Belagavi NewsBelgaum NewsKannada NewsKarnataka News

*ಬೆಳಗಾವಿಯಲ್ಲಿ ಭೀಕರ ಅಗ್ನಿ ಅವಘಡ*: *ಲಕ್ಷಾಂತರ ರೂ. ನಷ್ಟ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಸಂಭವಿಸಿದ ಅಗ್ನಿ ಅವಘಡದಲ್ಲಿ ಮನೆಯೊಂದು ಸಂಪೂರ್ಣ ಸುಟ್ಟುಹೋಗಿದ್ದು, ಬಡ ಕುಟುಂಬವೊಂದು ಲಕ್ಷಾಂತರ ರೂಪಾಯಿ ಮೌಲ್ಯದ ಆಸ್ತಿ-ಪಾಸ್ತಿಯನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ.

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ನಾಗರಮುನ್ನೋಳಿ ಗ್ರಾಮದ ಅಂಬೇಡ್ಕರ್ ನಗರದಲ್ಲಿ ಮಾರುತಿ ಕೋಟೆ ಹಾಗೂ ಶ್ರವಣ ಕೋಟೆ ಅವರಿಗೆ ಸೇರಿದ ಮನೆಯಲ್ಲಿ ಈ ದುರಂತ ಸಂಭವಿಸಿದೆ. ಮನೆಯಲ್ಲಿ ಏಕಾಏಕಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಬೆಂಕಿ ಹೊತ್ತಿಕೊಂಡಿದ್ದು, ನೋಡನೋಡುತ್ತಿದ್ದಂತೆಯೇ ಮನೆಯಾದ್ಯಂತ ವ್ಯಾಪಿಸಿದೆ.

ಬೆಂಕಿಯ ತೀವ್ರತೆಗೆ ಮನೆಯಲ್ಲಿದ್ದ ಮೂರು ಟ್ರೆಜರಿಗಳು, ಫ್ರಿಡ್ಜ್, ಸೋಫಾ ಸೆಟ್ ಸೇರಿದಂತೆ ಹಲವು ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು ಸುಟ್ಟು ಭಸ್ಮವಾಗಿವೆ. ಮನೆಯ ಮೇಲ್ಛಾವಣಿಗೂ ಬೆಂಕಿ ವ್ಯಾಪಿಸಿ ಅಪಾರ ಹಾನಿ ಸಂಭವಿಸಿದೆ. ಮನೆಯಲ್ಲಿದ್ದ ನಗದು ಹಣವೂ ಬೆಂಕಿಗೆ ಆಹುತಿಯಾಗಿದೆ ಎಂದು ತಿಳಿದುಬಂದಿದೆ.

ಈ ಅಗ್ನಿ ದುರಂತದಿಂದ ಸುಮಾರು 10ರಿಂದ 15 ಲಕ್ಷ ರೂಪಾಯಿ ಮೌಲ್ಯದ ಆಸ್ತಿ ಹಾನಿಯಾಗಿರಬಹುದು ಎಂದು ಪ್ರಾಥಮಿಕವಾಗಿ ಅಂದಾಜಿಸಲಾಗಿದೆ. ಕಷ್ಟಪಟ್ಟು ದುಡಿದು ನಿರ್ಮಿಸಿಕೊಂಡಿದ್ದ ಮನೆ ಹಾಗೂ ಸಂಗ್ರಹಿಸಿಟ್ಟಿದ್ದ ವಸ್ತುಗಳು ಕಣ್ಣೆದುರೇ ಸುಟ್ಟುಹೋಗಿದ್ದರಿಂದ ಕುಟುಂಬಸ್ಥರು ಕಂಗಾಲಾಗಿದ್ದಾರೆ.

ಈಗಾಗಲೇ ಆರ್ಥಿಕ ಸಂಕಷ್ಟದಲ್ಲಿದ್ದ ಕುಟುಂಬಕ್ಕೆ ಬೆಂಕಿ ಅವಘಡ ದೊಡ್ಡ ಆಘಾತ ನೀಡಿದೆ. ಮನೆ ಹಾಗೂ ಮನೆಯಲ್ಲಿದ್ದ ವಸ್ತುಗಳನ್ನು ಕಳೆದುಕೊಂಡ ಕುಟುಂಬಕ್ಕೆ ನೆರವಿನ ಅಗತ್ಯವಿದೆ. ಹೀಗಾಗಿ, ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಹಾನಿಯ ಸಮಗ್ರ ಪರಿಶೀಲನೆ ನಡೆಸಬೇಕು. ಸರ್ಕಾರದಿಂದ ಸೂಕ್ತ ಪರಿಹಾರ ಒದಗಿಸಿ ಕುಟುಂಬಕ್ಕೆ ನೆರವಾಗಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button