Belagavi NewsBelgaum NewsElection NewsKannada NewsKarnataka NewsLatestPolitics

ಸಂಜಯ ಪಾಟೀಲ ಮನೆ ಎದುರು ಮಹಿಳಾ ಕಾಂಗ್ರೆಸ್ ಪ್ರತಿಭಟನೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬಿಜೆಪಿ ಸಮಾವೇಶದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಕುರಿತು ಅವಹೇಳನಕಾರಿಯಾಗಿ ಮಾತನಾಡಿರುವ ಮಾಜಿ ಶಾಸಕ ಸಂಜಯ ಪಾಟೀಲ ಕೂಡಲೇ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿ ಮಹಿಳಾ ಕಾಂಗ್ರೆಸ್ ಕಾರ್ಯಕರ್ತೆಯರು ಸಂಜಯ ಪಾಟೀಲ ಅವರ ಮನೆ ಎದುರು ಪ್ರತಿಭಟನೆ ನಡೆಸುತ್ತಿದ್ದಾರೆ.

ಆದರ್ಶ ನಗರದಲ್ಲಿರುವ ಸಂಜಯ ಪಾಟೀಲ ಮನೆ ಎದುರು ಜಮಾಯಿಸಿರುವ ನೂರಾರು ಮಹಿಳಾ ಕಾರ್ಯಕರ್ತೆಯರು ಸಂಜಯ ಪಾಟೀಲ ಮತ್ತು ಬಿಜೆಪಿ ವಿರುದ್ಧ ಘೋಷಣೆ ಕೂಗುತ್ತಿದ್ದಾರೆ. ಸಂಜಯ ಪಾಟೀಲ ಹೊರಗೆ ಬಂದು ಕ್ಷಮೆ ಕೇಳುವವರೆಗೂ ಇಲ್ಲಿಂದ ಕದಲುವುದಿಲ್ಲ ಎಂದು ಕುಳಿತಿದ್ದಾರೆ.

ಸಂಜಯ ಪಾಟೀಲ ಅವರ ಭಾವಚಿತ್ರಕ್ಕೆ ಚಪ್ಪಲಿ ಹಾರ ಹಾಕಿ, ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.

ಸಂಜಯ ಪಾಟೀಲ ಹೆಣ್ಣು ಮಕ್ಕಳ ಕುರಿತು ಮಾತನಾಡುತ್ತಿರುವುದು ಇದೇ ಮೊದಲಲ್ಲ, ಈ ಹಿಂದೆ ಹಲವು ಬಾರಿ ಇದೇ ರೀತಿ ಮಾತನಾಡಿದ್ದಾರೆ. ಸಾಕಷ್ಟು ಬಾರಿ ಎಚ್ಚರಿಕೆ ನೀಡಿದ್ದರೂ ಮತ್ತೆ ಮತ್ತೆ ಅವಹೇಳನಕಾರಿಯಾಗಿ ಮಾತನಾಡುತ್ತಿದ್ದಾರೆ. ರಾಜಕೀಯವಾಗಿ ಏನು ಬೇಕಾದರೂ ಮಾತನಾಡಲಿ, ಆದರೆ ವಯಕ್ತಿಕ ಅವಹೇಳನ ಮಾಡುವ ರೀತಿ ಮಾತನಾಡಿದರೆ ಸಹಿಸುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ನ್ಯಾಯ ಸಿಕ್ಕಿದರೆ ಶಾಂತಿ, ಇಲ್ಲವಾದಲ್ಲಿ ಕ್ರಾಂತಿ, ಸಂಜಯ ಪಾಟಿಲಗೆ ಧಿಕ್ಕಾರ ಎಂದು ಘೋಷಣೆ ಕೂಗುತ್ತಿದ್ದಾರೆ.

ಈ ಮಧ್ಯೆ ಸಂಜಯ ಪಾಟೀಲ ಕಾರಿನ ಚಾಲಕ ವಿಡಿಯೋ ಶೂಟ್ ಮಾಡಲು ಮುಂದಾದಾಗ ಆಕ್ರೋಶಗೊಂಡ ಮಹಿಳೆಯರು ಆತನ ಬಳಿ ನುಗ್ಗಿ ಹೋದರು. ತಕ್ಷಣ ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.

ಪ್ರತಿಭಟನೆ ರಾತ್ರಿ ಬಹುಹೊತ್ತಿನವರೆಗೂ ಮುಂದುವರಿದಿತ್ತು. ಸಂಜಯ ಪಾಟೀಲ ಕ್ಷಮೆ ಕೇಳದಿದ್ದರೆ ಇಲ್ಲಿಂದ ಕದಲುವುದಿಲ್ಲ ಎಂದು ಮಹಿಳೆಯರು ಪಟ್ಟು ಹಿಡಿದಿದ್ದಾರೆ.

Related Articles

Back to top button