ಪ್ರಗತಿವಾಹಿನಿ ಸುದ್ದಿ; ಕೋಲ್ಕತ್ತಾ: ವಲಸೆ ಕಾರ್ಮಿಕರ ರೈಲು ಬಂಗಾಳಕ್ಕೆ ಹೋಗಲು ಬಿಡುತ್ತಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾಡಿದ ಆರೋಪಕ್ಕೆ ತಿರುಗೇಟು ನೀಡಿರುವ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ಆರೋಪ ಸಾಬೀತು ಮಾಡಿ, ಇಲ್ಲವೇ ಕ್ಷಮೆಯಾಚಿಸಿ ಎಂದು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತಾಡಿದ ಸಿಎಂ ಮಮತಾ ಬ್ಯಾನರ್ಜಿ, ಪಶ್ಚಿಮ ಬಂಗಾಳ ಸರ್ಕಾರ ವಲಸೆ ಕಾರ್ಮಿಕರನ್ನು ಚೆನ್ನಾಗಿ ನೋಡಿಕೊಳ್ಳುತ್ತಿದೆ. ಅವರಿಗಾಗಿ ಪಶ್ಚಿಮ ಬಂಗಾಳದಲ್ಲಿ 711 ಕ್ಯಾಂಪಸ್ ತೆರೆಯಲಾಗಿದೆ. ವಲಸೆ ಕಾರ್ಮಿಕರ ಬಗ್ಗೆ ಸಲಹೆ ಕೊಡಲು ಕೇಂದ್ರಕ್ಕೆ ಹಕ್ಕಿಲ್ಲ. ಕೇಂದ್ರ ಸರ್ಕಾರ ರೈಲು ಬಿಡುವ ಬಗ್ಗೆ ಬರೀ ಸುಳ್ಳು ಹೇಳುತ್ತಿದೆ ಎಂದಿದ್ದಾರೆ.
ವಲಸೆ ಕಾರ್ಮಿಕರ ಬಗ್ಗೆ ಮಾತಾಡುವ ಹಕ್ಕು ಅಮಿತ್ ಶಾ ಅವರಿಗಿಲ್ಲ. ನಿನ್ನೆಯೊಂದೇ ದಿನ 16 ಮಂದಿ ವಲಸೆ ಕಾರ್ಮಿಕರು ರೈಲ್ವೆ ದುರಂತದಲ್ಲಿ ಸಾವನ್ನಪ್ಪಿದ್ದಾರೆ. ಮೊದಲು ಕೇಂದ್ರ ರೈಲ್ವೆ ಮಂತ್ರಿಯ ರಾಜೀನಾಮೆ ಪಡೆಯಲಿ ಎಂದು ಆಗ್ರಹಿಸಿದರು.
ಮಮತಾ ಬ್ಯಾನರ್ಜಿ ವಲಸೆ ಕಾರ್ಮಿಕರು ತುಂಬಿದ್ದ ರೈಲನ್ನು ತಮ್ಮ ರಾಜ್ಯದೊಳಗೆ ಬರಲು ಬಿಡದೆ ವಲಸೆ ಕಾರ್ಮಿಕರಿಗೆ ಅನ್ಯಾಯ ಎಸಗುತ್ತಿದ್ದಾರೆ. ವಲಸೆ ಕಾರ್ಮಿಕರಿಗೆ ಸಹಾಯ ಮಾಡುವ ಸಂಬಂಧ ಪಶ್ಚಿಮ ಬಂಗಾಳ ಸರ್ಕಾರದಿಂದ ಕೇಂದ್ರ ಸರ್ಕಾರಕ್ಕೆ ನಿರೀಕ್ಷಿಸಿದಷ್ಟು ಬೆಂಬಲ ಸಿಗುತ್ತಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ