ಮಕ್ಕಳನ್ನು ಶಾಲೆಗೆ ಕರೆತರಲು ಆದ್ಯತೆ ನೀಡಿ – ಡಾ.ಸೆಬಾಸ್ಟಿಯನ್ ಸೂಚನೆ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ಪ್ರವಾಹದಲ್ಲಿ ಮನೆಗಳನ್ನು ಕಳೆದುಕೊಂಡು ನಿರಾಶ್ರಿತರಾಗಿರುವ ಕುಟುಂಬಗಳು ತಮ್ಮ ಮಕ್ಕಳ ಶಿಕ್ಷಣದ ಬಗ್ಗೆ ಕಡಿಮೆ ಆದ್ಯತೆ ನೀಡುತ್ತಿರುವುದು ಕಂಡುಬಂದಿದೆ. ಆದ್ದರಿಂದ ಶಿಕ್ಷಣ ಇಲಾಖೆಯ ಅಧಿಕಾರಿಗಳು ಮಕ್ಕಳನ್ನು ಮರಳಿ ಶಾಲೆಗೆ ಕರೆತರಲು ವಿಶೇಷ ಆದ್ಯತೆ ನೀಡಬೇಕು ಎಂದು ಆಯೋಗದ ಅಧ್ಯಕ್ಷರಾದ ಡಾ.ಅಂತೋಣಿ ಸೆಬಾಸ್ಟಿಯನ್ ಸೂಚನೆ ನೀಡಿದರು.
ಪ್ರವಾಹದ ಹಿನ್ನೆಲೆಯಲ್ಲಿ ಮಕ್ಕಳ ಮೇಲೆ ಉಂಟಾಗಿರುವ ಪರಿಣಾಮಗಳ ಕುರಿತು ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಗುರುವಾರ (ಸೆ.೫) ನಡೆದ ಸಮಾಲೋಚನೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಎಸ್.ಎಸ್.ಎಲ್.ಸಿ ಮುಗಿಸಿದ ನಂತರ ಮಕ್ಕಳು ಏನು ಮಾಡುತ್ತಿದ್ದಾರೆ ಶಿಕ್ಷಣವನ್ನು ಬಿಟ್ಟು ದುಡಿಮೆಗೆ ಹೋಗುತ್ತಿದ್ದಾರೆಯೇ ಎಂಬ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಮಕ್ಕಳ ಹಿತರಕ್ಷಣೆ ನಿಟ್ಟಿನಲ್ಲಿ ಅಧಿಕಾರಿಗಳು ಯೋಚಿಸಬೇಕು.
ಪ್ರವಾಹ ಪೀಡಿತ ಪ್ರದೇಶಗಳಲ್ಲಿರುವ ಶಾಲಾ ಕಟ್ಟಡಗಳ ಹಾನಿ, ವಿದ್ಯಾರ್ಥಿಗಳ ಹಾಜರಾತಿ ಬಗ್ಗೆ ನಿರಂತರವಾಗಿ ಪರಿಶೀಲಿಸಬೇಕು.
ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕಗಳ ಕೊರತೆ ಇರುವುದರಿಂದ ಶೀಘ್ರದಲ್ಲೇ ಕೊಡುವ ವ್ಯವಸ್ಥೆ ಮಾಡಬೇಕುವೆಂದು ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರು.
ತಮ್ಮ ಜನ್ಮದಿನ ಆಚರಿಸುವ ಸಂದರ್ಭದಲ್ಲಿ ಕೆಲವರು ನಿರಾಶ್ರಿತರಿಗೆ ಪರಿಕರಗಳನ್ನು, ಮಕ್ಕಳಿಗೆ ಕಿಟ್ ಗಳನ್ನು ಕೊಟ್ಟು ಅವರೊಂದಿಗೆ ಸೆಲ್ಫಿ ತೆಗೆದುಕೊಳ್ಳುತ್ತಿರುವುದರಿಂದ ಮಕ್ಕಳ ಮನಸ್ಸಿನ ಮೇಲೆ ಕೆಟ್ಟ ಪರಿಣಾಮ ಉಂಟಾಗುತ್ತಿದ್ದು, ಇಂತಹ ಸನ್ನಿವೇಶಗಳಿಗೆ ಅವಕಾಶ ನೀಡಬಾರದು ಎಂದು ಡಾ.ಸೆಬಾಸ್ಟಿಯನ್ ತಿಳಿಸಿದರು.
ಪ್ರವಾಹದಿಂದ ಚಿಕ್ಕೋಡಿ ಮತ್ತು ಗೋಕಾಕ್ ತಾಲೂಕಿನ ಮಕ್ಕಳಿಗೆ ಹೆಚ್ಚಿನ ರೀತಿಯಲ್ಲಿ ತೊಂದರೆ ಆಗಿದ್ದು, ಈ ತಾಲೂಕಿನ ಮಕ್ಕಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲು ಮತ್ತು ಸ್ಯಾನಿಟರಿ ವ್ಯವಸ್ಥೆ ಮಾಡಬೇಕು ಎಂದು ಅವರು ತಿಳಿಸಿದರು.
ಮಕ್ಕಳ ಹಕ್ಕುಗಳ ರಕ್ಷಣೆ
ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಭಾರತಿ ಶೆಟ್ಟರ್ ಅವರು, ಬಾಲ್ಯವಿವಾಹ ತಡೆ ಹಾಗೂ ಮಕ್ಕಳ ಹಕ್ಕುಗಳ ರಕ್ಷಣೆಯ ಕುರಿತು ತಮ್ಮ ಅನುಭವಗಳನ್ನು ವಿವರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ವಿ.ಮುನ್ಯಾಳ ಅವರು, ಪ್ರವಾಹ ಬಾಧಿತ ಪ್ರದೇಶಗಳಲ್ಲಿ ಹೋಬಳಿವಾರು ಕಾರ್ಯಪಡೆಗಳನ್ನು ರಚಿಸಿಕೊಂಡು ವೈದ್ಯಕೀಯ ಸೇವೆ ಸಲ್ಲಿಸಲಾಗಿದೆ.
ಪ್ರತಿಯೊಂದು ಪರಿಹಾರ ಕೇಂದ್ರಗಳಲ್ಲಿ ವೈದ್ಯಕೀಯ ಸೌಲಭ್ಯ ಮತ್ತು ಔಷಧ ಸಾಮಗ್ರಿಗಳನ್ನು ಒದಗಿಸಲಾಗಿತ್ತು.
ಪ್ರವಾಹ ಪೀಡಿತ ಪ್ರತಿಯೊಂದು ಗ್ರಾಮಗಳಲ್ಲಿ, ಗಂಜಿ ಕೇಂದ್ರ ಗಳಲ್ಲಿ ಪ್ರವಾಹದ ನಂತರ ಕಾಣಿಸಿಕೊಳ್ಳಬಹುದಾದಂತಹ ಸಾಂಕ್ರಾಮಿಕ ರೋಗಗಳು ಹರಡದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಶಾಲಾ ಕಟ್ಟಡಗಳು ಸಂಪೂರ್ಣ ಶಿಥಿಲಗೊಂಡಿರುವ ಕಡೆ ಖಾಸಗಿ ಕಟ್ಟಡ ಮತ್ತು ಸಮುದಾಯ ಭವನಗಳನ್ನು ಬಾಡಿಗೆ ಪಡೆದುಕೊಂಡು ಶಾಲೆ ನಡೆಸಲಾಗುತ್ತಿದೆ ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳು ವಿವರಣೆ ನೀಡಿದರು.
೨೦೫ ಅಂಗನವಾಡಿ ಕಟ್ಟಡಗಳು ಸಂಪೂರ್ಣ ನಾಶವಾಗಿವೆ. ೭೦೫ ಅಂಗನವಾಡಿ ಕೇಂದ್ರಗಳು ಸಣ್ಣ ಮತ್ತು ದೊಡ್ಡ ಪ್ರಮಾಣದಲ್ಲಿ ದುರಸ್ತಿ ಗೊಂಡಿದ್ದು, ಎಲ್ಲಾ ಕಡೆ ತಾತ್ಕಾಲಿಕ ಅಂಗನವಾಡಿ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ತಿಳಿಸಿದರು.
ಸಭೆಯ ಹಿಂದಿನ ದಿನ ಚಿಕ್ಕೋಡಿ ಮತ್ತು ರಾಯಬಾಗ ತಾಲ್ಲೂಕಿನಲ್ಲಿ ಪ್ರವಾಹದಿಂದ ಬಾಧಿತಗೊಂಡಿರುವ ಮಕ್ಕಳನ್ನು ಭೇಟಿ ಮಾಡಿದ ಆಯೋಗದ ಅಧ್ಯಕ್ಷರು ಮತ್ತು ಸದಸ್ಯರು ಅಹವಾಲುಗಳನ್ನು ಆಲಿಸಿದರು.
ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಭಾರತಿ ವಾಳ್ವೇಕರ್, ಅಶೋಕ ಯರಗಟ್ಟಿ, ಮಕ್ಕಳ ಕಲ್ಯಾಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಆನಂದ ಲೋಬೋ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಭಾರತಿ ಶೆಟ್ಟರ್ , ಮಕ್ಕಳ ಕಲ್ಯಾಣ ಸಮಿತಿ, ಬಾಲ ನ್ಯಾಯ ಮಂಡಳಿಯ ಸದಸ್ಯರು, ಸರ್ಕಾರಿ, ಸರ್ಕಾರೇತರ ಸಂಸ್ಥೆಗಳ ಪದಾಧಿಕಾರಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ