Kannada NewsKarnataka News

ಮಹೇಶ ಕುಮಟಳ್ಳಿ ಸೋಲನ್ನು ನನ್ನ ತಲೆಗೆ ಕಟ್ಟಲು ಕುತಂತ್ರ ನಡೆದಿದೆ ; ಲಕ್ಷ್ಮಣ ಸವದಿ ಬಿಚ್ಚಿಟ್ಟ ಹೊಸ ಸೂತ್ರ ಯಾವುದು ಗೊತ್ತೇ?

ಪ್ರಗತಿವಾಹಿನಿ ಸುದ್ದಿ, ಅಥಣಿ: ಮಹೇಶ ಕುಮಟಳ್ಳಿ ಒಮ್ಮೆ ಸೋತಲ್ಲಿ ಅದರ ಹೊಣೆಯನ್ನು ನನ್ನ ತಲೆಗೆ ಕಟ್ಟಲು ಕುತಂತ್ರ ನಡೆದಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಆರೋಪಿಸಿದ್ದಾರೆ.

ಜೊತೆಗೆ, ನನ್ನ ವಿಧಾನ ಪರಿಷತ್ ಸದಸ್ಯತ್ವವನ್ನು ಮಹೇಶ ಕುಮಟಳ್ಳಿಗೆ ಕೊಡಲಿ, ನನ್ನನ್ನು ಈ ಬಾರಿ ಅಥಣಿ ಅಭ್ಯರ್ಥಿಯನ್ನಾಗಿ ಮಾಡಲಿ ಎಂದು ಆಗ್ರಹಿಸಿದ್ದಾರೆ.

ಅಥಣಿಯಲ್ಲಿ ಗುರುವಾರ ಪಂಚಮಸಾಲಿ ಸಮಾಜದ ಸಭೆಯಲ್ಲಿ ಮಾತನಾಡಿದ ಅವರು, ಮಹೇಶ ಕುಮಟಳ್ಳಿಯ ಮೇಲೆ ನನಗೆ ಯಾವುದೇ ದ್ವೇಷವಿಲ್ಲ. ಆದರೆ ಈ ಬಾರಿ ಅಥಣಿಯಲ್ಲಿ ವಾತಾವರಣ ಬೇರೆ ಇದೆ. ಮಹೇಶ ಅವರಿಗೆ ಟಿಕೆಟ್ ಕೊಟ್ಟರೆ ಗೆಲ್ಲುವುದು ಸ್ವಲ್ಪ ಕಷ್ಟ ಇದೆ ಎಂದು ಸವದಿ ಹೇಳಿದರು.

ಮುಂದುವರಿದು ಮಾತನಾಡಿದ ಅವರು, ಒಂದೊಮ್ಮೆ ಮಹೇಶ ಕುಮಟಳ್ಳಿ ಸ್ಪರ್ಧಿಸಿದರೆ ಗೆಲ್ಲಿಸಲು ಎಲ್ಲರೂ ಸೇರಿ ಶ್ರಮಿಸೋಣ. ಆದಾಗ್ಯೂ ಒಮ್ಮೆ ಅವರು ಸೋತಲ್ಲಿ ಸೋಲಿನ ಹಣೆ ಪಟ್ಟಿಯನ್ನು ಪೂರ್ತಿ ನನ್ನ ತಲೆಗೆ ಕಟ್ಟುವ ಕೆಲವೊಂದು ಶಕ್ತಿಗಳು ಜಿಲ್ಲೆಯಲ್ಲಿವೆ. ಸೋಲಿಗೆ ಲಕ್ಷ್ಮಣ ಸವದಿಯೇ ನೇರ ಕಾರಣ ಎಂದು ಪ್ರಚಾರ ಮಾಡುತ್ತಾರೆ. ಆವಾಗ ಪಕ್ಷದವರು ನನ್ನ ಮೇಲೆ ಶಿಸ್ತಿನ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಸವದಿ ಆತಂಕ ವ್ಯಕ್ತಪಡಿಸಿದರು.

ಇದೆಲ್ಲಕ್ಕೂ ಇರುವ ಒಂದು ಮಾರ್ಗ ಏನೆಂದರೆ, ನನ್ನ ವಿಧಾನ ಪರಿಷತ್ ಅವಧಿ ಇನ್ನು 5 ವರ್ಷವಿದೆ. ಇದನ್ನು ಮಹೇಶ ಕುಮಟಳ್ಳಿಗೆ ಕೊಡಲಿ, ನನಗೆ ಈ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶ ನೀಡಲಿ. ನನ್ನನ್ನು ಜನರು ಹೆಚ್ಚಿನ ಮತದಿಂದ ಆರಿಸಿ ತರುತ್ತಾರೆ ಎನ್ನುವ ವಿಶ್ವಾಸವಿದೆ ಎಂದು ಲಕ್ಷ್ಮಣ ಸವದಿ ಹೇಳಿದರು.

ಈಗಾಗಲೆ ನನಗೆ ಸ್ಪರ್ಧಿಸಲು ಅವಕಾಶ ನೀಡಬೇಕೆಂದು ಪಕ್ಷದ ಹೈಕಮಾಂಡ್ ಗೆ ಮನವಿ ಮಾಡಿದ್ದೇನೆ. ಆದರೆ ಇದು ಇಲ್ಲಿ ಬಗೆಹರಿಯುವುದಿಲ್ಲ. ಈ ಬಗ್ಗೆ ದೆಹಲಿ ಮಟ್ಟದಲ್ಲಿ ನಿರ್ಣಯವಾಗಬೇಕು ಎಂದಿದ್ದಾರೆ. ಕಾದು ನೋಡೋಣ ಎಂದೂ ಅವರು ಹೇಳಿದರು.

https://pragati.taskdun.com/unsettled-assembly-not-created-murugesha-nirani/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button