾಯಿ ಜಲವಿವಾದ ನ್ಯಾಯಮಂಡಳಿ 13.42 ಟಿಎಂಸಿ ನೀರನ್ನು ನಮ್ಮ ರಾಜ್ಯಕ್ಕೆ ನಿಗದಿಪಡಿಸಿ ಐತೀರ್ಪು ನೀಡಿದ್ದರೂ ಕೇಂದ್ರ ಸರ್ಕಾರದ ಮಲತಾಯಿ ಧೋರಣೆಯಿಂದಾಗಿ ಯೋಜನೆಯ ಅನುಷ್ಠಾನ ಸಾಧ್ಯವಾಗುತ್ತಿಲ್ಲ.

ಬೆಳಗಾವಿ, ಹುಬ್ಬಳ್ಳಿ, ಧಾರವಾಡ, ಗದಗ, ಬಾಗಲಕೋಟೆ ಪ್ರದೇಶದ ಜನತೆಯ ಕುಡಿಯುವ ನೀರಿಗಾಗಿ 40 ಟಿಎಂಸಿ ನೀರನ್ನು ಬಳಸಿಕೊಳ್ಳುವ ಕಳಸಾ-ಬಂಡೂರಿ ಯೋಜನೆ ಈಗಾಗಲೇ ಅನುಷ್ಠಾನಕ್ಕೆ ಸಿದ್ದಗೊಂಡಿದ್ದು, ಗೋವಾದ ಬಿಜೆಪಿ ಸರ್ಕಾರದ ಜೊತೆ ಷಾಮೀಲಾಗಿ ಕೇಂದ್ರ ಸರ್ಕಾರ ನಿರಂತರವಾಗಿ ಅಡ್ಡಗಾಲು ಹಾಕುತ್ತಿದೆ ಎಂದು ಕಿಡಿಕಾರಿದ್ದಾರೆ.

ರಾಜ್ಯದ ಬಿಜೆಪಿ ನಾಯಕರಾಗಲಿ, ಕನ್ನಡಿಗರಿಂದಲೇ ಆರಿಸಿ ಹೋಗಿರುವ ಬಿಜೆಪಿ ಮತ್ತು ಜೆಡಿಎಸ್ ಸಂಸದರಾಗಲಿ ಈ ಅನ್ಯಾಯದ ವಿರುದ್ದ ದನಿ ಎತ್ತಲಾಗದಷ್ಟು ನಿರ್ವಿರ್ಯರಾಗಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ತಿರಸ್ಕರಿಸಿದ ಕರ್ನಾಟಕದ ಜನತೆಯ ವಿರುದ್ಧ ಸೇಡು ತೀರಿಸಿಕೊಳ್ಳುವ ದುರುದ್ದೇಶದಿಂದಲೇ ಮಹದಾಯಿ ಯೋಜನೆಗೆ ಪರಿಸರ ಖಾತೆಯ ಅನುಮತಿಯನ್ನು ನಿರಾಕರಿಸಿರುವುದು ಸ್ಪಷ್ಟವಾಗಿದೆ.

Home add -Advt

ತೆರಿಗೆ ಹಂಚಿಕೆ, ಕೇಂದ್ರ ಪ್ರಾಯೋಜಿತ ಯೋಜನೆಗಳಲ್ಲಿ ಅನುದಾನ ಕಡಿತವೂ ಸೇರಿದಂತೆ ನೆಲ-ಜಲ-ಭಾಷೆಯ ವಿಚಾರದಲ್ಲಿ ಕೇಂದ್ರ ಸರ್ಕಾರ ಕರ್ನಾಟಕದ ವಿಚಾರದಲ್ಲಿ ನಿರಂತರವಾಗಿ ಅನ್ಯಾಯ ಎಸಗುತ್ತಿದೆ. ಕೇಂದ್ರ ಸರ್ಕಾರದ ಈ ಮಲತಾಯಿ ಧೋರಣೆ ವಿರುದ್ಧ ನಾಡಿನ ಸಮಸ್ತ ಕನ್ನಡಿಗರನ್ನು ಜೊತೆಯಲ್ಲಿ ಕಟ್ಟಿಕೊಂಡು ಹೋರಾಟ ನಡೆಸುತ್ತೇವೆ ಎಂದು ತಿಳಿಸಿದ್ದಾರೆ.

Related Articles

Back to top button