*ಯುಪಿಯಲ್ಲಿ ಕೈ-ಸೈಕಲ್ ಸೀಟು ಹಂಚಿಕೆ ಕಸರತ್ತು*: *200 ಸ್ಥಾನಗಳಿಗೆ ಕಾಂಗ್ರೆಸ್ ಬೇಡಿಕೆ, 60-70 ಕ್ಷೇತ್ರ ನೀಡಲು ಎಸ್ಪಿ ಚಿಂತನೆ!*

ಪ್ರಗತಿವಾಹಿನಿ ಸುದ್ದಿ: 2027ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷದ ನಡುವೆ ಸೀಟು ಹಂಚಿಕೆ ಮಾತುಕತೆ ಆರಂಭವಾಗಿದೆ. ಮೈತ್ರಿಕೂಟದ ಮೂಲಕ ಚುನಾವಣೆಯಲ್ಲಿ ಪ್ರಭಾವ ಬೀರುವ ವಿಶ್ವಾಸದಲ್ಲಿರುವ ಕಾಂಗ್ರೆಸ್, 175ರಿಂದ 200 ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಬೇಡಿಕೆ ಇಟ್ಟು ಕ್ಷೇತ್ರಗಳ ಪಟ್ಟಿಯನ್ನು ಸಮಾಜವಾದಿ ಪಕ್ಷಕ್ಕೆ ಸಲ್ಲಿಸಿದೆ.
ಕ್ಷೇತ್ರಗಳ ಪಟ್ಟಿಯನ್ನು ಕೆಲ ದಿನಗಳ ಹಿಂದೆಯೇ ಸಮಾಜವಾದಿ ಪಕ್ಷದ ನಾಯಕರೊಂದಿಗೆ ಹಂಚಿಕೊಳ್ಳಲಾಗಿದೆ ಎಂದು ಉತ್ತರ ಪ್ರದೇಶ ಕಾಂಗ್ರೆಸ್ ಉಸ್ತುವಾರಿ ರಾಜೇಂದ್ರ ಪಾಲ್ ಗೌತಮ್ ತಿಳಿಸಿದ್ದಾರೆ. ನಿಖರವಾದ ಸ್ಥಾನಗಳ ಸಂಖ್ಯೆಯನ್ನು ಈಗಲೇ ಹೇಳಲು ಸಾಧ್ಯವಿಲ್ಲ. 175ರಿಂದ 200 ಕ್ಷೇತ್ರಗಳ ಪಟ್ಟಿಯನ್ನು ಸಲ್ಲಿಸಲಾಗಿದ್ದು, ಸೀಟು ಹಂಚಿಕೆಯ ಸೂಕ್ಷ್ಮ ವಿಚಾರಗಳ ಕುರಿತು ಎರಡೂ ಪಕ್ಷಗಳ ನಾಯಕರು ಚರ್ಚಿ ಸಿ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಹೆಚ್ಚಿನ ಸಂಖ್ಯೆಯ ಕ್ಷೇತ್ರಗಳನ್ನು ಕೇಳಿರುವುದು ಸಮಾಜವಾದಿ ಪಕ್ಷದ ವಲಯದಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ ಎನ್ನಲಾಗಿದೆ. 175ರಿಂದ 200 ಕ್ಷೇತ್ರಗಳಲ್ಲಿ ಸ್ಪರ್ಧಿಸುವಷ್ಟು ರಾಜಕೀಯ ಶಕ್ತಿ ಕಾಂಗ್ರೆಸ್ಗೆ ಇದೆಯೇ ಎಂಬ ಪ್ರಶ್ನೆಯೂ ಎದ್ದಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ಗೆ ಸುಮಾರು 60ರಿಂದ 70 ಸ್ಥಾನಗಳನ್ನು ನೀಡುವ ಬಗ್ಗೆ ಸಮಾಜವಾದಿ ಪಕ್ಷ ಚಿಂತನೆ ನಡೆಸುತ್ತಿದೆ.
ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಮಾತನಾಡಿ, ಚುನಾವಣೆಯಲ್ಲಿ ಅಭ್ಯರ್ಥಿಯ ಗೆಲ್ಲುವ ಸಾಮರ್ಥ್ಯವೇ ಸೀಟು ಹಂಚಿಕೆಯ ಪ್ರಮುಖ ಮಾನದಂಡ ಎಂದು ಹೇಳಿದ್ದಾರೆ. ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸುವುದೇ ಮೈತ್ರಿಕೂಟದ ಸಾಮೂಹಿಕ ಗುರಿಯಾಗಿದೆ. ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷಗಳು ‘ಇಂಡಿಯಾ’ ಮೈತ್ರಿಕೂಟವನ್ನು ಬಲಪಡಿಸಿ, ಬಿಜೆಪಿಯನ್ನು ಸೋಲಿಸಲು ಜನರಿಗೆ ಮನವರಿಕೆ ಮಾಡಿಕೊಡಲಿವೆ ಎಂದು ತಿಳಿಸಿದ್ದಾರೆ.
ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ನ ಚುನಾವಣಾ ಸಾಧನೆ 1989ರಿಂದ ಕುಸಿಯುತ್ತಾ ಬಂದಿದೆ. ಆ ವರ್ಷವೇ ಪಕ್ಷ ಕೊನೆಯ ಬಾರಿಗೆ ರಾಜ್ಯದಲ್ಲಿ ಅಧಿಕಾರಕ್ಕೇರಿತ್ತು. 2017ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಏಳು ಸ್ಥಾನಗಳನ್ನು ಗೆದ್ದಿದ್ದರೆ, 2022ರಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಿ ಕೇವಲ ಎರಡು ಸ್ಥಾನಗಳಿಗೆ ಸೀಮಿತವಾಗಿತ್ತು.
ಆದರೆ, 2024ರ ಲೋಕಸಭಾ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದೊಂದಿಗಿನ ಮೈತ್ರಿ ಕಾಂಗ್ರೆಸ್ನ ವಿಶ್ವಾಸವನ್ನು ಹೆಚ್ಚಿಸಿದೆ. ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಆರು ಲೋಕಸಭಾ ಸ್ಥಾನಗಳನ್ನು ಗೆದ್ದರೆ, ಸಮಾಜವಾದಿ ಪಕ್ಷ 37 ಸ್ಥಾನಗಳನ್ನು ಪಡೆದುಕೊಂಡಿತ್ತು. ಬಿಜೆಪಿ 33 ಸ್ಥಾನಗಳಿಗೆ ಸೀಮಿತವಾಗಿತ್ತು. ಈ ಫಲಿತಾಂಶದ ಹಿನ್ನೆಲೆಯಲ್ಲಿ 2027ರ ವಿಧಾನಸಭಾ ಚುನಾವಣೆಯಲ್ಲೂ ಮೈತ್ರಿಯನ್ನು ಮುಂದುವರಿಸುವ ನಿಟ್ಟಿನಲ್ಲಿ ಎರಡೂ ಪಕ್ಷಗಳ ನಡುವೆ ಮಾತುಕತೆ ನಡೆಯುತ್ತಿದೆ.
ಉತ್ತರ ಪ್ರದೇಶದಲ್ಲಿ ಒಟ್ಟು 403 ವಿಧಾನಸಭಾ ಕ್ಷೇತ್ರಗಳಿದ್ದು, ಕಾಂಗ್ರೆಸ್ನ 175ರಿಂದ 200 ಸ್ಥಾನಗಳ ಬೇಡಿಕೆಗೆ ಸಮಾಜವಾದಿ ಪಕ್ಷ ಹೇಗೆ ಪ್ರತಿಕ್ರಿಯಿಸಲಿದೆ ಎಂಬುದು ಕುತೂಹಲ ಮೂಡಿಸಿದೆ. ಅಂತಿಮ ಸ್ಥಾನ ಹಂಚಿಕೆ ಕುರಿತು ಎರಡೂ ಪಕ್ಷಗಳ ನಾಯಕರು ನಡೆಸುವ ಮಾತುಕತೆಯ ಬಳಿಕವಷ್ಟೇ ಸ್ಪಷ್ಟ ಚಿತ್ರಣ ಹೊರಬರಲಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




