
ಪ್ರಗತಿವಾಹಿನಿ ಸುದ್ದಿ; ಗದಗ: ವಿಧಾನಸಭಾ ಚುನಾವಣಾ ಅಖಾಡ ರಂಗೇರಿದ್ದು, ರಾಜಕೀಯ ಪಕ್ಷಗಳ ನಾಯಕರು ಪರಸ್ಪರ ವಾಕ್ಪ್ರಹಾರ ನಡೆಸಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪ್ರಧಾನಿ ಮೋದಿಯವರನ್ನು ವಿಷದ ಹಾವಿಗೆ ಹೋಲಿಕೆ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗದಗ ಜಿಲ್ಲೆ ಗಜೇಂದ್ರಗಡ ತಾಲೂಕಿನ ನರೇಗಲ್ ನಲ್ಲಿ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ಪ್ರಧಾನಿ ಮೋದಿಯವರು ವಿಷದ ಹಾವು ಇದ್ದಂತೆ. ಹಾವಿನ ವಿಷ ಸ್ವಲ್ಪ ತಾಗಿದರೂ ಸತ್ತು ಹೋಗ್ತಾರೆ. ಹಾಗಾಗಿ ರಾಜ್ಯಕ್ಕೆ ನುಗ್ಗಿರುವ ವಿಷದ ಹಾವು ಪ್ರಧಾನಿ ಮೋದಿಯವರನ್ನು ಹೊರಹಾಕಬೇಕು ಎಂದು ಹೇಳಿದ್ದಾರೆ.
ದೇಶಕ್ಕಾಗಿ ಬಿಜೆಪಿಯವರು ನೀಡಿದ ಕೊಡುಗೆಯೇನು? ಸ್ವಾತಂತ್ರ್ಯಕ್ಕಾಗಿ ಬಿಜೆಪಿಯವರ ಮನೆಯ ಒಂದು ನಾಯಿ ಕೂಡ ಸತ್ತಿಲ್ಲ ಎಂದು ಹಿಗ್ಗಾ ಮುಗ್ಗಾ ವಾಗ್ದಾಳಿ ನಡೆಸಿದ್ದಾರೆ. ಉಚಿತ ಅಕ್ಕಿ ಕೊಟ್ಟಿದ್ದು ಸೋನಿಯಾ ಗಾಂಧಿಯವರು, ನರೇಗಾ ಯೋಜನೆ ಜಾರಿಗೆ ತಂದಿದ್ದು ನಾವು ಎಂದು ಗುಡುಗಿದರು.
ಮುನ್ಸಿಪಾಲ್ಟಿಯಿಂದ ಹಿಡಿದು ಪ್ರಧಾನಿವರೆಗೂ ಎಲ್ಲವೂ ನೀವೆ ಆಗ್ತೀರಾ. ಮೇಯರ್, ಮುಖ್ಯಮಂತ್ರಿ, ಪ್ರಧಾನಮಂತ್ರಿ ಎಲ್ಲವೂ ತಾವೇ ಆಗಬೇಕು ಎಂಬ ಆಸೆ. ಆಸೆ ಬುರುಕ ಮೋದಿ ಎಂದು ಟಿಕಿಸಿದ್ದಾರೆ.
ದೇಶಲ್ಲಿ ಬದಲಾವಣೆ ತರಬೇಕಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಇಡೀ ದೇಶದಲ್ಲಿ ಅಧಿಕಾರಕ್ಕೆ ಬರುತ್ತದೆ. ಈ ನಿಟ್ಟಿನಲ್ಲಿ ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷನ್ನು ಗೆಲ್ಲಿಸಬೇಕು ಎಂದು ಕರೆ ನೀಡಿದರು.