
ಪ್ರಗತಿವಾಹಿನಿ ಸುದ್ದಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಅವರು ಮಹಾರಾಷ್ಟ್ರ ವಿಧಾನಸಭಾ ಚುನಾವಣಾ ಅಖಾಡಕ್ಕೆ ಧುಮುಕಿದ್ದಾರೆ. ಕರ್ನಾಟಕ ಗಡಿಗೆ ಹೊಂದಿಕೊಂಡಂತೆ ಇರುವ ಚಂದಗಡ್ ವಿಧಾನಸಭಾ ಕ್ಷೇತ್ರದ ತುಡಯೆ ಗ್ರಾಮದಲ್ಲಿ ಮಹಾ ವಿಕಾಸ ಅಘಾಡಿ (ಎಂವಿಎ) ಅಭ್ಯರ್ಥಿ ನಂದಾತಾಯಿ ಕುಪೆಕರ್ ಪರ ಸಚಿವರು ಗುರುವಾರ ಸಂಜೆ ಪ್ರಚಾರ ನಡೆಸಿದರು.
ಈ ವೇಳೆ ಮಾತನಾಡಿದ ಸಚಿವರು, ಮಹಾರಾಷ್ಟ್ರ ಮತ್ತು ರಾಷ್ಟ್ರದ ಅಭಿವೃದ್ಧಿ ದೃಷ್ಟಿಯಿಂದ ಎಂವಿಎ ಒಕ್ಕೂಟವನ್ನು ಬೆಂಬಲಿಸಬೇಕು. ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಸಾಕಷ್ಟು ಬದಲಾವಣೆ ಆಗಿದೆ. ಪ್ರತಿ ತಿಂಗಳು ಮಹಿಳೆಯರಿಗೆ ಗೃಹಲಕ್ಷ್ಮೀ ಯೋಜನೆಯಡಿ 2 ಸಾವಿರ ನೀಡಲಾಗುತ್ತಿದೆ. ಕೊಟ್ಟ ಮಾತಿನಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಾರಥ್ಯದ ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ನಮ್ಮ ರಾಜ್ಯ ಸಾಕಷ್ಟು ಅಭಿವೃದ್ಧಿಯಾಗುತ್ತಿದೆ, ಅದೇ ಮಾದರಿಯಲ್ಲಿ ಮಹಾರಾಷ್ಟ್ರ ಕೂಡ ಅಭಿವೃದ್ಧಿ ಆಗಬೇಕಾದರೆ ಎಂವಿಎ ಅಧಿಕಾರಕ್ಕೆ ಬರಬೇಕು ಎಂದರು.

ಮಹಾರಾಷ್ಟ್ರದಲ್ಲಿ ಎಂವಿಎ ಅಧಿಕಾರಕ್ಕೆ ಬಂದರೆ ಕರ್ನಾಟಕ ಎಲ್ಲಾ ರೀತಿಯಲ್ಲೂ ಸಹಕಾರ ನೀಡಲಿದೆ. ಚಂದಗಡ್ ಕ್ಷೇತ್ರದಿಂದ ನಂದಾತಾಯಿ ಅವರು ಗೆದ್ದರೆ, ನಾನು ಬೆಳಗಾವಿ ಗ್ರಾಮೀಣ ಕ್ಷೇತ್ರವನ್ನು ಅಭಿವೃದ್ಧಿ ಮಾಡಿರುವ ಮಾದರಿಯಲ್ಲೆ ಅವರು ಕೂಡ ಈ ಕ್ಷೇತ್ರವನ್ನು ಅಭಿವೃದ್ಧಿ ಪಡಿಸಲಿದ್ದಾರೆ. ಚಂದಗಡ್ ಕ್ಷೇತ್ರದ ಸರ್ವತೋಮುಖದ ಅಭಿವೃದ್ಧಿಗಾಗಿ ನಂದಾತಾಯಿ ಕುಪೆಕರ್ ಅವರನ್ನು ಬೆಂಬಲಿಸಿ ಎಂದು ಮತದಾರರಲ್ಲಿ ಸಚಿವರು ಮನವಿ ಮಾಡಿದರು.
ಎನ್ ಸಿಪಿ ವರಿಷ್ಠ ಶರದ್ ಪವಾರ್ ಅವರ ಹೆಸರಿಗೆ ಮಹಾರಾಷ್ಟ್ರದಲ್ಲಿ ಬಹಳ ದೊಡ್ಡ ಶಕ್ತಿ ಇದ್ದು, ದೊಡ್ಡ ಪ್ರಮಾಣದಲ್ಲಿ ಅಭಿಮಾನಿಗಳನ್ನು ಹೊಂದಿದ್ದಾರೆ. ಕಾಂಗ್ರೆಸ್, ಶರದ್ ಪವಾರ್ ಸಾರಥ್ಯದ ಎನ್ ಸಿಪಿ (ಎಸ್ ಪಿ) ಹಾಗೂ ಉದ್ದವ್ ಠಾಕ್ರೆ ಸಾರಥ್ಯದ ಶಿವಸೇನಾ (ಯುಬಿಟಿ) ಒಳಗೊಂಡ ಮಹಾ ವಿಕಾಸ ಅಘಾಡಿ ಅಧಿಕಾರಕ್ಕೇರುವುದು ಖಚಿತ ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದರು.
ಈ ವೇಳೆ ಚಂದಗಡ್ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಧ್ಯಕ್ಷರಾದ ಸಂಭಾಜಿ ಶಿರೋಳಕರ್, ಯುವ ಕಾಂಗ್ರೆಸ್ ಮುಖಂಡ ಮೃಣಾಲ್ ಹೆಬ್ಬಾಳಕರ್, ಜ್ಯೋತಿಬಾ ಪಾಟೀಲ, ಶಿವಾಜಿ ಸಾವಂತ, ರಜತ್ ಹುಲ್ಜಿ, ಎಂ.ಜೆ.ಪಾಟೀಲ, ಬೈರು ಖಂಡೇಕರ್, ವಿಲಾಸ್ ಪಾಟೀಲ, ತಾನಾಜಿ ವಾಘಮೊರೆ, ಗಣೇಶ ಫಾಠಕ್, ಬಸವಂತ ಅಡಕುರಕರ್, ನಾರಾಯಣ, ವಿಷ್ಣು ಗಾವಡೆ, ಜ್ಯೋತಿಬಾ ಚಂದಿಲಕರ್, ಹನಮಂತ ಪಾಟೀಲ, ದೀಪಕ್ ಪಾಟೀಲ ಮುಂತಾದವರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ