*ಕಾರ್ಖಾನೆ ಪುನಶ್ಚೇತನಗೊಳಿಸುವುದೇ ಗುರಿ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್*

ಮಲಪ್ರಭಾ ಸಕ್ಕರೆ ಕಾರ್ಖಾನೆಯಲ್ಲಿ ಗತವೈಭವ ಮರುಕಳಿಸಲಿದೆ
ಪ್ರಗತಿವಾಹಿನಿ ಸುದ್ದಿ: ಮಲಪ್ರಭಾ ಸಕ್ಕರೆ ಕಾರ್ಖಾನೆಯನ್ನು ಪುನಶ್ಚೇತನಗೊಳಿಸುವುದೇ ನಮ್ಮ ಗುರಿ. ಕಾರ್ಖಾನೆಯ ಅಭಿವೃದ್ಧಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಚುನಾವಣೆ ಎಂದರೆ ಜಿದ್ದಾಜಿದ್ದಿ ಇದ್ದೇ ಇರುತ್ತದೆ. ಸೋಲು ಗೆಲುವು ಸಾಮಾನ್ಯ. ಸೋತಾಗ ಕುಗ್ಗಬಾರದು. ಗೆದ್ದಾಗ ಹಿಗ್ಗಬಾರದು ಎಂದು ಹೇಳಿದರು.
ಕಿತ್ತೂರು ಶಾಸಕ ಬಾಬಾ ಸಾಹೇಬ್ ಪಾಟೀಲ್, ಖಾನಾಪುರ ಶಾಸಕ ವಿಠ್ಠಲ ಹಲಗೇಕರ ಹಾಗೂ ವಿಧಾನ ಪರಿಷತ್ ಸದಸ್ಯರಾದ ಚನ್ನರಾಜ್ ಹಟ್ಟಿಹೊಳಿ ನೇತೃತ್ವದ ತಂಡ ಮಲಪ್ರಭಾ ಸಕ್ಕರೆ ಕಾರ್ಖಾನೆ ಚುನಾವಣೆಯಲ್ಲಿ ಭರ್ಜರಿ ಜಯ ದಾಖಲಿಸಿದ್ದು, ಕಾರ್ಖಾನೆಯ ಅಭಿವೃದ್ದಿಗೆ ನಮ್ಮ ತಂಡ ಹಗಲಿರುಳು ಶ್ರಮಿಸಲಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದರು.
ಮಲಪ್ರಭಾ ಸಕ್ಕರೆ ಕಾರ್ಖಾನೆ ಏಷ್ಯಾದಲ್ಲೇ ನಂಬರ್ ಒನ್ ಕಾರ್ಖಾನೆ ಆಗಿತ್ತು. ಹೊಸ ಆಡಳಿತ ಮಂಡಳಿ ಕಾರ್ಖಾನೆಯನ್ನು ಉತ್ತುಂಗಕ್ಕೆ ಕೊಂಡೊಯ್ಯಲಿದೆ. ಈ ಭಾಗದ ಜೀವನಾಡಿಯಾಗಿರುವ ಮಲಪ್ರಭಾ ಕಾರ್ಖಾನೆಯ ಅಭಿವೃದ್ದಿಯೇ ನಮ್ಮ ತಂಡದ ಗುರಿ ಎಂದರು.
ಜಿಲ್ಲೆಯ ಬಹುತೇಕ ಸಕ್ಕರೆ ಕಾರ್ಖಾನೆಗಳು ಸಾಲದಲ್ಲೇ ಇವೆ. 220 ಕೋಟಿ ಸಾಲವಿದ್ದು, ಈ ಸಾಲ ತೀರಿಸುವುದರ ಜೊತೆಗೆ ರೈತರ ಆಶೋತ್ತರಗಳನ್ನು ಈಡೇರಿಸಬೇಕಿದೆ. ಅಲ್ಲದೆ, ನೌಕರರ ಹಿತ ರಕ್ಷಣೆ ಕಾಯುವುದೇ ನಮ್ಮ ಗುರಿ. ಶೀಘ್ರವಾಗಿ ನೂತನ ಅಧ್ಯಕ್ಷರ ಆಯ್ಕೆ ನಡೆಯಲಿದೆ ಎಂದು ಹೇಳಿದರು.
ಚನ್ನರಾಜ್ ಹಟ್ಟಿಹೊಳಿ ಅವರು ಕಳೆದ 15 ವರ್ಷಗಳಿಂದ ಸಹಕಾರಿ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುಂದಿನ ದಿನಗಳಲ್ಲೂ ಸಹಕಾರಿ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲಿದ್ದಾರೆ ಎಂದರು.
ರೈತರ ಒಳಿಗೆ ಆದ್ಯತೆ : ಚನ್ನರಾಜ್ ಹಟ್ಟಿಹೊಳಿ
ಅಭೂತಪೂರ್ವ ಗೆಲುವನ್ನು ರೈತರು, ಶೇರುದಾರರು ನಮಗೆ ನೀಡಿದ್ದಾರೆ. ಕಾರ್ಖಾನೆಯನ್ನು ಸರಿಯಾಗಿ ನಡೆಸಿಕೊಂಡು ಹೋಗುವ ಜವಾಬ್ದಾರಿ ನಮ್ಮದು ಎಂದು ಚನ್ನರಾಜ್ ಹಟ್ಟಿಹೊಳಿ ಹೇಳಿದರು.
ಸಣ್ಣ ಹಾಗೂ ದೊಡ್ಡ ಪ್ರಮಾಣದ ರೈತರು ಕಾರ್ಖಾನೆಯಲ್ಲಿದ್ದಾರೆ. ರೈತರಿಗೆ ಕೊಟ್ಟಿರುವ ಭರವಸೆಗಳನ್ನು ಈಡೇರಿಸಲು ಕ್ರಮವಹಿಸಲಿದ್ದೇವೆ ಎಂದರು.
ಕಾರ್ಖಾನೆಯಲ್ಲಿ ಆಡಳಿತ ನಡೆಸಿರುವ ಅನುಭವ ಹೊಂದಿದ್ದು, ಕಳೆದ 6-7 ವರ್ಷಗಳಿಂದ ಕಾರ್ಖಾನೆ ಆಡಳಿತ ನೋಡುತ್ತಿದ್ದೇನೆ. ಪ್ರಣಾಳಿಕೆಯಲ್ಲಿ ಹೇಳಿದಂತೆ ಕಾರ್ಖಾನೆಗೆ ರೈತರು ಕಬ್ಬು ನೀಡಿದ 10 ರಿಂದ 15 ದಿನಗಳ ಒಳಗಾಗಿ ಬಿಲ್ ಪಾವತಿಸಲಾಗುವುದು ಎಂದು ಚನ್ನರಾಜ್ ಹಟ್ಟಿಹೊಳಿ ಹೇಳಿದರು.
ಎಲ್ಲರ ವಿಶ್ವಾಸಗಳಿಸುವುದೇ ನಮ್ಮ ಗುರಿ, ನಮ್ಮ ಪ್ಯಾನೆಲ್ ಮಾರ್ಗದರ್ಶನದಂತೆ ಆಡಳಿತ ನಡೆಸುವುದೇ ನಮ್ಮ ಗುರಿ. ಕಾರ್ಮಿಕರಿಗೆ, ನೌಕರರಿಗೆ ಸರಿಯಾದ ಸಮಯಕ್ಕೆ ವೇತನ ನೀಡುವ ಭರವಸೆ ನೀಡಿದರು.