*ಈ ಗೆಲುವು ಪ್ರಜಾಪ್ರಭುತ್ವ ರಕ್ಷಣೆಗೆ ಬರೆದ ಮುನ್ನುಡಿ; ಇದು ಕರ್ನಾಟಕದ ಜನರ ವಿಜಯ; AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ*
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು; ಒಗ್ಗಟ್ಟಿನಿಂದ ಕೆಲಸ ಮಾಡಿದ್ದಕ್ಕೆ ಈ ಗೆಲುವು ಲಭ್ಯವಾಗಿದೆ. ಇದು ಕೇವಲ ಒಬ್ಬ ವ್ಯಕ್ತಿಯ ವಿಜಯವಲ್ಲ, ಕರ್ನಾಟಕದ ರಾಜ್ಯದ ಜನತೆಯ ವಿಜಯ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ.
ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಐತಿಹಾಸಿಕ ಗೆಲುವು ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, 35 ವರ್ಷಗಳ ಬಳಿಕ ಕಾಂಗ್ರೆಸ್ ಭಾರಿ ಬಹುಮತಗಳೊಂದಿಗೆ ಗೆಲುವು ಸಾಧಿಸಿದೆ. ಬಿಜೆಪಿ ಮುಕ್ತ ದಕ್ಷಿಣ ಭಾರತವನ್ನಾಗಿ ಜನರೇ ಮಾಡಿದ್ದಾರೆ. ಒಗ್ಗಟ್ಟಿನಿಂದ ಎಲ್ಲರೂ ಕೆಲಸ ಮಾಡಿರುವುದು ಇದಕ್ಕೆ ಕಾರಣ. ಇದು ಸಾಮೂಹಿಕ ನಾಯಕತ್ವಕ್ಕೆ ಸಿಕ್ಕ ಜಯ ಎಂದರು.
ಇದೇ ಉತ್ಸಾಹವನ್ನು ಮುಂದೆಯೂ ಉಳಿಸಿಕೊಂಡು ಹೋಗಬೇಕು. ನಾವು ಕೊಟ್ಟ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಬೇಕು. ಗ್ಯಾರಂಟಿ ಅನುಷ್ಟಾನಕ್ಕೆ ಹೆಚ್ಚಿನ ಒತ್ತು ನೀಡಬೇಕು. ಮೊದಲ ಸಂಪುಟ ಸಭೆಯಲ್ಲಿಯೇ 5 ಗ್ಯಾರಂಟಿ ಯೋಜನೆ ಈಡೇರಿಸಬೇಕು ಎಂದು ರಾಜ್ಯ ಕಾಂಗ್ರೆಸ್ ನಾಯಕರಿಗೆ ಸೂಚಿಸಿದರು. ರಾಹುಲ್ ಗಾಂಧಿ ಮಾಡಿರುವ ಭಾರತ್ ಜೋಡೋ ಯಾತ್ರೆ ದೇಶದ ಜನತೆಗೆ ತಲುಪಿದೆ. ಈ ಗೆಲುವು ಪ್ರಜಾಪ್ರಭುತ್ವ ರಕ್ಷಣೆಗೆ ಬರೆದ ಮುನ್ನುಡಿ ಎಂಬ ಸಂದೇಶ ರವಾನೆಯಾಗಿದೆ. ಕರ್ನಾಟಕದ ಜನರ ಕಲ್ಯಾಣಕ್ಕೆ ನಾವೆಲ್ಲರೂ ಶ್ರಮಿಸುವುದಾಗಿ ತಿಳಿಸಿದರು.
ಕಾಂಗ್ರೆಸ್ 137 ಕ್ಷೇತ್ರಗಳಲ್ಲಿ ವಿಜಯ ಸಾಧಿಸಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ