Belagavi NewsBelgaum NewsKannada NewsKarnataka NewsLatestPoliticsUncategorized

*ದ್ವೇಷ, ನಮ್ಮ ನಮ್ಮ ನಡುವೆ ಅನುಮಾನದ ಗೋಡೆಗಳು ಬೇಡ; ಉಪಪಂಗಡಗಳ ಮೇಲಾಟ ಬಿಟ್ಟು ಸಮಾಜವನ್ನು ಸಂಘಟಿಸಬೇಕಾಗಿದೆ; ಡಾ.ಪ್ರಭಾಕರ ಕೋರೆ ಕರೆ*

ಮಹಾಸಭೆಯಿಂದ ನೂತನ ಶಾಸಕರಿಗೆಗೌರವ ಸತ್ಕಾರ ಸಮಾರಂಭ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಲಿಂಗಾಯತರು ವಾಸ್ತವದಲ್ಲಿ ಬಹುಸಂಖ್ಯಾತರಾಗಿದ್ದಾರೆ. ನಾವೆಲ್ಲ ಒಗ್ಗಟ್ಟಿನಿಂದ ಇದ್ದರೆ ಮಾತ್ರ ಅಧಿಕಾರ ನಮ್ಮ ಕೈಗೆ ದಕ್ಕುತ್ತದೆ, ಅದನ್ನು ಬಿಟ್ಟು ನಾವು ಉಪಪಂಗಡಗಳಲ್ಲಿ ಹಂಚಿಹೋದರೆ ಲಿಂಗಾಯತರು ಹುಡುಕಿದರೂ ಸಿಗುವುದಿಲ್ಲ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ರಾಷ್ಟ್ರೀಯ ಉಪಾಧ್ಯಕ್ಷರಾದ ಡಾ.ಪ್ರಭಾಕರಕೋರೆಯವು ಹೇಳಿದರು.

ಅವರು ಸುಭಾಷನಗರದಲ್ಲಿ ನೂತನವಾಗಿ ನಿರ್ಮಿಸುತ್ತಿರುವ ಉಚಿತ ವಿದ್ಯಾರ್ಥಿನಿ ನಿಲಯಆವರಣದಲ್ಲಿ ವಿಧಾನಸಭಾ ಚುನಾವಣೆಯಲ್ಲಿ ನೂತನವಾಗಿ ಆಯ್ಕೆಯಾದ ಜಿಲ್ಲೆಯ ಶಾಸಕರು ಹಾಗೂ ಸಚಿವರಿಗೆ ಸತ್ಕಾರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಸಮಾಜ ದೊಡ್ಡದಿದೆ ಆದರೆ ಸಮಾಜದಲ್ಲಿ ಸಂಘಟನೆ ಇಲ್ಲ. ನಾಯಕರಿಲ್ಲದ ಈ ಸಮಾಜಕ್ಕೆ ನಾವೆಲ್ಲರೂ ನಾಯಕರಾಗಲು ಹೊರಟಿದ್ದೇವೆ. ಅದೇ ದುರಂತ. ನಮ್ಮ ನಡುವೆ ಇರುವ ಭೇದಗಳನ್ನು ಬಿಟ್ಟು ಸಮಗ್ರ ಲಿಂಗಾಯತ ಸಮಾಜವನ್ನು ಕಟ್ಟುವ ನೆಲೆಯಲ್ಲಿ ಒಂದಾಗಿ ಶ್ರಮಿಸಬೇಕಾಗಿದೆ. ನಮ್ಮ ಎಲ್ಲ ಸಮಾಜದ ಶಾಸಕರಲ್ಲಿ ವಿನಂತಿಸುವುದೇನೆಂದರೆ ನಾವೆಲ್ಲ ಒಂದಾಗಿ, ಒಗ್ಗಟ್ಟಿನಿಂದ ಇರೋಣ. ದ್ವೇಷಿಸುವದು ಬೇಡ, ನಮ್ಮ ನಡುವೆ ಅನುಮಾನದ ಗೋಡೆಗಳು ಬೇಡ. ಇಂದಿನ ಸಮಾಜ ದ್ವಂದ್ವ ಮನೋಸ್ಥಿತಿಯಲ್ಲಿರುವುದು ಸೂರ್ಯನಷ್ಟೇ ಸತ್ಯ. ವೀರಶೈವ-ಲಿಂಗಾಯತ ಸರ್ವಾಂಗೀಣ ಶ್ರೇಯೋಭಿವೃದ್ಧಿಗಾಗಿ ಸ್ಥಾಪಿಸಿದ ಸಾಮಾಜಿಕ ಸಂಘಟನೆ- ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ. ಅಸಂಘಟಿತರಾಗಿದ್ದ, ಅಶಿಕ್ಷಿತರಾಗಿದ್ದ ವೀರಶೈವ ಲಿಂಗಾಯತರು ಮೊದಲು ಬಾರಿಗೆ ಸಂಘಟಿತರಾಗಲು ನಿರ್ಧಾರ ಮಾಡಿದಾಗ ಸಂಚಲನ ಮೂಡಿದ್ದು ಸುಳ್ಳಲ್ಲ. ಆಗ ಅರಟಾಳ ರಾ.ಬ.ರುದ್ರಗೌಡರು, ರಾ.ಬ.ಗಿಲಗಂಚಿ ಗುರುಸಿದ್ದಪ್ಪನವರು ಬ್ರಿಟಿಷ ಆಡಳಿತದಲ್ಲಿ ಡೆಪ್ಯುಟಿ ಕಲೆಕ್ಟರ ಹುದ್ದೆಗಳನ್ನು ಅಲಂಕರಿಸಿದ್ದರು. ನಮ್ಮ ಸಮಾಜದ ಕೆಲವೇ ಕೆಲವು ಉನ್ನತ ಹುದ್ದೆಗಳಲ್ಲಿ ಇದ್ದರು.

೧೯೦೪ರಲ್ಲಿ ಅಖಿಲ ಭಾರತ ವೀರಶೈವ ಮಹಾಸಭೆ ಹಾನಗಲ್ಲ ಕುಮಾರಸ್ವಾಮಿಗಳ ನೇತೃತ್ವದಲ್ಲಿ ಸ್ಥಾಪನೆಯಾಗಿ ಧಾರವಾಡದಲ್ಲಿ ಮೊದಲನೇ ಅಧಿವೇಶನಜರುಗಿತು. ಈ ಅಧಿವೇಶನದ ಅಧ್ಯಕ್ಷತೆಯನ್ನು ಲಿಂಗರಾಜರು ವಹಿಸಿದ್ದರು. ೧೯೦೪ ರಿಂದ ಇಲ್ಲಿಯವರಿಗೆ ೨೨ ಅಧಿವೇಶನಗಳು ಜರುಗಿವೆ. ಬೆಳಗಾವಿಯಲ್ಲಿ ೨೧ನೇ ಮಹಾಧಿವೇಶನ ಜರುಗಿ ಇತಿಹಾಸ ನಿರ್ಮಿಸಿತು. ಇಡೀ ರಾಜ್ಯದಲ್ಲಿ ವೀರಶೈವ ಲಿಂಗಾಯತರ ಜನಸಂಖ್ಯೆ ದೊಡ್ಡದು, ಆದರೆ ಉಪಪಂಗಡಗಳ ಮೇಲಾಟದಲ್ಲಿ ತೊಡಗಿರುವುದು ದುರಂತವೆಂದು ಹೇಳಿದರು.

ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿಯವರು ಮಾತನಾಡಿ ಎಲ್ಲಿವರೆಗೆ ಸಮಾಜವು ಸಾಂಘಿಕವಾಗಿ ಇರುವುದೋ ಸಮಾಜದ ಅಭಿವೃದ್ಧಿ ಸಾಧ್ಯ. ಎಲ್ಲರ ಪ್ರಬಲವಾದ ಇಚ್ಛಾಶಕ್ತಿಯಿಂದ ನಮ್ಮ ನಮ್ಮ ಸಮಾಜವನ್ನು ಬಲಪಡಿಸಬೇಕಾಗಿದೆ ಎಂದರು.

ಅಥಣಿಯ ಶಾಸಕರಾದ ಲಕ್ಷ್ಮಣ ಸವದಿಯವರು ಸತ್ಕಾರವನ್ನು ಸ್ವೀಕರಿಸಿ ಪಕ್ಷಬೇಧಗಳನ್ನು ತೊರೆದು ನಮ್ಮ ಸಮಾಜವನ್ನು ಸಂಘಟಿಸಬೇಕಾಗಿದೆ. ಇಂದು ಅನೇಕ ಉಪಪಂಗಡಗಳ ಮಧ್ಯೆ ಸಮಾಜವು ವಿಘಟನೆಗೊಳ್ಳುತ್ತಿರುವುದು ಖೇದಕರ. ಸಮಾಜದಲ್ಲಿ ಇನ್ನೂ ಹೆಚ್ಚಿನ ಅಭಿವೃದ್ಧಿಯಾಗಬೇಕಾಗಿದೆ ಎಂದರು.

ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆಯವರು ಮಾತನಾಡಿ, ಮಹಾಸಭೆ ಅನೇಕ ಜನಪರವಾದ ಕೆಲಸ ಕಾರ್ಯಗಳನ್ನು ಮಾಡುತ್ತಿದೆ. ಸಮಾಜದ ಬಡ ವಿದ್ಯಾರ್ಥಿನಿಯರಿಗಾಗಿ ಉಚಿತ ಪ್ರಸಾದ ನಿಲಯವನ್ನು ಸ್ಥಾಪಿಸುತ್ತಿರುವುದು ಅಭಿಮಾನದ ಸಂಗತಿ. ಅದಕ್ಕೆ ಬೇಕಾದ ಅಗತ್ಯ ನೆರವುಗಳನ್ನು ನೀಡುವುದಾಗಿ ತಿಳಿಸಿದರು. ಇದೇ ಸಂದರ್ಭದಲ್ಲಿ ಹಿರಿಯ ನ್ಯಾಯವಾದಿ ಮಾರುತಿ ಝಿರಲಿಯವರು ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡುತ್ತ, ಮಹಾಸಭೆ ಜಿಲ್ಲೆಯಲ್ಲಿ ಹಲವಾರು ಮಹತ್ತರ ಕಾರ್ಯಗಳನ್ನು ರೂಪಿಸುತ್ತಿದೆ. ಅದು ಸಮಾಜದ ಹೆಣ್ಣುಮಕ್ಕಳಿಗಾಗಿ ವಸತಿ ನಿಲಯವಾಗಿರಬಹುದು, ಮಂಗಳ ಕಾರ್ಯಾಲಯವಾಗಿರಬಹುದು, ಬಸವಣ್ಣನವರ ಪ್ರತಿಮೆ ಹೀಗೆ ಹತ್ತು ನೆಲೆಗಳಲ್ಲಿ ಸಮಾಜ ಸಂಘಟನೆಗೆ ದುಡಿಯುತ್ತಿದೆ. ನಮ್ಮೊಳಗಿನ ಉಪಪಂಡಗಳ ಮೇಲಾಟವನ್ನು ತೊಡೆದು ಬಸವ ಮಾರ್ಗದಲ್ಲಿ, ಬಸವ ಭಕ್ತರಾಗಿ ಮುನ್ನಡೆಯುವ ಮನೋಭಾವವನ್ನು ಹೊಂದಬೇಕಾಗಿದೆ.

ಡಾ.ಪ್ರಭಾಕರ ಕೋರೆಯವರು ಮಹಾಸಭೆಯನ್ನು ವಿಸ್ತರಿಸುವಲ್ಲಿ ಹಲವಾರು ರಚನಾತ್ಮಕ ಕಾರ್ಯಗಳನ್ನು ನಿರ್ವಹಿಸುತ್ತಾ ಬಂದಿದ್ದಾರೆ ಎಂದು ಪ್ರಸ್ತಾಪಿಸಿದರು.

ದಿವ್ಯ ಸಾನ್ನಿಧ್ಯವನ್ನು ಕಾರಂಜಿ ಮಠದ ಪೂಜ್ಯ ಗುರುಸಿದ್ಧ ಮಹಾಸ್ವಾಮೀಜಿಯವರು ಹಾಗೂ ನಿಡಸೋಸಿಯ ದುರದುಂಡೇಶ್ವರ ಮಠದ ನೂತನ ಉತ್ತರಾಧಿಕಾರಿಗಳಾದ ಪೂಜ್ಯ ನಿಜಲಿಂಗೇಶ್ವರ ಮಹಾಸ್ವಾಮಿಗಳು ವಹಿಸಿದ್ದರು.

ವೇದಿಕೆಯ ಮೇಲೆ ಸಂಸದರಾದ ಮಂಗಲ ಸುರೇಶಅಂಗಡಿ, ಬೈಲಹೊಂಗಲ ಶಾಸಕರಾದ ಮಹಾಂತೇಶಕೌಜಲಗಿ, ಹುಕ್ಕೇರಿ ಶಾಸಕರಾದ ನಿಖಿಲ ಉಮೇಶ ಕತ್ತಿ, ಕಿತ್ತೂರ ಶಾಸಕರಾದ ಬಾಬಾಸಾಹೇಬ ಪಾಟೀಲ, ವಿಧಾನ ಪರಿಷತ್ ಸದಸ್ಯರಾದ ಹನುಮಂತ ನಿರಾಣಿ, ನಿವೃತ್ತ ಪ್ರಾದೇಶಿಕ ಆಯುಕ್ತರಾದ ಎಂ.ಜಿ.ಹಿರೇಮಠಅವರನ್ನು ಸತ್ಕರಿಸಲಾಯಿತು.

ಮಹಾಸಭೆ ಜಿಲ್ಲಾಘಟಕದ ಅಧ್ಯಕ್ಷೆ ಶ್ರೀಮತಿ ರತ್ನಪ್ರಭಾ ಬೆಲ್ಲದ ಅಧ್ಯಕ್ಷತೆ ವಹಿಸಿದ್ದರು. ಆಶಾ ಯಮಕನಮರಡಿ, ಡಾ.ಮಹೇಶ ಗುರನಗೌಡರಕಾರ್ಯಕ್ರಮ ನಿರೂಪಿಸಿದರು. ಎ.ಬಿ.ಕೊರಬು ವಂದಿಸಿದರು. ಗುರುಬಸಪ್ಪಣ್ಣಾ ಚೊಣ್ಣದ, ಜಾವೂರ, ಮತ್ತಿಕಟ್ಟಿ, ಚಂದ್ರಶೇಖರ ಬೆಂಬಳಗಿ, ಡಾ.ಗುರುದೇವಿ ಹುಲೆಪ್ಪನವರಮಠ, ಆರ್.ಪಿ.ಪಾಟೀಲ, ಸೋಮಲಿಂಗ ಮಾವಿನಕಟ್ಟಿ, ಸುಧಾ ಪಾಟೀಲ, ಜ್ಯೋತಿ ಬದಾಮಿ, ಗುರುದೇವ ಪಾಟೀಲ ಮಹಾಸಭೆ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button