ಪ್ರಗತಿವಾಹಿನಿ ಸುದ್ದಿ, ಮುಂಬೈ: ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಸಚಿವರು ಬೆಳಗಾವಿಗೆ ಬಂದರೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಘೋಷಿಸುತ್ತಿದ್ದಂತೆ ಹಾಗೂ ಜಿಲ್ಲಾ ಆಡಳಿತ ಅವರ ಬೆಳಗಾವಿ ಪ್ರವೇಶ ಪ್ರತಿಬಂಧಿಸಿ ಆದೇಶ ಹೊರಡಿಸುತ್ತಿದ್ದಂತೆ ಮಹಾರಾಷ್ಟ್ರದ ಗಡಿ ಉಸ್ತುವಾರಿ ಸಚಿವರಾದ ಚಂದ್ರಕಾಂತ ಪಾಟೀಲ ಹಾಗೂ ಶಂಭುರಾಜ ಶಿಂಧೆ ಅವರ ಮಂಗಳವಾರದ ಬೆಳಗಾವಿ ಭೇಟಿ ರದ್ದಾಗಿದೆ.
ಸಚಿವದ್ವಯರು ಬೆಳಗಾವಿಗೆ ಭೇಟಿ ನೀಡುವುದನ್ನು ರದ್ದುಗೊಳಿಸಿರುವ ಕುರಿತು ಸ್ವತಃ ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಗಡಿ ವಿವಾದ ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆಯಲ್ಲಿರುವಾಗ ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಹಾರಾಷ್ಟ್ರದ ಗಡಿ ಭಾಗಗಳ ಮೇಲೆ ಹಕ್ಕು ಸಾಧಿಸುವ ಬಗ್ಗೆ ಮಾತನಾಡುತ್ತಿದ್ದಂತೆ ಮಹಾರಾಷ್ಟ್ರದಲ್ಲಿ ಆಕ್ರೋಶದ ಅಲೆ ಎದ್ದಿದೆ. ಇದು ಉಭಯ ರಾಜ್ಯಗಳಲ್ಲಿ ತ್ವೇಷಮಯ ವಾತಾವರಣ ಉಂಟು ಮಾಡಿದ ಹಿನ್ನೆಲೆಯಲ್ಲಿ ಸಚಿವರಿಬ್ಬರ ಪ್ರವಾಸ ರದ್ದುಗೊಳಿಸಲಾಗಿದೆ ಎಂದು ಫಡ್ನವೀಸ್ ಹೇಳಿದ್ದಾರೆ.
ಗಡಿ ವಿವಾದವನ್ನು ನ್ಯಾಯಾಲಯವೇ ಇತ್ಯರ್ಥಗೊಳಿಸಬೇಕಿದೆ. ಅದನ್ನು ಕರ್ನಾಟಕ ಅಥವಾ ಮಹಾರಾಷ್ಟ್ರ ನಿರ್ಣಯಿಸಲಾಗುವುದಿಲ್ಲ. ಕೋರ್ಟ್ ನಲ್ಲಿ ಜಯ ಗಳಿಸಲು ಮಹಾರಾಷ್ಟ್ರ ತನ್ನ ವಾದವನ್ನು ಪ್ರಬಲವಾಗಿ ಮಂಡಿಸುತ್ತಿದೆ. ಜತೆಗೆ ಗೆಲುವು ಲಭಿಸುವ ಸಂಪೂರ್ಣ ವಿಶ್ವಾಸವೂ ಇದೆ. ಡಾ.ಬಿ.ಆರ್. ಅಂಬೇಡ್ಕರ ಅವರ ಪರಿನಿರ್ವಾಣ ದಿನದಂದು ಅಶಾಂತಿ ಉಂಟಾಗಬಾರದು ಎಂಬ ಕಾರಣದಿಂದ ಸಚಿವರ ಭೇಟಿ ರದ್ದುಗೊಳಿಸಲಾಗಿದೆ. “ಕರ್ನಾಟಕಕ್ಕೆ ನಾವು ಹೋಗುವುದನ್ನು ಯಾರೂ ತಡೆಯಲಾಗುವುದಿಲ್ಲ,” ಮುಖ್ಯಮಂತ್ರಿ ಏಕನಾಥ ಶಿಂಧೆಯವರು ಆದೇಶ ನೀಡುತ್ತಲೇ ಸಚಿವರು ಬೆಳಗಾವಿಗೆ ತೆರಳಲಿದ್ದಾರೆ ಎಂದು ಫಡ್ನವೀಸ್ ಹೇಳಿದ್ದಾರೆ.
ಶಿಂಧೆ ಹಾಗೂ ಫಡ್ನವೀಸ್ ಸರಕಾರದ ಈ ನಡೆಯನ್ನು ಶಿವಸೇನಾ (ಠಾಕ್ರೆ ಬಣ) ಮುಖಂಡ ಸಂಜಯ ರಾವುತ್ ಅವರು ಕಟುವಾಗಿ ಟೀಕಿಸಿದ್ದಾರೆ.
ಬಾಲ ಮುದುಡಿಕೊಂಡ ಕಿಡಿ ವೀರರು
ಎಲ್ಲವೂ ಶಾಂತವಾಗಿರುವಾಗ ಅನಗತ್ಯವಾಗಿ ಗಡಿ ವಿವಾದವೆಬ್ಬಿಸಿ ಕಿಡಿ ಹೊತ್ತಿಸಲು ಯತ್ನಿಸಿದ್ದ ಮಹಾರಾಷ್ಟ್ರಕ್ಕೆ ತನ್ನದೇ ವರ್ತನೆ ಮುಳುವಾಯಿತು. ಮಹಾರಾಷ್ಟ್ರದ ಗಡಿ ಕನ್ನಡಿಗರು ಅಲ್ಲಿನ ಸರಕಾರದ ವಿರುದ್ಧ ಬಂಡೆದ್ದಿದ್ದಲ್ಲದೆ ಕರ್ನಾಟಕವೂ ತಕ್ಕ ಉತ್ತರದ ಮೂಲಕ ಕಿಡಿ ವೀರರಿಗೆ ತಕ್ಕ ಶಾಸ್ತಿ ಮಾಡಿತು. ಇದರಿಂದಾಗಿ ಮಹಾ ನಾಯಕರೆಲ್ಲ ತಣ್ಣಗಾಗಿದ್ದಾರೆ. ಮತ್ತೊಮ್ಮೆ ಗಡಿ ವಿವಾದ ಕೆದಕುವಾಗ ಮುಟ್ಟಿ ನೋಡಿಕೊಳ್ಳಬೇಕಾದ ಸ್ಥಿತಿ ಅವರಿಗಾಗಿದೆ.
ಕನ್ನಡಿಗರು ಸೌಜನ್ಯವಂತರಾದರೂ ತಮ್ಮ ಸುದ್ದಿಗೆ ಯಾರೇ ಬಂದರು ಸುಮ್ಮನಿರುವುದಿಲ್ಲ ಎನ್ನುವ ಸಂದೇಶ ರವಾನೆಯಾಗಿದೆ.
ಡಿ.19ಕ್ಕೆ ಪಂಚಮಸಾಲಿ ಮೀಸಲಾತಿ ಘೋಷಣೆ ಭರವಸೆ ನೀಡಿದ ಸಿಎಂ -ಬಸವಜಯ ಮೃತ್ಯುಂಜಯ ಶ್ರೀ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ