ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಬೆಳಗಾವಿ ಬೆಂಕಿಯ ಚಕ್ರವ್ಯೂಹದಲ್ಲಿ ಬಂದವನು ನಾನು. ಹೀಗಾಗಿ ಯಡಿಯೂರಪ್ಪ ಅನ್ಯಾಯ ಮಾಡಲ್ಲ. ನನಗೆ ಸಚಿವ ಸ್ಥಾನ ನೀಡುತ್ತಾರೆ ಎಂಬ ವಿಶ್ವಾಸ ನನಗಿದೆ ಎಂದು ಶಾಸಕ ಮಹೇಶ್ ಕುಮಟಳ್ಳಿ ಹೇಳಿದ್ದಾರೆ.
ಶಾಸಕರ ಭವನದಲ್ಲಿ ಮಾತನಾಡಿದ ಶಾಸಕ ಮಹೇಶ್ ಕುಮಟಳ್ಳಿ, ಅಥಣಿಯಲ್ಲಿ ನನಗೆ ಮಂತ್ರಿ ಕೊಟ್ಟರೆ 3 ಜನರಿಗೆ ಕೊಟ್ಟ ಹಾಗೇ ಆಗುತ್ತೆ. ಲಿಂಗಾಯತ ಕೋಟಾಗೆ ಹೆಚ್ಚು ಸ್ಥಾನ ಆಗುತ್ತೆ ಅನ್ನೋದಕ್ಕೆ ಕೊಡಲ್ಲ ಅಂತಿದ್ದಾರೆ. ಆದರೆ ಈ ಕಾರಣಕ್ಕೆ ಮಂತ್ರಿ ಸ್ಥಾನ ತಪ್ಪಿದ್ರೆ ನನಗೆ ಅನ್ಯಾಯ ಮಾಡಿದಂತಾಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಲಕ್ಷ್ಮಣ ಸವದಿಯವರು ಮೂಲ ಬಿಜೆಪಿಯವರಾಗಿದ್ದಾರೆ. ಪಕ್ಷ ಸಂಘಟನೆಗೆ ಅವರಿಗೆ ಸ್ಥಾನ ಕೊಟ್ಟಿದ್ದಾರೆ. ಯಡಿಯೂರಪ್ಪ ಸಿಎಂ ಆಗಲು ರಮೇಶ್ ಜಾರಕಿಹೊಳಿ ಮೊದಲ ಸ್ಥಾನದಲ್ಲಿ ಇದ್ದರೆ, ನಾನು ಎರಡನೇ ಸ್ಥಾನದಲ್ಲಿ ಇದ್ದೆ. ನಾವು ಯಾವ ಕೋಟಾದಲ್ಲೂ ಅವತ್ತು ಬಂದಿರಲಿಲ್ಲ. ರಾಜಕೀಯ ವಿದ್ಯಮಾನಗಳಿಂದ, ರಾಜಕೀಯ ಸನ್ನಿವೇಶದಲ್ಲಿ ಬಂದಿದ್ದೇವೆ. ಸವದಿ ಕೊಟ್ಟಿದ್ದು ಸರಿ ಇದೆ. ಆದರೆ ಸರ್ಕಾರ ಬರಲು 17 ಜನ ನಾವು ಕಾರಣ. ಇದನ್ನ ಅರಿತು ಮಂತ್ರಿ ಸ್ಥಾನ ಕೊಡಬೇಕು ಎಂದು ತಿಳಿಸಿದರು.
ರಮೇಶ್ ಜಾರಕಿಹೊಳಿ ಜೊತೆ ಮಾತಾಡಿದ್ದೇವೆ. ರಮೇಶ್ ಜಾರಕಿಹೊಳಿ ಕೂಡ ನಮಗೆ ಮಂತ್ರಿ ಸ್ಥಾನ ಕೊಡದೇ ಹೋದ್ರೆ ಅನ್ಯಾಯ ಆಗುತ್ತೆ ಅಂತ ಹೇಳಿದ್ದಾರೆ. ನಮ್ಮ ವಿಚಾರ ಬಿಜೆಪಿ ವರಿಷ್ಠರ ಗಮನಕ್ಕೆ ತಂದಿದ್ದೇವೆ. ಸಣ್ಣ ವಿಚಾರಕ್ಕೆ ನಮ್ಮನ್ನ ಕೈ ಬಿಟ್ಟರೆ ಅನ್ಯಾಯ ಆಗುತ್ತೆ. ಯಡಿಯೂರಪ್ಪ ಮಾತು ತಪ್ಪಿದ್ರೆ ಅವರಿಗೆ ಅದು ಕಪ್ಪು ಚುಕ್ಕೆ ಆದಂತೆ ಆಗುತ್ತೆ. ರಾಜಕೀಯವಾಗಿಯೂ ಬೇರೆ ಸಂದೇಶ ರವಾನೆಯಾಗುತ್ತೆ ಯಡಿಯೂರಪ್ಪ ವಚನ ಭ್ರಷ್ಟ ಪಟ್ಟ ಕಟ್ಟಿಕೊಳ್ಳಲ್ಲ ಅನ್ನೋ ನಂಬಿಕೆ ಇದೆ ಅಂತ ತಿಳಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ